ತೀರ್ಥಹಳ್ಳಿ ; ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮೇಲಿನಕುರುವಳ್ಳಿಯ ವಾಗ್ದೇವಿ ಪಿಯು ಕಾಲೇಜಿನ ವಿದ್ಯಾರ್ಥಿನಿ ದೀಕ್ಷಾ ಆರ್. 2024-25ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ 600ಕ್ಕೆ 600 ಅಂಕ ಗಳಿಸುವ ಮೂಲಕ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಈ ಮೊದಲು ದೀಕ್ಷಾ 600ಕ್ಕೆ 599 ಅಂಕ ಗಳಿಸಿ ದಕ್ಷಿಣ ಕನ್ನಡ ಜಿಲ್ಲೆಯ ಕೊಡಿಯಾಲಬೈಲಿನ ಎಕ್ಸ್‌ಪರ್ಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಅಮೂಲ್ಯ ಕಾಮತ್ ಜತೆ ಅಗ್ರ ಸ್ಥಾನ ಹಂಚಿಕೊಂಡಿದ್ದರು.
ದೀಕ್ಷಾ ರಸಾಯನಶಾಸ್ತ್ರದಲ್ಲಿ ಈ ಮೊದಲು 99 ಅಂಕ ಗಳಿಸಿದ್ದು, ಮತ್ತೆ ಒಂದು ಅಂಕಕ್ಕಾಗಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಮರು ಮೌಲ್ಯಮಾಪನದಲ್ಲಿ 100ಕ್ಕೆ 100 ಅಂಕಗಳು ಬಂದಿದ್ದು, ಒಟ್ಟು 600ಕ್ಕೆ 600 ಅಂಕಗಳನ್ನು ಪಡೆದಿದ್ದಾರೆ.
ಮರು ಮೌಲ್ಯಮಾಪನದ ನಂತರ 600 ಅಂಕ ಬಂದಿದ್ದು ಖುಷಿಯಾಗಿದೆ. ರಸಾಯನಶಾಸ್ತ್ರದಲ್ಲಿ ಪ್ರಶ್ನೆಯೊಂದಕ್ಕೆ ಐದು ಅಂಕಗಳ ಬದಲು ನಾಲ್ಕು ಅಂಕ ಕೊಟ್ಟಿದ್ದರು. ಈಗ ಆ ಒಂದು ಅಂಕವೂ ಸಿಕ್ಕಿದೆ.
– ಆರ್. ದೀಕ್ಷಾ, ವಾಗ್ದೇವಿ ಕಾಲೇಜು ವಿದ್ಯಾರ್ಥಿನಿ
ಬೆಂಗಳೂರಿನ ಆರ್.ವಿ. ಕಾಲೇಜಿನಲ್ಲಿ ದೀಕ್ಷಾ
ಇಂಜಿನಿಯರಿಂಗ್ ಮಾಡಲು ಬಯಸಿದ್ದಾಳೆ. ಸ್ಕ್ಯಾನ್ ಕಾಪಿ ನೋಡಿದ ಬಳಿಕ ಹೆಚ್ಚುವರಿ ಅಂಕದ ಬಗ್ಗೆ ವಿಶ್ವಾಸ ಮೂಡಿತ್ತು. ಹೀಗಾಗಿ ಮರುಮೌಲ್ಯಮಾಪನಕ್ಕೆ ಮೊರೆಹೋಗಲು ನಿರ್ಧರಿಸಿದೆವು.
– ಉಷಾ ಶಿಕ್ಷಕಿ, ದೀಕ್ಷಾ ತಾಯಿ