ಭೂತಾಯಿಗೆ ಸೀಮಂತದ ಸಂಭ್ರಮ

Written by malnadtimes.com

Published on:

RIPPONPETE ; ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭೂಮಿ ಹುಣ್ಣಿಮೆ ಹಬ್ಬದ ಅಂಗವಾಗಿ ಭೂತಾಯಿಗೆ ಸೀಮಂತ ಕಾರ್ಯವನ್ನು ರೈತ ಕುಟುಂಬದವರು ಗುರುವಾರ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಿದರು.

WhatsApp Group Join Now
Telegram Group Join Now
Instagram Group Join Now

ಹಬ್ಬದ ಹಿಂದಿನ ದಿನ ಕಾಡು ಮೇಡು ಸುತ್ತಿ ಬೆರಕೆ ಸೊಪ್ಪು ತರಕಾರಿಗಳನ್ನು ತಂದು ವಿವಿಧ ಬಗೆಯ ಭಕ್ಷ್ಯಗಳನ್ನು ಸಿದ್ದಪಡಿಸಿ ಬಯಕೆಯ ಕಡಬು, ಪಾಯಸ, ಹೋಳಿಗೆ ಬುತ್ತಿ, ಕೋಸಂಬರಿ ಮತ್ತಿತರ ಪದಾರ್ಥಗಳನ್ನು ಬೆಳ್ಳಂಬೆಳಗ್ಗೆ ಹಸೆ ಚಿತ್ತಾರ ಬಿಡಿಸಿದ ಭೂಮಣ್ಣಿ ಬುಟ್ಟಿಯಲ್ಲಿ ಖಾದ್ಯಗಳನ್ನು ತುಂಬಿಕೊಂಡು ಕುಟುಂಬ ಸಮೇತರಾಗಿ ಹೊಲ-ಗದ್ದೆಗಳಿಗೆ ತೆರಳಿ ಪೂಜೆ ಸಲ್ಲಿಸುವುದು ಈ ಪೂರ್ವಕಾಲದಿಂದ ಬಂದಂತಹ ವಾಡಿಕೆ.

ಸದಾನಂದ ಶಿವಯೋಗಾಶ್ರಮದ ಮೂಲೆಗದ್ದೆ ಮಠದಲ್ಲಿ ಅಭಿನವ ಚನ್ನಬಸವ ಮಹಾಸ್ವಾಮಿಜಿ ತಮ್ಮ ಜಮೀನಿನಲ್ಲಿ ಭೂತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು.

ಮನೆಯ ಹಿರಿಯ ಸದಸ್ಯ ಭೂತಾಯಿಗೆ ಪೂಜೆ ಸಲ್ಲಿಸಿದ ನಂತರ ಪ್ರಸಾದ ರೂಪದಲ್ಲಿ ತಮ್ಮ ಜಮೀನಿನ ಸುತ್ತಲಿನ ಗಡಿ ಭಾಗದಲ್ಲಿ ಚರಗ ಚೆಲ್ಲುವ ಮೂಲಕ ಭೂತಾಯಿ ಬೆಳೆದ ಫಸಲಿನ ರಕ್ಷಣೆಗೆ ಗಡಿಕಾಯುವ ದೇವರ ಮೊರೆ ಹೋಗುವುದ ಈ ಹಬ್ಬದ ವಿಶೇಷ. ಹಾಗೆಯೇ ಕುಟುಂಬ ಸದಸ್ಯರೊಡಗೂಡಿ ಜಮೀನಿನಲ್ಲಿ ಎಲ್ಲರು ಕುಳಿತು ಊಟವನ್ನು ಸವಿದು ನಂತರ ತಾವು ಹೊತ್ತು ತಂದ ಭೂಮಣ್ಣಿ ಬುಟ್ಟಿಯನ್ನು ಹೊತ್ತು ಹಿಂತಿರುಗುತ್ತಾರೆ.

ಮಾಜಿ ಸಚಿವ ಹರತಾಳು ಹಾಲಪ್ಪನವರು ತಮ್ಮ ಸ್ವಗ್ರಾಮದ ಹರತಾಳುವಿನಲ್ಲಿ ಭೂಮಣ್ಣಿ ಹಬ್ಬದ ದಿನ ಜಮೀನಿಗೆ ಭೂಮಣ್ಣಿ ಬುಟ್ಟಿ ಹೊತ್ತು ನಿಗದಿ ಪಡಿಸಲಾದ ಜಾಗದಲ್ಲಿ ಜೇಡಿ ಕೆಮ್ಮಣ್ಣು ಹಾಗೂ ಮಾವಿನ ತೋರಣ ಬಾಳೆ, ಕಬ್ಬಿನ ಸುಳಿಯ ಅಲಂಕಾರ ಮಾಡಿದ ಸ್ಥಳದಲ್ಲಿ ಬಿಳಿ ಹಸಿರು ಕೆಂಪು ಬಣ್ಣದ ರವಿಕೆಕಣ ಸಸಿಗೆ ಸುತ್ತಿಸಿ ಅರಿಶಿಣ ಕುಂಕುಮ ಶ್ರೀಗಂಧ ಲೇಪನ ಮಾಡಿ ಭಕ್ತಯಿಂದ ಪೂಜೆ ಸಲ್ಲಿಸಿ ಕುಟಂಬ ಸದಸ್ಯರೊಂದಿಗೆ ಮತ್ತು ಅಭಿಮಾನಿ ಬಳಗದವರೊಂದಿಗೆ ಕುಳಿತು ಊಟವನ್ನು ಸವಿದರು.

ರಿಪ್ಪನ್‌ಪೇಟೆ ಸಮೀಪದ ಹರತಾಳು ಗ್ರಾಮದಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಇಂದು ಭೂಮಿ ಹುಣ್ಣಿಮೆ ಹಬ್ಬದ ಅಂಗವಾಗಿ ತಮ್ಮ ಜಮೀನಿನಲ್ಲಿ ಭೂತಾಯಿಗೆ ಪೂಜೆ ಸಲ್ಲಿಸಿದರು‌.

ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಭೂಮಿ ಹುಣ್ಣಿಮೆಯ ದಿನ ಸಂವೃದ್ದವಾಗಿ ಬೆಳೆದ ಫಸಲು ಗರ್ಭ ಧರಿಸಿದ್ದು ಈ ದಿನದಲ್ಲಿ ನಮ್ಮ ಹಿಂದಿನವರು ಭೂಮಿ ತಾಯಿಗೆ ಸೀಮಂತ ಕಾರ್ಯವನ್ನಾಗಿ ಮಾಡಿಕೊಂಡು ಬಂದಂತಹ ಹಬ್ಬವಾಗಿದೆ ಎಂದರು.

ಈ ಸಂದರ್ಭದಲ್ಲಿ ಗಣಪತಿ, ರಾಮಚಂದ್ರ ಹರತಾಳು, ಯೋಗೇಂದ್ರಗೌಡ, ಗಣೇಶ, ಅಭಿಲಾಷ ಚಿಕ್ಕಮಣತಿ, ಸುಂದರೇಶ್, ಸುರೇಶ ಹರತಾಳು, ಗೋಪಾಲಕೃಷ್ಣ ಹರತಾಳು, ಜಿ.ಡಿ.ಮಲ್ಲಿಕಾರ್ಜುನ, ರಾಘವೇಂದ್ರ ಭಂಡಾರಿ, ನಾಗೇಂದ್ರ ಇನ್ನಿತರರು ಹಾಜರಿದ್ದರು.
  

Leave a Comment