ಶಿವಮೊಗ್ಗ :ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ವಿರೋಧ ವ್ಯಕ್ತಪಡಿಸಿ, ಪರಿಸರಕ್ಕಾಗಿ ನಾವು ಹಾಗೂ ರಾಷ್ಟ್ರಭಕ್ತರ ಬಳಗದ ವತಿಯಿಂದ ಫೆಬ್ರವರಿ 12ರಂದು (ಗುರುವಾರ) ಬೆಳಿಗ್ಗೆ 10 ಗಂಟೆಗೆ ಗೋಪಿರುತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಬೃಹತ್ ಪ್ರತಿಭಟನಾ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಿಸಲಾಗಿದೆ.
ಈ ಸಂಬಂಧ ನಡೆದ ಸುದ್ದಿಗೋಷ್ಠಿಯಲ್ಲಿ ನಿವೃತ್ತ ಪ್ರಾಧ್ಯಾಪಕ ಡಾ. ಡಿ.ಎಂ. ಕುಮಾರಸ್ವಾಮಿ ಮಾತನಾಡಿ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯಡಿ ಸುಮಾರು 16,000 ಮರಗಳ ಕಡಿತಕ್ಕೆ ಪ್ರಸ್ತಾವನೆ ಇದ್ದು, ಇದರಿಂದ ವನ್ಯಜೀವಿಗಳ ಆವಾಸಸ್ಥಾನಕ್ಕೆ ತೀವ್ರ ಹಾನಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಭೂಕುಸಿತ, ಜಲ ಮಾಲಿನ್ಯ, ನದಿ ಕಣಿವೆಗಳಲ್ಲಿ ಹೂಳು ತುಂಬುವ ಅಪಾಯಗಳೂ ಹೆಚ್ಚಿವೆ ಎಂದು ಎಚ್ಚರಿಸಿದರು.
ಯೋಜನೆ ಘೋಷಿತ ಶರಾವತಿ ಕಣಿವೆ ಅಭಯಾರಣ್ಯದ ಹೃದಯ ಭಾಗದಲ್ಲೇ ಜಾರಿಯಾಗುತ್ತಿರುವುದರಿಂದ, ಇದು ವನ್ಯಜೀವಿ ಸಂರಕ್ಷಣಾ ಕಾಯ್ದೆ–1972ರ ಆಶಯಕ್ಕೆ ವಿರುದ್ಧವಾಗಿದೆ ಎಂದರು. ಯೋಜನೆಯ ಅವಶ್ಯಕತೆ ಕುರಿತು ಸಮರ್ಥ ದಾಖಲೆಗಳಿಲ್ಲ, ಪರ್ಯಾಯ ಮಾರ್ಗಗಳ ಬಗ್ಗೆ ಯಾವುದೇ ತುಲನಾ ಅಧ್ಯಯನ ನಡೆಸಲಾಗಿಲ್ಲ ಎಂದು ಟೀಕಿಸಿದರು.
ಇದೇ ವೇಳೆ, ಬ್ಯಾಟರಿ ಸ್ಟೋರೇಜ್ ತಂತ್ರಜ್ಞಾನವು ಪಂಪ್ಡ್ ಸ್ಟೋರೇಜ್ ತಂತ್ರಜ್ಞಾನಕ್ಕಿಂತ ಆರ್ಥಿಕವಾಗಿ ಲಾಭದಾಯಕ ಮತ್ತು ಪರಿಸರ ಸ್ನೇಹಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಈಗಾಗಲೇ ಶರಾವತಿ ಕಣಿವೆ ಯೋಜನೆಗಳಿಂದ ಸಂಕಷ್ಟ ಅನುಭವಿಸುತ್ತಿರುವ ಸಾವಿರಾರು ಕುಟುಂಬಗಳು ಮತ್ತು ನದಿ ಕೆಳಭಾಗದ ಜನರಿಗೆ ಈ ಯೋಜನೆಯಿಂದ ಮತ್ತಷ್ಟು ಹೊರೆ ಬೀಳಲಿದೆ ಎಂದು ಹೇಳಿದರು. ಯೋಜನಾ ಪ್ರದೇಶದಲ್ಲಿರುವ ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತನ ಸ್ಥಳಗಳು ನಾಶವಾಗುವ ಸಾಧ್ಯತೆ ಇರುವುದರಿಂದ ಈ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಪರಿಸರಕ್ಕಾಗಿ ನಾವು ಸಂಘಟನೆಯ ರಾಜ್ಯಾಧ್ಯಕ್ಷ ಎ.ಟಿ. ರಾಮಸ್ವಾಮಿ, ಉಪಾಧ್ಯಕ್ಷೆ ಕವಿತಾ ಎಸ್. ಎಲೆದಳ್ಳಿ, ಪ್ರಧಾನ ಕಾರ್ಯದರ್ಶಿ ಪರಶುರಾಮ ಗೌಡ, ರಾಷ್ಟ್ರಭಕ್ತರ ಬಳಗದ ಕೆ. ಕಾಂತೇಶ್, ಬಂಗಾರುಮುಕ್ಕಿ ಮಠದ ಶ್ರೀ ಮಾರುತಿ ಸ್ವಾಮೀಜಿ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಮಾತನಾಡಿ, “ಇದು ಭೂಮಿ ಮೇಲೆ ನಡೆಯುತ್ತಿರುವ ಅತ್ಯಾಚಾರ, ಪ್ರಾಣಿ–ಪಕ್ಷಿ ಸಂಹಾರ ಮತ್ತು ₹10,200 ಕೋಟಿ ಲೂಟಿಯ ಯೋಜನೆ. ಯೋಜನೆಗೆ ಇನ್ನೂ ಕೇಂದ್ರ ಸರ್ಕಾರದ ಅಂತಿಮ ಅನುಮೋದನೆ ಬಂದಿಲ್ಲ. ಪರಿಸರ ತಜ್ಞರೊಂದಿಗೆ ಹಾಗೂ ಕೆಪಿಎಸ್‌ಸಿ ಅಧಿಕಾರಿಗಳೊಂದಿಗೆ ಚರ್ಚೆಗಳು ನಡೆದಿವೆ. ಫೆಬ್ರವರಿ 12ರಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಉತ್ತರ ನೀಡುವುದಾಗಿ ತಿಳಿಸಿದ್ದಾರೆ. ಅಗತ್ಯವಿದ್ದರೆ ವಿಷಯವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಇಂಧನ ಸಚಿವ ಜಾರ್ಜ್ ಅವರ ಗಮನಕ್ಕೂ ತರುತ್ತೇವೆ. ಯಾರೂ ಸ್ಪಂದಿಸದಿದ್ದರೆ ಸುಪ್ರೀಂ ಕೋರ್ಟ್‌ವರೆಗೆ ಹೋಗುತ್ತೇವೆ” ಎಂದರು.
ಆಗುಂಬೆಯಲ್ಲಿ ‘ಟನಲ್ ಬೇಡ’ – ಪರಿಸರ ತಜ್ಞರ ವಿರೋಧ
ಇದೇ ಸಂದರ್ಭದಲ್ಲಿ ಪರಿಸರ ತಜ್ಞರು ಆಗುಂಬೆಯಲ್ಲಿ ಸುರಂಗ ಮಾರ್ಗ (ಟನಲ್) ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ರಸ್ತೆ ಸಂಚಾರದ ಒತ್ತಡದ ನೆಪದಲ್ಲಿ ಟನಲ್ ನಿರ್ಮಿಸಲಾಗುತ್ತಿದೆ ಎಂಬ ಮಾಹಿತಿ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಇದು ಭೂಕುಸಿತಕ್ಕೆ ಕಾರಣವಾಗುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು. ಟನಲ್ ನಿರ್ಮಾಣಕ್ಕಿಂತ ಪಿಲ್ಲರ್ ಆಧಾರಿತ ರಸ್ತೆ ಅಗಲೀಕರಣ ಹೆಚ್ಚು ಸುರಕ್ಷಿತ ಹಾಗೂ ಉಪಯುಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಯಿತು.
ಆದರೆ, ಆಗುಂಬೆಯಲ್ಲಿ ಮೇಗರವಳ್ಳಿ–ಮಡಮಕೈ ನಡುವಿನ ಭಾಗದಲ್ಲಿ ಸುಮಾರು ₹3,500 ಕೋಟಿ ವೆಚ್ಚದ ಟನಲ್ ಯೋಜನೆಗೆ ಒಂದು ವಾರದಿಂದ ಹತ್ತು ದಿನಗಳೊಳಗೆ ಡಿಪಿಆರ್ ಸಿದ್ಧವಾಗುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಸಹ ಹೊರಬಂದಿದೆ. ಈ ಹಿನ್ನೆಲೆಯಲ್ಲಿ ಪರಿಸರ ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ.
MalnadTimes.com ವೆಬ್ಸೈಟ್ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ.
Malnad Times ಮೂಲಕ ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650





