ರಿಪ್ಪನ್‌ಪೇಟೆ ; ಸ್ಥಳೀಯ ಗ್ರಾಮ ಪಂಚಾಯ್ತಿ ಸರಿಯಾದ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸದೇ ನಿರ್ಲಕ್ಷ್ಯ ವಹಿಸಿರುವುದಕ್ಕೆ ಇಲ್ಲಿನ ವಿನಾಯಕ ವೃತ್ತದಲ್ಲಿನ ತೀರ್ಥಹಳ್ಳಿ ರಸ್ತೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಬೀದಿ ದೀಪಗಳಿಲ್ಲದೆ ಕತ್ತಲೆಯಲ್ಲಿ ಸಾರ್ವಜನಿಕರು ಓಡಾಡುವಂತಾಗಿದೆ.
ಇನ್ನೂ ರಾಜ್ಯ ಹೆದ್ದಾರಿಯ ಶಿವಮೊಗ್ಗ – ಕುಂದಾಪುರ, ರಿಪ್ಪನ್‌ಪೇಟೆ – ತೀರ್ಥಹಳ್ಳಿ ಸಂಪರ್ಕದ ರಸ್ತೆಗಳು ಆಳು ಗಾತ್ರದ ಹೊಂಡ-ಗುಂಡಿ ಬಿದ್ದು ಶಾಲಾ-ಕಾಲೇಜ್ ವಿದ್ಯಾರ್ಥಿಗಳು ಗರ್ಭಿಣಿಯರು, ಬಾಣಂತಿಯರು, ವಯೋವೃದ್ದರು, ಅನಾರೋಗ್ಯ ಪೀಡಿತರು ವಾಹನಗಳಲ್ಲಿ ಬಂದರೆ ನರಕಕ್ಕೆ ಹೋಗುವುದು ಗ್ಯಾರಂಟಿ ಎಂಬಂತಾಗಿದೆ.
ಇನಹ ಬೀದಿ ದೀಪಗಳಿಲ್ಲದೆ ರಾತ್ರಿ ಪಾಳಿಯ ಪೊಲೀಸರು, ವಾಹನ ಸವಾರರು ಹರಸಾಹಾಸ ಪಡವಂತಾಗಿದೆ. ಈಗ ಮಳೆಗಾಲದ ಸಮಯವಾದ್ದರಿಂದ ಹುಳ-ಹಪ್ಪಟೆಗಳು ಹೆಚ್ಚಾಗಿದ್ದು ಕತ್ತಲಲ್ಲಿ ಏನಾದರೂ ಕಡಿತದರೆ ಗತಿಯಾರು? ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುವಂತಾಗಿದೆ. ಇದರೊಂದಿಗೆ ರಾಜ್ಯ ಹೆದ್ದಾರಿಯಾದ ಶಿವಮೊಗ್ಗ – ಕುಂದಾಪುರ ಮಾರ್ಗದ ಸೂಡೂರಿನಿಂದ ಹಿಡಿದು ಹೊಸನಗರದವರೆಗೂ ಹಾಗೂ ರಿಪ್ಪನ್‌ಪೇಟೆಯಿಂದ ತೀರ್ಥಹಳ್ಳಿ-ಕೋಣಂದೂರು ರಸ್ತೆ ಸಹ ಹೊಂಡ ಗುಂಡಿಯಿಂದಾಗೆ ವಾಹನಸವಾರರು ಜೀವ ಭಯದಲ್ಲಿ ಹೊಂಡ-ಗುಂಡಿ ತಪ್ಪಿಸಿಕೊಂಡು ಸಂಚಾರ ಮಾಡುವುದೇ ಕಷ್ಟಕರವಾಗಿದೆ ಎಂದು ವಾಹನ ಚಾಲಕರು ಮಾಧ್ಯಮದೊಂದಿಗೆ ಮಾತನಾಡಿ, ತಮ್ಮ ಅಸಹಾಯಕತೆಯನ್ನು ತೋಡಿಕೊಂಡರು.
ಗ್ರಾಮ ಪಂಚಾಯಿತಿಯ ಕೂದಲೆಳೆ ಅಂತರದಲ್ಲಿರುವ ವಿನಾಯಕ ವೃತ್ತದಲ್ಲಿ ಬೀದಿದೀಪ ಇಲ್ಲದೆ ಇದ್ದು ಇನ್ನಿತರ ವಾರ್ಡ್‌ಗಳಲ್ಲೂ ಸಹ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮಾಡಳಿತ ಬೀದಿ ದೀಪ ಅಳವಡಿಕೆಗೆ ಟೆಂಡರ್ ಕರೆದು ನಿರ್ವಹಣೆಗೆ ವಹಿಸಲಾದರೂ ಕೂಡಾ ಸಮರ್ಪಕವಾದ ನಿರ್ವಹಣೆ ಇಲ್ಲದೆ ಜನತೆ ಕತ್ತಲಲ್ಲಿ ಕಾಲಕಳೆಯುವಂತಾಗಿದೆ ಎಂದು ಸಾರ್ವಜನಿಕರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
ಇನ್ನೂ ಲೋಕೋಪಯೋಗಿ ಇಲಾಖೆಯವರು ಹೆದ್ದಾರಿಯಲ್ಲಿ ಹೊಂಡ-ಗುಂಡಿ ಮುಚ್ಚುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಕೇಳಿದರೆ ಖೋಖೋ ಆಟದಂತೆ ನಮಗೆ ಗೊತ್ತಿಲ್ಲ ಸರ್ಕಾರದಿಂದ ಅನುದಾನ ಬಂದಿಲ್ಲ ಎಂಬ ಸಬೂಬು ಹೇಳಿಕೊಂಡು ಕಾಲಹರಣ ಮಾಡುತ್ತಿದ್ದಾರೆ.
ಇನ್ನೂ ಇಲ್ಲಿನ ವಿನಾಯಕ ವೃತ್ತದಲ್ಲಿ ಹೊಂಡ-ಗುಂಡಿ ಬಿದ್ದು ಮಳೆಯ ನೀರು ಗುಂಡಿಯಲ್ಲಿ ತುಂಬಿಕೊಂಡು ವಾಹನಗಳ ಓಡಾಟದಿಂದಾಗಿ ಕೆಸರು ನೀರಾಗಿದ್ದು ಶಾಲಾ-ಕಾಲೇಜ್ ವಿದ್ಯಾರ್ಥಿಗಳು ಮತ್ತು ನೌಕರವರ್ಗ ಕಛೇರಿಗೆ ತೆರಳಲು ಬಂದರೆ ಕಲುಷಿತ ನೀರಿನಿಂದ ಸ್ನಾನ ಮಾಡಿದಂತಾಗಿ ಆ ದಿನ ರಜೆ ಹಾಕುವುದು ಅನಿರ್ವಾಯವಾಗಿದೆ. ಇನ್ನಾದರೂ ಸಂಬಂಧಪಟ್ಟ ಇಲಾಖೆಯವರು ಮತ್ತು ಗ್ರಾಮಾಡಳಿತ ಇತ್ತ ಗಮನಹರಿಸಿ ಹೊಂಡ ಗುಂಡಿ ಮುಚ್ಚುವತ್ತ ಬೀದಿ ದೀಪ ಅಳವಡಿಸುವತ್ತ ಗಮನಹರಿಸುವರೇ ಕಾದುನೋಡುವಂತಾಗಿದೆ.
ಸಾಗರ-ತೀರ್ಥಹಳ್ಳಿ ಸಂಪರ್ಕದ ತಲಾ ಒಂದು ಕಿ.ಮೀ. ಚತುಷ್ಪರ್ಥ ರಸ್ತೆ ಕಾಮಗಾರಿಗೆ ಸರ್ಕಾರದಿಂದ 5.30 ಕೋಟಿ ರೂ. ಅನುದಾನ ಬಿಡುಗಡೆಯಾಗಿ ಮೂರು ವರ್ಷಗಳಾದರೂ ಕೂಡಾ ಕಾಮಗಾರಿ ಅಪೂರ್ಣವಾಗಿಯೇ ಉಳಿದಿದೆ. ರಸ್ತೆ ಕಾಮಗಾರಿ ಪೂರ್ಣಗೊಂಡರೂ ಕೂಡಾ ಪಾದಚಾರಿಗಳು ಸಂಚರಿಸುವ ರಸ್ತೆಗೆ ಇಂಟರ್‌ಲಾಕ್ ಅಳವಡಿಸಬೇಕಾಗಿದ್ದು ಅದನ್ನು ಸಂಪೂರ್ಣ ಕಳಪೆ ಗುಣಮಟ್ಟದಲ್ಲಿ ಮಾಡಲಾಗುತ್ತದೆಂಬ ದೂರಿನನ್ವಯ ಶಾಸಕ ಗೋಪಾಲಕೃಷ್ಣ ಬೇಳೂರು ಕಾಮಗಾರಿ ಮಾಡದಂತೆ ಗುತ್ತಿಗೆದಾರನಿಗೆ ಸೂಚಿಸಿದ ಪರಿಣಾಮ ಆ ಕಾಮಗಾರಿ ಅರ್ಧಕ್ಕೆ ನಿಲ್ಲುವಂತಾಗಿದ್ದು ಶಾಲಾ-ಕಾಲೇಜ್ ವಿದ್ಯಾರ್ಥಿಗಳು ರಸ್ತೆಯಲ್ಲಿ ಓಡಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.