ಅಕ್ರಮ ಒತ್ತುವರಿ ತೆರವಿಗೆ ಒತ್ತಾಯಿಸಿ ಸಮಟಗಾರು ಗ್ರಾಮಸ್ಥರಿಂದ ಹುಂಚ ನಾಡಕಛೇರಿ ಎದುರು ಪ್ರತಿಭಟನೆ

Written by Mahesha Hindlemane

Updated on:

ರಿಪ್ಪನ್‌ಪೇಟೆ ; ಹುಂಚ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಹೊನ್ನೆಬೈಲು ಗ್ರಾಮದ ಸರ್ವೇ ನಂ 99 ರಲ್ಲಿ ಭೂ ಕಬಳಿಕೆಯ ನೆಪದಲ್ಲಿ ಕೋಟ್ಯಂತರ ರೂ. ಮೌಲ್ಯದ ಬೀಟೆ, ಸಾಗುವಾನಿ, ಹೊನ್ನೆ, ಭರಣಿ ಇನ್ನಿತರ ಕಾಡುಜಾತಿಯ ಮರಗಳನ್ನು ಅಕ್ರಮವಾಗಿ ಕಡಿತಲೆ ಮಾಡಿದ್ದಾರೆಂದು ಆರೋಪಿಸಿ ಹೊನ್ನೆಬೈಲು ಗ್ರಾಮದ ಮಜರೆ ಸಮಟಗಾರು ಗ್ರಾಮಸ್ಥರು ಹುಂಚ ನಾಡಕಛೇರಿಯ ಮುಂಭಾಗ ನೂರಾರು ರೈತ ಮುಖಂಡರು ಪ್ರತಿಭಟನೆ ನಡೆಸಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಕಳೆದ ಹಲವಾರು ವರ್ಷಗಳಿಂದ ಹೊನ್ನೆಬೈಲು ಗ್ರಾಮದ ಮಜರೆ ಸಮಟಗಾರು ಗ್ರಾಮಸ್ಥರು ಓಡಾಡುವ ರಸ್ತೆಯನ್ನು ಬಂದ್ ಮಾಡುವ ಮೂಲಕ ಬೇನಾಮಿ ಬಲಾಢ್ಯ ಪ್ರತಿಷ್ಠಿತ ವ್ಯಕ್ತಿಯೊಬ್ಬರು ಸ.ನಂ 99 ರಲ್ಲಿ ಭೂಮಿಯನ್ನು ಕಬಳಿಸುವ ನೆಪದಲ್ಲಿ ಸುಮಾರು 15 ಎಕರೆ ಸರ್ಕಾರಿ ಜಾಗದಲ್ಲಿನ ಬೆಲೆ ಬಾಳುವ ಬೃಹತ್ ಗಾತ್ರದ ಮರಗಳ ಮಾರಣಹೋಮ ಮಾಡಿದ್ದರೂ ಕೂಡಾ ಅರಣ್ಯ, ಕಂದಾಯ ಇಲಾಖೆಯವರು ಅತ್ತ ಕಡೆ ಗಮನಹರಿಸದೆ ನಿರ್ಲಕ್ಷ್ಯ ವಹಿಸಿರುವುದು ಇಲ್ಲಿನ ನಾಗರೀಕರಲ್ಲಿ ಹಲವು ಸಂಶಯಗಳಿಗೆ ಎಡೆ ಮಾಡಿದಂತಾಗಿದೆ.

ತಾಲ್ಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಿರೀಶ್ ಜಂಬಳ್ಳಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ಅವ್ಯಾಹತವಾಗಿ ಅರಣ್ಯ ಕಂದಾಯ ಭೂಮಿ ಕಬಳಿಸುತ್ತಿದ್ದರೂ ಕೂಡಾ ಇಲಾಖೆಯ ಅಧಿಕಾರಿಗಳು ಮಾತ್ರ ನಮಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಎಂಬಂತೆ ಕಣ್ಣಿದ್ದು ಕುರುಡರಾಗಿದ್ದಾರೆ.

ಮಲೆನಾಡಿನ ಪಶ್ಚಿಮ ಘಟ್ಟದ ಪರ್ವತ ಶ್ರೇಣಿಯ ಪ್ರದೇಶದಲ್ಲಿ ಅಕ್ರಮ ಒತ್ತುವರಿ ಅವ್ಯಾಹತವಾಗಿ ನಡೆಯುತ್ತಿದ್ದು ಇಲಾಖೆಯವರು ಶಾಮಿಲಾಗಿ ಬೆಂಬಲಿಸುತ್ತಿದ್ದಾರೆಂದು ಆರೋಪಿಸಿದರು.

ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮೊಬೈಲ್ ಕರೆ ಮಾಡಿದರೆ ಸ್ವಿಚ್ ಆಫ್, ನಾಟ್ ರಿಚೇಬಲ್ ಹೀಗೆ ಉತ್ತರ ಬರುತ್ತಿದ್ದು ನೀವುಗಳು ಏನಾದರೂ ಮಾಡಿಕೊಳ್ಳಿ ನಮಗೆ ಮಾತ್ರ ಜೇಬು ತುಂಬಿಸಿ ಎನ್ನುವ ಸಂಶಯದಲ್ಲಿ ರೈತರು ಆಡಿಕೊಳ್ಳುವಂತಾಗಿದ್ದಾರೆ. ಈಗಾಗಲೇ ಸಾಗರ ಉಪಅರಣ್ಯ ಸಂರಕ್ಷಣಾಧಿಕಾರಿಗಳ ವ್ಯಾಪ್ತಿಯಲ್ಲಿ ಬರುವ ಮಾಲ್ವಿ ಅರಣ್ಯ ಪ್ರದೇಶದಲ್ಲಿ ನಡೆದಿರುವ ಅರಣ್ಯ ಭೂ ಒತ್ತುವರಿ ಮತ್ತು ಲಕ್ಷಾಂತರ ಮರಗಳ ಮಾರಣ ಹೋಮದ ಕುರಿತು ಬಂದಂತಹ ಸಮಗ್ರ ವರದಿಗೆ ರಾಜ್ಯ ಅರಣ್ಯ ಸಚಿವ ಈಶ್ವರಖಂಡ್ರೆ ಅಧಿಕಾರಿಗಳ ಅಮಾನತಿಗೆ ಆದೇಶ ಹೊರಡಿಸಲಾಗಿದ್ದರೂ ಕೂಡಾ ಹೊಸನಗರ ತಾಲ್ಲೂಕಿನ ಅರಣ್ಯ, ಕಂದಾಯ ಅಧಿಕಾರಿಗಳಿಗೆ ಈ ಯಾವುದೇ ನಿಯಮಗಳ ಅನ್ವಯ ಆಗುವುದಿಲ್ಲ ಅವರು ಮಾಡುವುದೇ ಬೇರೆ ಎಂದು ಪ್ರತಿಭಟನಾ ನಿರತರು ತೀವ್ರವಾಗಿ ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.

ಅರಣ್ಯ ಕಂದಾಯ ಭೂಮಿ ರಕ್ಷಣೆ ಮಾಡುವ ಬದಲು ಖಾಸಗಿ ಪ್ರತಿಷ್ಟಿತ ವ್ಯಕ್ತಿಗಳ ಜೊತೆ ಶಾಮಿಲಾಗಿದ್ದಾರೆ. ಈ ಕೂಡಲೇ ಇಂತಹ ಬೇಜವಾಬ್ದಾರಿ ಆಧಿಕಾರಿಗಳನ್ನು ಅಮಾನತುಪಡಿಸಿ ಮಲೆನಾಡಿನ ಅರಣ್ಯ ಸಂಪತ್ತು ಉಳಿಸುವಂತೆ ರೈತ ನಾಗರೀಕರು ಆಗ್ರಹಿಸುವ ಮೂಲಕ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಿ ಸರ್ಕಾರದ ಅಭಿವೃದ್ದಿಗೆ ಮೀಸಲಿಡುವಂತೆ ಆಗ್ರಹಿಸಿದ್ದಾರೆ.

ಪ್ರತಿಭಟನೆಯಲ್ಲಿ ನಾಗೇಂದ್ರ ಕಲ್ಲೂರು, ಧರ್ಮರಾಜ್, ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಆಶಾ ರವೀಂದ್ರ, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿನಾಯಕ, ಸುಣ್ಣಕಲ್ ಶ್ರೀಧರ, ಯಧುಕುಮಾರ್, ಹರೀಶ ಹೊನ್ನೆಬೈಲು, ವಿಷು ಹೊನ್ನಬೈಲು, ರಾಜೇಂದ್ರ ಸಮಟಗಾರು, ದಲಿತ ಮುಖಂಡ ಶಿವರಾಜ್ ಸಮಟಗಾರ್, ನಟೇಶ್‌ ಬಿಲ್ಲೇಶ್ವರ ಇನ್ನಿತರ ಗ್ರಾಮಸ್ಥರು ಪಾಲ್ಗೊಂಡಿದ್ದರು.

Leave a Comment