ರಿಪ್ಪನ್‌ಪೇಟೆ ; ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ದೈಹಿಕ ಶಿಕ್ಷಕರು ವರ್ಗಾವಣೆಗೊಂಡು ಮೂರು ವರ್ಷ ಕಳೆದರೂ, ಇನ್ನೂ ಶಿಕ್ಷಕರನ್ನು ನೇಮಕ ಮಾಡದ ಕಾರಣ ವಿದ್ಯಾರ್ಥಿಗಳು ತಮ್ಮ ಪಾಡಿಗೆ ತಾವೇ ಕ್ರೀಡೆಗಳ ಅಭ್ಯಾಸ ಮಾಡುವಂತಾಗಿದೆ.
ಹೌದು, ಇದು ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ಜಿಲ್ಲೆಯ ಶಾಲೆಯೊಂದರ ಪರಿಸ್ಥಿತಿ. ಈ ಶಾಲೆಯಲ್ಲಿ 8 ರಿಂದ 10ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ಪ್ರಸ್ತುತ 430 (ಕಳೆದ ವರ್ಷ 500) ವಿದ್ಯಾರ್ಥಿಗಳಿದ್ದು, ಕಳೆದಮಮೂರು ವರ್ಷಗಳಿಂದ ದೈಹಿಕ ಶಿಕ್ಷಣದ ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳು ದೈಹಿಕ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ಕುರಿತು ಹಲವು ಬಾರಿ ಶಾಲಾಭಿವೃದ್ಧಿ ಸಮಿತಿಯವರ ಮೂಲಕ ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ಮನವಿ ನೀಡಿದ್ದರೂ ಯಾವ ಪ್ರಯೋಜವಿಲ್ಲ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ನಮ್ಮ ಶಾಲೆಯ ಮಕ್ಕಳಿಗೆ ಕ್ರೀಡಾಕೂಟಗಳಲ್ಲಿ ಆಸಕ್ತಿ ಇದ್ದು, ಅವರಿಗೆ ಸೂಕ್ತ ಮಾರ್ಗದರ್ಶನವಿಲ್ಲದೆ ಅವರ ಕ್ರೀಡಾ ಕನಸುಗಳು ಕಮರಿ ಹೋಗುತ್ತಿವೆ. ಆದರೂ ಛಲ ಬಿಡದ ಮಕ್ಕಳು ವಿವಿಧ ಕ್ರೀಡಾ ಪುಸ್ತಕಗಳನ್ನು ಓದಿ ತಾವೇ ವಾಲಿಬಾಲ್, ಕಬಡ್ಡಿ, ಖೋ-ಖೋ ಕ್ರೀಡೆಗಳನ್ನು ಅಭ್ಯಾಸ ಮಾಡುತ್ತಿದ್ದಾರೆ. ನಾವು ಹಲವು ಬಾರಿ ಉಪನಿರ್ದೇಶಕರು, ಶಾಸಕರನ್ನು ಹಾಗೂ ಜಿಪಂ ಸಿಇಒರನ್ನು ಭೇಟಿ ಮಾಡಿ ನಮ್ಮ ಶಾಲೆಗೆ ದೈಹಿಕ ಶಿಕ್ಷಕರನ್ನು ನೇಮಕ ಮಾಡಿಕೊಡುವಂತೆ ಮನವಿ ಮಾಡಿದ್ದೇವೆ. ಆದರೆ, ಇದುವರೆಗೂ ಒಬ್ಬ ಶಿಕ್ಷಕರನ್ನೂ ನೇಮಕ ಮಾಡಿಲ್ಲ ಎಂದು ಎಸ್‌ಡಿಎಂಸಿ ಸದಸ್ಯರು ಮಾಧ್ಯಮದವರ ಮುಂದೆ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
‘ನಮ್ಮ ಶಾಲೆಯಲ್ಲಿ ಈ ವರ್ಷದ 430 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಷ್ಟೊಂದು ಮಕ್ಕಳಿದ್ದರೂ ಕೂಡ ಸತತವಾಗಿ ಮೂರು ವರ್ಷಗಳಿಂದ ದೈಹಿಕ ಶಿಕ್ಷಕರನ್ನು ನೇಮಿಸಿಲ್ಲ. ನಾವು ಈಗಾಗಲೇ ಬಿಇಒ ಹಾಗೂ ಡಿಡಿಪಿಐ ರವರಿಗೆ ಹತ್ತಾರು ಬಾರಿ ಮನವಿಗಳನ್ನು ಸಲ್ಲಿಸಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲ. 430 ಮಕ್ಕಳಿಗೆ ಒಬ್ಬರೇ ಹಿಂದಿ ಶಿಕ್ಷಕರಿದ್ದಾರೆ. ಈ ಶಾಲೆಗೆ ಡಿ ದರ್ಜೆ ಹುದ್ದೆಗಳಿಲ್ಲ. ಎಸ್‌ಡಿಎಂಸಿಯಿಂದ ಡಿ ದರ್ಜೆ ಹುದ್ದೆ ನೇಮಕ ಮಾಡಿಕೊಳ್ಳಲಾಗಿದೆ. ವಿಜ್ಞಾನ ಲ್ಯಾಬ್ ಇದ್ದರೂ ಕೂಡ ಅಲ್ಲಿ ಅಸಿಸ್ಟೆಂಟ್ ಇಲ್ಲ. ಉರ್ದು ಕಲಾವಿಭಾಗಕ್ಕೆ ಶಿಕ್ಷಕರಿಲ್ಲ. ಇಷ್ಟೆಲ್ಲ ಕೊರತೆಯ ನಡುವೆಯೂ ಎಸ್‌ಡಿಎಂಸಿಯು ಇರುವ ಶಿಕ್ಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೆಚ್ಚು ಕೆಲಸ ಮಾಡಿಸಿಕೊಳ್ಳುತ್ತಿದೆ.’
– ಚಂದ್ರಪ್ಪ ಡಿ., ಎಸ್‌ಡಿಎಂಸಿ ಅಧ್ಯಕ್ಷ
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಪ್ಪ ಡಿ, ಸದಸ್ಯರಾದ ಮಹಮ್ಮದ್ ಹನೀಫ್,
ಪುಣ್ಣೋಜಿರಾವ್, ಈಶ್ವರ, ಇತರ ಸದಸ್ಯರು ಇದ್ದರು.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.