RIPPONPETE ; ನಾಲ್ಕು ಜಿಲ್ಲೆಗಳನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಯ ಇಲ್ಲಿನ ವಿನಾಯಕ ವೃತ್ತದಲ್ಲಿ ಮಳೆಗಾಲದಲ್ಲಿ ಬಿದ್ದ ಹೊಂಡ ಗುಂಡಿಗೆ ಮಣ್ಣು ಮುಚ್ಚಿರುವ ಕಾರಣ ವಾಹನಗಳ ದಟ್ಟಣೆಯಿಂದಾಗಿ ಮಣ್ಣು ಮುಚ್ಚಲಾದ ರಸ್ತೆಗಳಲ್ಲಿರುವ ಗುಂಡಿಗಳೇ ವಾತಾವರಣ ಕಲುಷಿತಗೊಳಿಸಿದ್ದು ಹೊಂಡಗಳ ದೂಳಿನಿಂದ ವಾಯುಮಾಲಿನ್ಯದ ಪ್ರಮಾಣ ಹೆಚ್ಚಾಗಿದ್ದು ಉಸಿರಾಟಕ್ಕೆ ತೊಂದರೆ ಉಂಟಾಗುತ್ತಿದೆ ಎಂದು ಸಾರ್ವಜನಿಕರು ದೂರುವಂತಾಗಿದೆ.
ಭಾರಿ ಮಳೆಯಿಂದಾಗಿ ಇಲ್ಲಿನ ಶಿವಮೊಗ್ಗ, ಸಾಗರ, ಹೊಸನಗರ, ತೀರ್ಥಹಳ್ಳಿ ನಾಲ್ಕು ಸಂಪರ್ಕ ರಸ್ತೆಗಳು ಹೊಂಡ ಗುಂಡಿಗಳಿಂದ ತುಂಬಿ ಹೋಗಿದ್ದು ಡಾಂಬರ್ ಕಿತ್ತು ಬಂದಿದೆ. ಇದರಿಂದಾಗಿ ವಾಹನಗಳು ಸಂಚರಿಸುವಾಗ ವಿಪರೀತ ದೂಳು ಮೇಲೇಳುತ್ತಿದ್ದು ಉಸಿರಾಡಲೂ ಸಮಸ್ಯೆಯಾಗುವ ಮಟ್ಟದಲ್ಲಿ ವಾತಾವರಣ ಕಲುಷಿತಗೊಂಡಿದೆ. ರಸ್ತೆ ಗುಂಡಿಗಳಿಂದಾಗಿ ಗಾಳಿಯಲ್ಲಿ ತೇಲಾಡುವ ದೂಳಿನ ಕಣಗಳ ಪ್ರಮಾಣವು ಹೆಚ್ಚಾಗಿ ರಸ್ತೆ ಗುಂಡಿಗಳು ವಾಯುಮಾಲಿನ್ಯಕ್ಕೆ ಕಾರಣವಾಗಿವೆ.
ಒಟ್ಟಾರೆಯಾಗಿ ಹೊಸನಗರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಸಂಪರ್ಕದ ಲೋಕೋಪಯೋಗಿ ಇಲಾಖೆಯ ರಸ್ತೆಗಳು ಸಂಪೂರ್ಣ ಹೊಂಡ ಗುಂಡಿ ಬಿದ್ದಿದ್ದು ಹೊಂಡ ಗುಂಡಿ ಮುಚ್ಚುವ ಕಾರ್ಯ ನಡೆಯುತ್ತಿದ್ದರೂ ಕೂಡಾ ರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿ ಮಾತ್ರ ಹೊಂಡ-ಗುಂಡಿಗೆ ಮಣ್ಣು ಹಾಕಿ ಮುಚ್ಚಿದ್ದರಿಂದ ವೇಗವಾಗಿ ಸಂಚರಿಸುವ ಭಾರಿ ವಾಹನಗಳ ಮತ್ತು ಪ್ರಯಾಣಿಕರ ಬಸ್ ಸೇರಿದಂತೆ ಕಾರುಗಳು ಎಬ್ಬಿಸುವ ದೂಳಿನಿಂದಾಗಿ ಪ್ರಯಾಣಿಕರು ಕೆಲ ಸಮಯ ಕಣ್ಣು, ಮೂಗು ಮುಚ್ಚಿಕೊಂಡು ನಿಂತಲ್ಲೇ ನಿಲ್ಲುವಂತಾಗಿದೆ.
ಇನ್ನೂ ಈ ವಾಹನಗಳ ಹಿಂದೆ ಹೋಗುವ ದ್ವಿಚಕ್ರವಾಹನಗಳು ಮತ್ತು ಆಟೋಗಳ ಚಾಲಕರು ಶಾಲಾ, ಕಾಲೇಜ್ ವಿದ್ಯಾರ್ಥಿಗಳು ಈ ದೂಳಿನಿಂದ ಕಣ್ಣು ಮುಚ್ಚಿಕೊಂಡು ಎದುರುಗಡೆಯಿಂದ ಬರುವ ವಾಹನಗಳಿಗೆ ಡಿಕ್ಕಿ ಹೊಡೆಯುವ ಸ್ಥಿತಿ ಸಹ ನಿರ್ಮಾಣವಾಗಿದೆ.
ಇನ್ನಾದರೂ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯವರು ಇತ್ತ ಗಮನಹರಿಸಿ ತೀರ್ಥಹಳ್ಳಿ-ಸಾಗರ ರಸ್ತೆಯಲ್ಲಿ ಅಂಗಲೀಕರಣ ಕಾಮಗಾರಿ ಕೆಲಸವನ್ನು ಮಳೆಗಾಲದ ಕಾರಣ ನಿಲ್ಲಿಸಿದ್ದು ಇದರಿಂದ ಹೊಂಡ-ಗುಂಡಿ ದೂಳು ವಾಹನಗಳ ವೇಗದಿಂದ ಮೇಲೇಳೂವಂತಾಗಿದ್ದು ತಕ್ಷಣವೇ ಗುತ್ತಿಗೆದಾರರಿಗೆ ನೋಟಿಸ್ ನೀಡಿ ಅಪೂರ್ಣ ಕಾಮಗಾರಿಯನ್ನು ಪೂರ್ಣಗೊಳಿಸಿ ವಾಯುಮಾಲಿನ್ಯ ಮುಕ್ತಗೊಳಿಸಲು ಮುಂದಾಗುವರೇ ಕಾದುನೋಡಬೇಕಾಗಿದೆ.