ಹೊಂಬುಜ ; “ಸರ್ವರಿಗೂ ಅಭೀಷ್ಟವರಪ್ರದಾಯಿನಿ ಮಹಾಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸದಾ ಹರಸಲಿ” ಎಂದು ಹೊಂಬುಜ ಶ್ರೀ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಜಿಗಳವರು ಭಕ್ತರನ್ನು ಆಶೀರ್ವದಿಸಿದರು.
ಪರಮಪೂಜ್ಯ ಶ್ರೀಗಳವರ ನೇತೃತ್ವ, ಸಾನಿಧ್ಯ ಹಾಗೂ ಉಪಸ್ಥಿತಿಯಲ್ಲಿ ಆಗಮೋಕ್ತ ಶಾಸ್ತ್ರದನ್ವಯ ಶರನ್ನವರಾತ್ರಿಯ ಪ್ರಥಮ ದಿನದ ಪೂಜಾ ವಿಧಿವಿಧಾನಗಳು ನೆರವೇರಿದವು.

ಶ್ರೀಕ್ಷೇತ್ರದ ಅಧಿನಾಯಕ ಶ್ರೀ 1008 ಪಾರ್ಶ್ವನಾಥ ಸ್ವಾಮಿ ಸನ್ನಿಧಿಗೆ ಕುಮುದ್ವತಿ ತೀರ್ಥದಿಂದ ಆಗ್ರೋದಕವನ್ನು ವಾದ್ಯಗೋಷ್ಠಿಗಳೊಂದಿಗೆ ಪ್ರಾತಃಕಾಲ ತರಲಾಯಿತು. ಅಭಿಷೇಕ ಪೂಜೆಯನ್ನು ಸಲ್ಲಿಸಿ, ಮಹಾಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ವಿಶೇಷ ಫಲ-ಪುಷ್ಪ-ನೈವೇದ್ಯ ಸಮರ್ಪಿಸಿ ಪೂಜಾ ವಿಧಿಯನ್ನು ನೆರವೇರಿಸಲಾಯಿತು. ಸತ್‌ಸಂಪ್ರದಾಯದಂತೆ ಭಕ್ತವೃಂದದವರು ಜಿನಸ್ತುತಿ ಸ್ತುತಿಸುತ್ತಾ ಜಿನಮಂದಿರದಲ್ಲಿ ತಮ್ಮ ತಮ್ಮ ಭಕ್ತಿಯ ಪೂಜಾ ವಿಧಾನದಲ್ಲಿ ಪಾಲ್ಗೊಂಡು ಧನ್ಯರಾದರು. ಘಟಸ್ಥಾಪನೆಯ ಬಳಿಕ ಶರನ್ನವರಾತ್ರಿ ಪೂಜಾ ವಿಧಾನಗಳು ಆರಂಭಗೊಂಡವು. ಅಂದು ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.

ಊರ ಪರವೂರ ಭಕ್ತವೃಂದದವರು, ಶ್ರೀ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು, ಶ್ರೀ ಪದ್ಮಾವತಿ ಮಹಿಳಾ ಸಮಾಜದವರು ಉಪಸ್ಥಿತರಿದ್ದರು. ಶ್ರೀಕ್ಷೇತ್ರದ ಬಸದಿಗಳ ಆಕರ್ಷಕ ವಿದ್ಯುತ್ ದೀಪಾಲಂಕಾರವು ಎಲ್ಲರ ಗಮನ ಸೆಳೆಯುವಂತಿತ್ತು.
ಈ ದಿನದ ಪೂಜಾ ಸೇವಾಕರ್ತರಾದ ಚೆನ್ನೈನ ನೀಲು ಶ್ರೀ ಲಲಿತ್ ಬಡಜ್ಯಾತೆ ಮತ್ತಿತರರು ಶ್ರೀಗಳವರಿಂದ ಶ್ರೀಫಲ ಮಂತ್ರಾಕ್ಷತೆ ಸ್ವೀಕರಿಸಿದರು.

ಸೆ.29 ಸೋಮವಾರ-ಸರಸ್ವತಿ ಪೂಜೆ, ಸೆ. 30 ಮಂಗಳವಾರ-ಜೀವದಯಾಷ್ಟಮಿ, ಅ. 01 ಬುಧವಾರ-ಆಯುಧಪೂಜೆ ಮತ್ತು ಮಹಾನವಮಿ, ಅ. 02 ಗುರುವಾರ-ವಿಜಯದಶಮಿ ಉತ್ಸವ, ಶ್ರೀದೇವಿ ಪಲ್ಲಕ್ಕಿ ಉತ್ಸವ, ಪರಮಪೂಜ್ಯ ಸ್ವಸ್ತಿಶ್ರೀಗಳವರ ಸಿಂಹಾಸನಾರೋಹಣ ಹಾಗೂ ಶ್ರೀಗಳವರ ಪಾದಪೂಜೆ ಕಾರ್ಯಕ್ರಮಗಳು ನೆರವೇರಲಿದೆ. ಸರ್ವ ಭಕ್ತವೃಂದದವರು ಶರನ್ನವರಾತ್ರಿ ಪೂಜಾ ವಿಧಿಗಳಲ್ಲಿ ಪಾಲ್ಗೊಂಡು ಪುಣ್ಯಭಾಗಿಗಳಾಗುವಂತೆ ಅಪೇಕ್ಷಿಸಲಾಗಿದೆ.

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ನ್ಯೂಸ್ ವೆಬ್ಸೈಟ್ಗಳಲ್ಲಿ ಪ್ರತಿನಿಧಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 7 ವರ್ಷಗಳ ಅನುಭವ. ಜಿಲ್ಲಾ ಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್ಸೈಟ್ಗಳಲ್ಲಿ ಮಲೆನಾಡಿಗೆ ಸಂಬಂಧಿಸಿದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ. ಪ್ರಸ್ತುತ ‘ಮಲ್ನಾಡ್ ಟೈಮ್ಸ್’ ಡಿಜಿಟಲ್ ನಲ್ಲಿ ಸಂಪಾದಕನಾಗಿ ಮುಂದುವರೆದಿದ್ದೇನೆ.