ಹೊಸನಗರ: ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ನಿಟ್ಟೂರು ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿನಿ ಕು|| ಹೆಚ್.ಪಿ. ಲಿಖಿತಾ ರಾಷ್ಟ್ರ ಮಟ್ಟದ ಶಾಲಾ ಚೆಸ್ ಪಂದ್ಯಾವಳಿಗೆ ಆಯ್ಕೆಯಾಗುವ ಮೂಲಕ ಮಲೆನಾಡಿನ ಹಿರಿಮೆ ಹೆಚ್ಚಿಸಿದ್ದಾರೆ.
ನಿಟ್ಟೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ಲಿಖಿತಾ, ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಶಾಲಾ ಚೆಸ್ ಕೂಟದಲ್ಲಿ ಅದ್ಭುತ ಪ್ರದರ್ಶನ ತೋರಿ ರಾಷ್ಟ್ರೀಯ ಹಂತಕ್ಕೆ ತೇರ್ಗಡೆಯಾಗಿದ್ದಾರೆ. ಕೇವಲ ಆಟಗಾರ್ತಿಯಾಗಿ ಮಾತ್ರವಲ್ಲದೆ, ಕರ್ನಾಟಕ ರಾಜ್ಯ ಬಾಲಕಿಯರ ಚೆಸ್ ತಂಡದ ಉಪನಾಯಕಿಯಾಗಿಯೂ ಇವರು ಜವಾಬ್ದಾರಿ ವಹಿಸಿಕೊಂಡಿರುವುದು ವಿಶೇಷ ಹೆಗ್ಗಳಿಕೆ.
ಇವರು ನಿಟ್ಟೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಬಿ.ಪಿ. ಪರಮೇಶ್ವರ ಹಾಗೂ ಹೆಚ್.ಪಿ. ಅಶ್ವಿನಿ ದಂಪತಿಯ ಪುತ್ರಿ. ಗ್ರಾಮೀಣ ಭಾಗದ ಸರ್ಕಾರಿ ಶಾಲೆಯಲ್ಲಿ ಓದುತ್ತಾ, ಯಾವುದೇ ಅತ್ಯಾಧುನಿಕ ತರಬೇತಿ ಕೇಂದ್ರಗಳ ಹಂಗಿಲ್ಲದೆ ಸ್ವಂತ ಪರಿಶ್ರಮ ಹಾಗೂ ನಿರಂತರ ಅಭ್ಯಾಸದ ಬಲದಿಂದ ಲಿಖಿತಾ ಈ ಮೈಲಿಗಲ್ಲು ತಲುಪಿದ್ದಾರೆ.
ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವ ಲಿಖಿತಾ ಸಾಧನೆಗೆ ಶಾಲೆಯ ಶಿಕ್ಷಕ ವೃಂದ, ನಿಟ್ಟೂರು ಪತ್ತಿನ ಸಹಕಾರ ಸಂಘದ ಪದಾಧಿಕಾರಿಗಳು, ಶಾಲಾ ಅಭಿವೃದ್ಧಿ ಸಮಿತಿ (SDMC) ಹಾಗೂ ಊರಿನ ಪ್ರಮುಖರು ಹರ್ಷ ವ್ಯಕ್ತಪಡಿಸಿ, ರಾಷ್ಟ್ರ ಮಟ್ಟದ ಕೂಟದಲ್ಲಿ ಚಿನ್ನದ ಪದಕ ಗೆದ್ದು ಬರಲೆಂದು ಶುಭ ಹಾರೈಸಿದ್ದಾರೆ.

