ಹೊಸನಗರ

ಆಚರಣೆಗಳು ಸಂಸ್ಕಾರ ಮತ್ತು ಸಂಸ್ಕೃತಿಯ ಪ್ರಮುಖ ಭಾಗ: ಕುಮಾರ ದೇವರು

ಹೊಸನಗರ : ಭಾರತೀಯರ ಜೀವನ ಪದ್ಧತಿಯಲ್ಲಿ ಪುರಾತನ ಆಚಾರ-ವಿಚಾರಗಳು ಹಾಗೂ ಸಂಪ್ರದಾಯಗಳಿಗೆ ವಿಶೇಷ ಸ್ಥಾನವಿದ್ದು, ಅವು ಸಂಸ್ಕಾರ ಮತ್ತು ಸಂಸ್ಕೃತಿಯ ಅವಿಭಾಜ್ಯ ಅಂಗಗಳಾಗಿವೆ ಎಂದು ಬಟ್ಟೆಮಲ್ಲಪ್ಪದ ಶ್ರೀ ವ್ಯಾಸ ಮಹರ್ಷಿ ಗುರುಕುಲಾಶ್ರಮದ ಕುಮಾರ ದೇವರು ಹೇಳಿದರು.

InShot 20260920 220635261

ಹೊಸನಗರ : ಭಾರತೀಯರ ಜೀವನ ಪದ್ಧತಿಯಲ್ಲಿ ಪುರಾತನ ಆಚಾರ-ವಿಚಾರಗಳು ಹಾಗೂ ಸಂಪ್ರದಾಯಗಳಿಗೆ ವಿಶೇಷ ಸ್ಥಾನವಿದ್ದು, ಅವು ಸಂಸ್ಕಾರ ಮತ್ತು ಸಂಸ್ಕೃತಿಯ ಅವಿಭಾಜ್ಯ ಅಂಗಗಳಾಗಿವೆ ಎಂದು ಬಟ್ಟೆಮಲ್ಲಪ್ಪದ ಶ್ರೀ ವ್ಯಾಸ ಮಹರ್ಷಿ ಗುರುಕುಲಾಶ್ರಮದ ಕುಮಾರ ದೇವರು ಹೇಳಿದರು.

WhatsApp Group Join Now
Telegram Group Join Now
Instagram Group Join Now

ಕೋಡೂರು ಬ್ಲಾಸಂ ಅಕಾಡೆಮಿ ಹಾಗೂ ಬಟ್ಟೆಮಲ್ಲಪ್ಪದ ಶ್ರೀ ವ್ಯಾಸ ಮಹರ್ಷಿ ಗುರುಕುಲಾಶ್ರಮದ ಸಹಯೋಗದಲ್ಲಿ ಕೋಡೂರಿನಲ್ಲಿ ಆಯೋಜಿಸಿದ್ದ ‘ಶ್ರೀಕೃಷ್ಣ ಲೀಲಾ ವೈಭವ’ ಮಕ್ಕಳ ಶ್ರೀಕೃಷ್ಣ ವೇಷ ಸ್ಪರ್ಧೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಆಧುನಿಕತೆಯ ನೆಪದಲ್ಲಿ ನಮ್ಮ ಪಾರಂಪರಿಕ ಆಚರಣೆಗಳು ಮತ್ತು ಹಬ್ಬ-ಹರಿದಿನಗಳನ್ನು ಕಡೆಗಣಿಸುವ ಮನೋಭಾವ ಯುವಜನರಲ್ಲಿ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ಪೋಷಕರಲ್ಲಿಯೂ ಇಂತಹ ಮನಸ್ಥಿತಿ ಕಂಡುಬರುತ್ತಿದ್ದು, ಇದರಿಂದ ಮಕ್ಕಳಿಗೆ ಭಾರತೀಯ ಸಂಸ್ಕಾರ ಮತ್ತು ಪರಂಪರೆಯ ಮೌಲ್ಯಗಳನ್ನು ಪರಿಚಯಿಸುವಲ್ಲಿ ಹಿನ್ನಡೆಯಾಗುತ್ತಿದೆ ಎಂದು ಅವರು ಹೇಳಿದರು.

ಭಾರತೀಯ ಋಷಿ ಪರಂಪರೆಯಿಂದ ಬಂದ ಹಲವು ವಿಚಾರಗಳು ಪುರಾಣಗಳು ಮತ್ತು ಪುಣ್ಯಕಥೆಗಳ ಮೂಲಕ ತಲೆಮಾರುಗಳಿಂದ ಪರಿಚಿತವಾಗಿವೆ. ಅವುಗಳಲ್ಲಿನ ಹಲವು ಅಂಶಗಳಿಗೆ ಆಧುನಿಕ ವಿಜ್ಞಾನದಲ್ಲಿಯೂ ಸಮಾನವಾದ ವಿವರಣೆಗಳು ದೊರೆಯುತ್ತವೆ. ಇಂತಹ ಪರಂಪರೆಯನ್ನು ಕೇವಲ ಹಳೆಯದು ಎಂಬ ಕಾರಣಕ್ಕೆ ಪ್ರಶ್ನಿಸುವ ಅಥವಾ ತಿರಸ್ಕರಿಸುವ ಪ್ರವೃತ್ತಿ ಸರಿಯಲ್ಲ ಎಂದು ಕುಮಾರದೇವರು ಅಭಿಪ್ರಾಯಪಟ್ಟರು.

‘ಜೆನ್ ಜಿ’ ಹೆಸರಿನಲ್ಲಿ ಯುವಜನತೆ ಜೀವನದ ಮೂಲ ಮೌಲ್ಯಗಳನ್ನೇ ಪ್ರಶ್ನಿಸುವ ಪ್ರವೃತ್ತಿ ಬೆಳೆಸಿಕೊಳ್ಳಬಾರದು. ಹಬ್ಬ-ಹರಿದಿನಗಳು, ಸಂಪ್ರದಾಯಗಳು ಹಾಗೂ ಪರಿಸರದ ಅರಿವಿನಂತಹ ವಿಷಯಗಳನ್ನು ಮಕ್ಕಳಿಗೆ ಬಾಲ್ಯದಿಂದಲೇ ಪರಿಚಯಿಸುವ ಅಗತ್ಯವಿದೆ. ಭಾರತೀಯ ಪರಂಪರೆಯ ಅರಿವಿನೊಂದಿಗೆ ಶೈಕ್ಷಣಿಕ ವ್ಯವಸ್ಥೆಯನ್ನೂ ಮತ್ತಷ್ಟು ಬಲಪಡಿಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ ಎಂದು ಹೇಳಿದರು.

ಮೊಬೈಲ್‌ಗಿಂತ ಕಲೆ-ಸಂಸ್ಕೃತಿಯ ಮೂಲಕ ಶಿಕ್ಷಣ ಅಗತ್ಯ :

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ. ಸುಮಂತ್ ಕೋಹಿಮಾ, ಮಕ್ಕಳ ಕಲಿಕೆಯಲ್ಲಿ ಮೊಬೈಲ್ ಬಳಕೆ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ. ತಂತ್ರಜ್ಞಾನದ ಬಳಕೆಯನ್ನು ಸಂಪೂರ್ಣವಾಗಿ ತಿರಸ್ಕರಿಸುವ ಬದಲು, ಮಕ್ಕಳ ಶಿಕ್ಷಣದಲ್ಲಿ ಕಲೆ, ಸಾಹಿತ್ಯ, ಸಂಗೀತ, ನಾಟಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play

ಮೊಬೈಲ್‌ನಿಂದ ದೊರೆಯುವ ತ್ವರಿತ ಉತ್ತೇಜನ ಮಕ್ಕಳನ್ನು ಅತಿವೇಗದ ಜೀವನಶೈಲಿಯತ್ತ ಕೊಂಡೊಯ್ಯುವ ಸಾಧ್ಯತೆಯಿದೆ. ಇದರ ಬದಲಾಗಿ ಸೃಜನಶೀಲ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಕಲಿಕೆಯ ಅವಕಾಶ ನೀಡಿದರೆ ಅವರ ಪ್ರತಿಭೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತದೆ ಎಂದು ಹೇಳಿದರು.

ಮಕ್ಕಳಿಂದ ತಕ್ಷಣವೇ ಹೆಚ್ಚಿನ ಸಾಧನೆ ನಿರೀಕ್ಷಿಸುವ ಪೋಷಕರ ಮನೋಭಾವವೂ ಒತ್ತಡಕ್ಕೆ ಕಾರಣವಾಗಬಹುದು. ದೇಹಕ್ಕೆ ಅತಿಯಾದ ಆಂಟಿಬಯೋಟಿಕ್ ಹೇಗೆ ಹಾನಿಕರವಾಗಬಹುದೋ, ಅದೇ ರೀತಿ ಮಕ್ಕಳ ಮೇಲೆ ಅತಿಯಾದ ನಿರೀಕ್ಷೆ ಹೇರಿಕೆಯೂ ಅವರ ಮಾನಸಿಕ ಬೆಳವಣಿಗೆಗೆ ಸಮಸ್ಯೆ ಉಂಟುಮಾಡಬಹುದು ಎಂದು ಅವರು ಎಚ್ಚರಿಸಿದರು.

ಕಷ್ಟ-ಸುಖ ಎರಡನ್ನೂ ಪರಿಚಯಿಸಬೇಕು :

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಶಿವಮೊಗ್ಗ ಗಂಗೋತ್ರಿ ಪಿಯು ಕಾಲೇಜಿನ ಕಾರ್ಯದರ್ಶಿ ಹಾಗೂ ಹಿರಿಯ ಪತ್ರಕರ್ತ ಜಗದೀಶ್ ಸಂಪಳ್ಳಿ ಮಾತನಾಡಿ, ಮಕ್ಕಳಿಗೆ ಯಾವುದೇ ಕಷ್ಟದ ಅನುಭವವಾಗದಂತೆ ಬೆಳೆಸುವ ಪ್ರವೃತ್ತಿ ಮುಂದಿನ ದಿನಗಳಲ್ಲಿ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದರು.

ಮಕ್ಕಳ ಮೇಲಿನ ಅತಿಯಾದ ಮಮತೆ ಅವರ ಸ್ವಾವಲಂಬನೆಯ ಬೆಳವಣಿಗೆಗೆ ಅಡ್ಡಿಯಾಗದಂತೆ ಪೋಷಕರು ಎಚ್ಚರಿಕೆ ವಹಿಸಬೇಕು. ಜೀವನದಲ್ಲಿ ಸುಖ-ದುಃಖ ಎರಡನ್ನೂ ಎದುರಿಸುವ ಸಾಮರ್ಥ್ಯ ಮಕ್ಕಳಲ್ಲಿ ಬೆಳೆಸಬೇಕು. ಪೋಷಕರು ಹಾಗೂ ಶಿಕ್ಷಕರು ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡದಿದ್ದರೆ, ಜೀವನದ ಅನುಭವಗಳೇ ಅವರಿಗೆ ಕಠಿಣ ಪಾಠ ಕಲಿಸಬೇಕಾದ ಪರಿಸ್ಥಿತಿ ಬರಬಹುದು ಎಂದು ಹೇಳಿದರು.

ಶಿಕ್ಷಕರ ಪಾತ್ರವನ್ನು ಪೋಷಕರು ಗೌರವಿಸಬೇಕು :

ಶಿಕ್ಷಣ ತಜ್ಞ ಹಾಗೂ ಸಾಮಾಜಿಕ ಕಾರ್ಯಕರ್ತ ಬ್ಯಾಡಗಿಯ ಎಂ.ಎಸ್. ಪಾಟೀಲ್ ಮಾತನಾಡಿ, ಶಾಲಾ-ಕಾಲೇಜುಗಳಿಗೆ ಶುಲ್ಕ ಪಾವತಿಸುವುದರಿಂದ ಮಾತ್ರ ಪೋಷಕರ ಜವಾಬ್ದಾರಿ ಪೂರ್ಣಗೊಳ್ಳುವುದಿಲ್ಲ. ಮಕ್ಕಳ ಸಮಗ್ರ ಬೆಳವಣಿಗೆಯಲ್ಲಿ ಪೋಷಕರು ಹಾಗೂ ಶಿಕ್ಷಕರು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಬೇಕು. ಮಕ್ಕಳಿಗೆ ಅಗತ್ಯವಾದ ಶಿಕ್ಷಣ ಮತ್ತು ಮಾರ್ಗದರ್ಶನ ನೀಡುವಲ್ಲಿ ಶಿಕ್ಷಕರ ಪಾತ್ರವನ್ನು ಪೋಷಕರು ಗೌರವಿಸಬೇಕು ಎಂದು ಸಲಹೆ ನೀಡಿದರು.

ಹೊಸನಗರದ ಶ್ರೀ ಅನಂತೇಶ್ವರ ಜ್ಯುವೆಲ್ಲರಿ, ರಿಪ್ಪನ್‌ಪೇಟೆಯ ಕೆಫೆ ಜೋನ್ ಹಾಗೂ ಹೊಸನಗರದ ಶ್ರೀ ಸದ್ಗುರು ಸೂಪರ್ ಮಾರ್ಕೆಟ್ ಕಾರ್ಯಕ್ರಮಕ್ಕೆ ಸಹ ಪ್ರಾಯೋಜಕರಾಗಿದ್ದರು.

ಕಾರ್ಯಕ್ರಮದಲ್ಲಿ ಉದ್ಯಮಿ ಮಹೇಶ್, ತೀರ್ಪುಗಾರರಾದ ಎ.ಆರ್. ಗಣಪತಿ ಭಟ್ ಪುರಪ್ಪೆಮನೆ, ಉಷಾರಾಣಿ, ಅಶ್ವಿನಿ ಪಂಡಿತ್ ಹಾಗೂ ಸಂಗೀತ ಗುರು ಮಾಧುರಿ ದೇವಾನಂದ್ ಮಾತನಾಡಿದರು.

ಪ್ರಾಚಾರ್ಯ ಥಾಮಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತೀರ್ಪುಗಾರರಾದ ಕಲಾವಿದ ನೀಲ್ ಹಾಗೂ ‘ಡ್ರಾಮಾ ಜೂನಿಯರ್’ ಖ್ಯಾತಿಯ ಪ್ರಣಿತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಂಸ್ಥೆಯ ಆಡಳಿತಾಧಿಕಾರಿ ಮಂಜುನಾಥ್ ಬ್ಯಾಣದ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಅಶ್ವಿನಿ ಪ್ರಾರ್ಥಿಸಿದರು. ಉಪ ಪ್ರಾಚಾರ್ಯ ಪ್ರಕಾಶ್ ವಂದಿಸಿದರು. ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಕ್ಕೂ ಅಧಿಕ ಮಕ್ಕಳು ಶ್ರೀಕೃಷ್ಣ ವೇಷ ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.

ಮಾಹಿತಿ ಮತ್ತು ಮೂಲ: ಈ ವರದಿಯನ್ನು Malnad Times ಸಂಪಾದಕೀಯ ತಂಡವು ಲಭ್ಯ ಮಾಹಿತಿಯ ಆಧಾರದಲ್ಲಿ ಪರಿಶೀಲಿಸಿದೆ.

Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ. ಇ-ಮೇಲ್ : [email protected]