ಹೊಸನಗರ

ನಮಗೂ ಉಚಿತ ಬಸ್ ಪಾಸ್ ನೀಡಿ! ಹೊಸನಗರದಲ್ಲಿ ಕೇಳಿಬಂತು ಹಿರಿಯ ನಾಗರಿಕರಿಂದ ಮಹತ್ವದ ಬೇಡಿಕೆ

The attitude in society of sidelining people simply because they are elderly or retired employees needs to change.

Hosanagara Citizens

ಹೊಸನಗರ: ವಯಸ್ಸಾದವರು, ನಿವೃತ್ತ ನೌಕರರು ಎಂಬ ಕಾರಣಕ್ಕೆ ಅವರನ್ನು ಕಡೆಗಣಿಸುವ ಮನೋಭಾವನೆ ಸಮಾಜದಲ್ಲಿ ಬದಲಾಗಬೇಕು. ಪ್ರತಿಯೊಬ್ಬ ಹಿರಿಯ ನಾಗರಿಕರಿಗೂ ಗೌರವಯುತ ಬದುಕು ನಡೆಸುವ ಅವಕಾಶ ದೊರೆಯಬೇಕು. ಇದಕ್ಕಾಗಿ ಹಿರಿಯರು ತಮ್ಮ ಹಕ್ಕುಗಳು ಹಾಗೂ ಕಾನೂನಿನ ಬಗ್ಗೆ ಅರಿವು ಹೊಂದಿರುವುದು ಅತ್ಯಗತ್ಯ ಎಂದು ಹಿರಿಯ ನಾಗರಿಕರ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಾ. ಬಿ.ಎನ್. ದಿನಮಣಿ ಹೇಳಿದರು.

WhatsApp Group Join Now
Telegram Group Join Now
Instagram Group Join Now

ಇಲ್ಲಿನ ಪಂಚಾಯಿತಿ ಆವರಣದಲ್ಲಿ ತಾಲ್ಲೂಕು ಆಡಳಿತ, ಶಿವಮೊಗ್ಗ ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಯುವಜನ ಸೇವಾ ಮತ್ತು ಸಬಲೀಕರಣ ಇಲಾಖೆ, ಜಿಲ್ಲಾ ನಿವೃತ್ತ ನೌಕರರ ಸಂಘ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಹಿರಿಯ ನಾಗರಿಕರ ಕಾನೂನು ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಿರಿಯರ ಹಕ್ಕುಗಳ ರಕ್ಷಣೆಗೆ ಕಾನೂನು ಅರಿವು ಅಗತ್ಯ

ಹಿರಿಯ ನಾಗರಿಕರೆಂದರೆ ಅಸಹಾಯಕರು ಎಂಬ ದೃಷ್ಟಿಕೋನ ಸರಿಯಲ್ಲ. ತಪ್ಪು-ಒಪ್ಪುಗಳು ಎಲ್ಲ ವಯೋಮಾನದವರಿಂದಲೂ ನಡೆಯುತ್ತವೆ. ಆದರೆ ಹಿರಿಯರು ತಪ್ಪು ಮಾಡಿದರೆ ಮಾತ್ರ ಅದನ್ನು ದೊಡ್ಡದಾಗಿ ನೋಡುವ ಮನೋಭಾವನೆಯಿಂದ ಹೊರಬರಬೇಕು ಎಂದು ದಿನಮಣಿ ಅಭಿಪ್ರಾಯಪಟ್ಟರು.

ಜೀವನದ ಕಷ್ಟದ ದಿನಗಳಲ್ಲಿ ಮಕ್ಕಳನ್ನು ಪ್ರೀತಿಯಿಂದ ಬೆಳೆಸಿ, ಅವರ ಭವಿಷ್ಯಕ್ಕಾಗಿ ಶ್ರಮಿಸುವ ಪೋಷಕರು ವೃದ್ಧಾಪ್ಯದಲ್ಲಿ ಮಕ್ಕಳ ಆಸರೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿರುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಹಿರಿಯರು ಮಕ್ಕಳಿಂದಲೇ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವುದು, ಮನೆಯಿಂದ ಹೊರಹಾಕಲ್ಪಡುವುದು ಹಾಗೂ ವೃದ್ಧಾಶ್ರಮಗಳ ಆಶ್ರಯ ಪಡೆಯುವಂತಹ ಘಟನೆಗಳು ಕಂಡುಬರುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಹಿರಿಯ ನಾಗರಿಕರು ತಮ್ಮ ಹಕ್ಕುಗಳು ಮತ್ತು ಕಾನೂನು ರಕ್ಷಣೆಯ ಕುರಿತು ತಿಳಿದುಕೊಂಡಿದ್ದರೆ ಇಂತಹ ಸಂದರ್ಭಗಳನ್ನು ಧೈರ್ಯವಾಗಿ ಎದುರಿಸಲು ಸಾಧ್ಯವಾಗುತ್ತದೆ. ಕಾನೂನಿನ ಅರಿವಿನಿಂದ ಹಿರಿಯರು ಸಮಾಜದಲ್ಲಿ ಇತರರಂತೆ ಗೌರವದಿಂದ ಬದುಕಲು ನೆರವಾಗುತ್ತದೆ ಎಂದು ತಿಳಿಸಿದರು.

ಕಾನೂನು ಸೌಲಭ್ಯಗಳ ಕುರಿತು ಮಾಹಿತಿ

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹೊಸನಗರದ ವಕೀಲರಾದ ಚಂದ್ರಪ್ಪ ಹಾಗೂ ಸುರೇಶ್ ಸ್ವಾಮಿರಾವ್ ಅವರು ಹಿರಿಯ ನಾಗರಿಕರಿಗೆ ಕಾನೂನಿನಡಿ ದೊರೆಯುವ ಹಕ್ಕುಗಳು, ಸೌಲಭ್ಯಗಳು ಮತ್ತು ರಕ್ಷಣಾ ಕ್ರಮಗಳ ಕುರಿತು ಮಾಹಿತಿ ನೀಡಿದರು. ಸಂಕಷ್ಟಕ್ಕೆ ಸಿಲುಕಿರುವ ಹಿರಿಯರು ಮೌನವಾಗಿ ನೋವು ಅನುಭವಿಸದೆ, ಅಗತ್ಯವಿದ್ದಾಗ ಕಾನೂನಿನ ನೆರವು ಪಡೆಯಬೇಕು ಎಂದು ಸಲಹೆ ನೀಡಿದರು.

ಹಿರಿಯ ನಾಗರಿಕರಿಗೆ ಉಚಿತ ಕಾನೂನು ಸಲಹೆ, ಪೊಲೀಸ್ ಇಲಾಖೆಯಿಂದ ದೊರೆಯುವ ರಕ್ಷಣೆ ಹಾಗೂ ಅನಾಥ ಮತ್ತು ಅಸಹಾಯಕ ಹಿರಿಯರಿಗೆ ವೃದ್ಧಾಶ್ರಮಗಳಲ್ಲಿ ಲಭ್ಯವಿರುವ ಸೌಲಭ್ಯಗಳ ಬಗ್ಗೆಯೂ ಕಾರ್ಯಕ್ರಮದಲ್ಲಿ ಅರಿವು ಮೂಡಿಸಲಾಯಿತು.

ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ನೀಡುತ್ತಿರುವಂತೆ ಹಿರಿಯ ನಾಗರಿಕರಿಗೂ ಉಚಿತ ಬಸ್ ಪಾಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿದರು. ವಯೋವೃದ್ಧರಿಗೆ ಪ್ರಯಾಣ ವೆಚ್ಚದ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಈ ಬೇಡಿಕೆಯನ್ನು ಪರಿಗಣಿಸಬೇಕು.
– ಸುಬ್ರಹ್ಮಣ್ಯ

ಕಾರ್ಯಕ್ರಮದಲ್ಲಿ ನಿವೃತ್ತ ನೌಕರರ ಸಂಘದ ನಿರ್ದೇಶಕ ಎನ್. ರಂಗನಾಥ್, ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ಪವನ್ ಕುಮಾರ್, ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ರವಿಕುಮಾರ್ ಸೇರಿದಂತೆ ವಿಜಯ್, ಜಲೇಂದ್ರಪ್ಪ, ಮಹಾಬಲ, ಸುಬ್ರಹ್ಮಣ್ಯ ಮತ್ತಿತರರು ಉಪಸ್ಥಿತರಿದ್ದರು.

Malnad Times App ಡೌನ್‌ಲೋಡ್ ಮಾಡಿಶಿವಮೊಗ್ಗ ಮತ್ತು ಮಲೆನಾಡಿನ ಸುದ್ದಿಗಳನ್ನು ತಕ್ಷಣ ಪಡೆಯಿರಿ.
GET IT ONGoogle Play
Mahesha Hindlemane

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್‌ಸೈಟ್‌ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ 'ಮಲ್ನಾಡ್ ಟೈಮ್ಸ್' ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.

ಇ-ಮೇಲ್ : [email protected]

error: Content is protected !!