ಕಡೂರು ; ಮನೆಯ ಗೃಹಪ್ರವೇಶಕ್ಕಾಗಿ ವ್ಯಕ್ತಿಯೊಬ್ಬರು ಶಾಲಾ ಕ್ರೀಡಾಂಗಣದಲ್ಲಿ ರಸ್ತೆ ನಿರ್ಮಿಸಲು ಮುಂದಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಚೌಳಹಿರಿಯೂರು ಸಮೀಪದ ಹಡಗಲು ಗ್ರಾಮದಲ್ಲಿ ನಡೆದಿದೆ.
ಫೆಬ್ರವರಿ 6 ರಂದು ನಡೆಯಲಿರುವ ಕಾಂಗ್ರೆಸ್ ಕಾರ್ಯಕರ್ತ ಪ್ರಮೋದ್ ಎಂಬವರು ಮನೆ ಗೃಹಪ್ರವೇಶ ಸಮಾರಂಭಕ್ಕೆ ಶಾಲಾ ಆವರಣದಲ್ಲಿ ರಸ್ತೆ ನಿರ್ಮಿಸಲು ಮುಂದಾಗಿದ್ದು ಪೋಷಕರು, ಶಾಲಾ ಮಕ್ಕಳು ಜೆಸಿಬಿಗೆ ಅಡ್ಡ ನಿಂತು ಪ್ರತಿಭಟನೆ ನಡೆಸಿದ್ದಾರೆ.
ಸರ್ಕಾರಿ ಶಾಲೆಯ ಕ್ರೀಡಾಂಗಣಕ್ಕೆಂದು 18 ಗುಂಟೆ ಗೋಮಾಳ ಜಾಗ ಮೀಸಲಿದ್ದು, ಸ್ಥಳದಲ್ಲಿ ನಿಂತು ರಸ್ತೆ ನಿರ್ಮಿಸಲು ಚೌಳಹಿರಿಯೂರು ಗ್ರಾಮ ಪಂಚಾಯಿತಿಯ ಅಧಿಕಾರಿಯೇ ಮುಂದೆ ನಿಂತು ರಸ್ತೆ ಮಾಡಿಸಲು ಮುಂದಾಗಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಗೃಹಪ್ರವೇಶವಾಗುತ್ತಿರುವ ಮನೆಗೆ ಹೋಗಲು ಬೇರೆ ದಾರಿ ಇದೆ. ಆ ದಾರಿ ಬಿಟ್ಟು ಮಕ್ಕಳು ಆಟವಾಡುವ ಮೈದಾನದಲ್ಲಿ ರಸ್ತೆ ನಿರ್ಮಿಸಲು ಮುಂದಾಗಿದ್ದಾರೆ. ಮಕ್ಕಳು ಆಟವಾಡುವುದು ಎಲ್ಲಿ? ನಾವು ಮಕ್ಕಳನ್ನ ಶಾಲೆಗೆ ಕಳುಹಿಸುವುದಿಲ್ಲ, ನೀವು ಮೊದಲು ಶಾಲೆಯ ಬಿಲ್ಡಿಂಗ್ ಒಡೆದು ಹಾಕಿ. ನಂತರ ರಸ್ತೆ ನಿರ್ಮಾಣ ಮಾಡಿ. ಆಗ ನಾವು ನಿಮಗೆ ಪ್ರಶ್ನೆ ಮಾಡುವುದಿಲ್ಲ. ಮಕ್ಕಳನ್ನು ಶಾಲೆ ಬಿಡಿಸಿ ಕೂಲಿಗೆ ಕಳುಹಿಸುತ್ತೇವೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಅಧಿಕಾರಿಗಳು ಕೆಲಸ ನಿಲ್ಲಿಸಿ ಹೋಗಿದ್ದಾರೆ.