ರಿಪ್ಪನ್‌ಪೇಟೆ: 2026ನೇ ಸಾಲಿನ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ, ಆಕ್ಷೇಪಣೆ ಸಲ್ಲಿಕೆ ಹಾಗೂ ದೋಷಗಳ ತಿದ್ದುಪಡಿ ಕಾರ್ಯಕ್ಕೆ ಸರ್ವರ್ ಸಮಸ್ಯೆ ಎದುರಾಗಿದ್ದು, ಜನರು ತಮ್ಮ ಕೆಲಸಗಳನ್ನು ಬಿಟ್ಟು ದಿನಗಟ್ಟಲೆ ಕಚೇರಿಯಲ್ಲಿ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಬಾಳೂರು ಗ್ರಾ.ಪಂ. ಕಚೇರಿಯಲ್ಲಿ ಸಾರ್ವಜನಿಕರ ಪರದಾಟ ಸಮೀಪದ ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಯ ಮ್ಯಾಪಿಂಗ್ ದೋಷ ಹಾಗೂ ಭಾವಚಿತ್ರ ಹೊಂದಾಣಿಕೆಯಾಗದ ವ್ಯಕ್ತಿಗಳಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಈ ಕುರಿತು ಸೆಪ್ಟೆಂಬರ್ 9ರಿಂದಲೇ ವಿಚಾರಣೆ ಆರಂಭಗೊಂಡಿದ್ದರೂ, ಸರ್ವರ್ ಕೈಕೊಟ್ಟಿರುವ ಕಾರಣ ಸಾರ್ವಜನಿಕರು ಕಚೇರಿಗೆ ಅಲೆಯುವಂತಾಗಿದೆ.
ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ನಿರ್ಮಲ ನಿಂಗಪ್ಪ, “ತಿದ್ದುಪಡಿ ಪ್ರಕ್ರಿಯೆಯನ್ನು ಬಾಳೂರು ಬದಲು ರಿಪ್ಪನ್‌ಪೇಟೆ ಹೋಬಳಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದರೆ ನೆಟ್‌ವರ್ಕ್ ಸಮಸ್ಯೆ ಇರುತ್ತಿರಲಿಲ್ಲ. ಇದರಿಂದ ಜನರು ತ್ವರಿತವಾಗಿ ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಅನುಕೂಲವಾಗುತ್ತಿತ್ತು” ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮತದಾರರ ನೋಂದಣಾಧಿಕಾರಿ ಡಾ. ಧನಂಜಯ ಅವರು ಮಾತನಾಡಿ, “ಮತಗಟ್ಟೆಗಳ ವಿಂಗಡಣೆ ಮತ್ತು ಕ್ರಮಾಂಕದ ಮರುಹೊಂದಾಣಿಕೆಯಿಂದಾಗಿ ಹಲವರ ಭಾಗ ಸಂಖ್ಯೆ ಹಾಗೂ ಕ್ರಮ ಸಂಖ್ಯೆಗಳಲ್ಲಿ ಬದಲಾವಣೆಯಾಗಿರುವ ಸಾಧ್ಯತೆಯಿದೆ. ಹಾಗಾಗಿ, ಸಾರ್ವಜನಿಕರು ಈ ಅವಕಾಶವನ್ನು ಬಳಸಿಕೊಂಡು ಈಗಲೇ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು” ಎಂದು ಮನವಿ ಮಾಡಿದರು.
ಇದೇ ವೇಳೆ, ಸಹಾಯಕ ಮತದಾರರ ನೋಂದಣಾಧಿಕಾರಿ ಉಮೇಶ್ ಹಾಗೂ ಬಿ.ಎಲ್.ಓ ಅಧಿಕಾರಿಗಳು ಪ್ರತಿಕ್ರಿಯಿಸಿ, ತಾಂತ್ರಿಕ ಅಡಚಣೆಯಿಂದಾಗಿ ನೋಟಿಸ್ ಪಡೆದ ಮತದಾರರು ಅನಿವಾರ್ಯವಾಗಿ ಕಾಯುವಂತಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

