RIPPONPETE ; ಶರನ್ನವರಾತ್ರಿ ಪೂಜಾ ಕೈಂಕರ್ಯವನ್ನು ತೃತೀಯ ದಿನದಂದು ಶ್ರೀ 1008 ಪಾರ್ಶ್ವನಾಥ ಸ್ವಾಮಿ ಅಧಿದೇವತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಅತಿಶಯ ಶ್ರೀಕ್ಷೇತ್ರ ಹೊಂಬುಜದಲ್ಲಿ ನೆರವೇರಿಸಲಾಯಿತು. ಹೊಂಬುಜ ಜೈನ ಮಠದ ಪೀಠಾಧಿಪತಿ ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ದಿವ್ಯ ಸಾನಿಧ್ಯ, ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಜಿನಾಗಮೋಕ್ತ ಪೂಜಾ ವಿಧಿ ವಿಧಾನ, ಆರಾಧನೆ ಮೂಲಕ ಜರುಗಿತು. ಆರ್ಯಿಕಾರತ್ನ ಶ್ರೀ 105 ಶಿವಮತಿ ಮಾತಾಜಿಯವರ ಉಪಸ್ಥಿತಿಯಲ್ಲಿ ಪೂರ್ವ ಪರಂಪರೆಯ ಪೂಜಾ ಮಂತ್ರಘೋಷದೊಂದಿಗೆ ನೆರವೇರಿತು.
ರಿಪ್ಪನ್‌ಪೇಟೆ ಸಮೀಪದ ಹೊಂಬುಜ ಜೈನಮಠದಲ್ಲಿ ಇಂದು ನಡೆದ ಶರನ್ನವರಾತ್ರಿ ಮೂರನೇ ದಿನದ ಮುತ್ತಿನಿಂದ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು. “ಜಗನ್ಮಾತೆ ಯಕ್ಷಿ ಶ್ರೀ ಪದ್ಮಾವತಿ ದೇವಿ ಇಷ್ಟಾರ್ಥವನ್ನು ದಯಪಾಲಿಸುವಂತೆ ಭಕ್ತರ ಪ್ರಾರ್ಥನೆ, ಪೂಜೆ, ಫಲಪುಷ್ಪ-ಧಾನ್ಯದಿಗಳ ಸಮರ್ಪಣೆಯಿಂದ ಮುತ್ತು ನೀಡುವ ಶೀತಲ ಪರಿಸರದಲ್ಲಿ ಸುಶೀಲವಂತರಾಗಿ ಬಾಳಿನಲ್ಲಿ ಯಶಸ್ಸು ಕಂಡುಕೊಳ್ಳುವಂತಾಗಲಿ” ಎಂದು ಶ್ರೀಗಳವರು ಪ್ರವಚನದಲ್ಲಿ ತಿಳಿಸಿ, ಭಕ್ತರನ್ನು ಹರಸಿದರು.
ಪ್ರಾತಃ ಕಾಲದಲ್ಲಿ ಕುಮದ್ವತಿ ತೀರ್ಥದಿಂದ ಅಗ್ರೋದಕವನ್ನು ತರಲಾಯಿತು. ಶಾಸ್ತ್ರೀಯ ವಾದ್ಯಗೋಷ್ಠಿ, ಜಿನಭಜನೆ, ಸ್ತ್ರೋತ್ರ ಪಠಣಗಳಿಂದ ಪೂಜಾ ಸಂಪನ್ನಗೊಂಡಿತ್ತು.
ಹೊಂಬುಜ ಶ್ರೀಕ್ಷೇತ್ರದ ಎಲ್ಲಾ ಜಿನಮಂದಿರಗಳಲ್ಲಿ ವಿಶೇಷ ಅಲಂಕಾರ, ಆರಾಧನೆ ನೆರವೇರಿತು. ಊರ ಪರವೂರ ಭಕ್ತವೃಂದದವರು, ಶ್ರೀ ಪದ್ಮಾವತಿ ಮಹಿಳಾ ಮಂಡಲದ ಶ್ರಾವಿಕೆಯರು ಪೂಜೆಯಲ್ಲಿ ಪಾಲ್ಗೊಂಡರು. ರಾತ್ರಿ ಅಷ್ಟಾವಧಾನ ಸೇವೆ, ಉತ್ಸವ ಪ್ರಸಾದ ವಿತರಣೆ ನಡೆಯಿತು.
ಪದ್ಮರಾಜ ಇಂದ್ರರು ಪುರೋಹಿತರು, ಶ್ರೀ ಮಠದ ಆಡಳಿತಾಧಿಕಾರಿ ಸಿ.ಡಿ. ಅಶೋಕ ಕುಮಾರ, ಕುಂದ ಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಭಾಗಿಯಾದರು.