HOSANAGARA ; ಕುಡಿಯುವ ನೀರಿಗಾಗಿ ಮಲೆನಾಡು ಭಾಗದ ಬೆಳಕಿನ ನದಿ ಎಂದೇ ಪ್ರಖ್ಯಾತಿ ಹೊಂದಿರುವ ಶರಾವತಿ ನದಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಯಾವುದೇ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದಿಲ್ಲ. ಇದು ಸತ್ಯಕ್ಕೆ ದೂರವಾದ ಮಾತು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು.
ಭಾನುವಾರ ತಾಲೂಕಿನ ಮೂಲೆಗದ್ದೆ ಶ್ರೀ ಸದಾನಂದ ಯೋಗಾಶ್ರಮಕ್ಕೆ ಸೌಹಾರ್ದ ಭೇಟಿ ನೀಡಿ ಮಠದ ಪೀಠಾಧ್ಯಕ್ಷ ಶ್ರೀ ಚನ್ನಬಸವ ಮಹಾ ಸ್ವಾಮೀಜಿ ಅವರೊಂದಿಗೆ ಉಭಯ ಕುಶಲೋಪರಿ ವಿಚಾರಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು.
ಹಿಂದೆ ಬೊಮ್ಮಯಿ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಆಡಳಿತದಲ್ಲಿ ಇದ್ದಾಗಲೇ ಶರಾವತಿ ನದಿ ನೀರನ್ನು ಕುಡಿಯುವ ಸಲುವಾಗಿ ಬೆಂಗಳೂರಿಗೆ ಒಯ್ಯಲು ಯೋಜನೆ ರೂಪಿಸಲು ಸರ್ಕಾರ ಮುಂದಾಗಿತ್ತು. ಬದಲಾವಣೆ ರಾಜಕೀಯ ಸನ್ನಿವೇಶದಲ್ಲಿ ಯೋಜನೆ ಕೈಗೂಡಲಿಲ್ಲ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಈ ಕುರಿತು ಡಿಪಿಆರ್ ತಯಾರಿಸಿ ಸಾಧಕ-ಬಾಧಕ ಕುರಿತು ಚರ್ಚೆ ನಡೆದಿದೆ.
ಮಲೆನಾಡಿಗರಿಗೆ ತಮ್ಮ ಪೂರ್ವಿಕರ ಕಾಲದಿಂದ ಶರಾವತಿ ನದಿ ಕುರಿತು ಇರುವ ಅನ್ಯೋನ್ಯ ಸಂಬಂಧ, ಅಣೆಕಟ್ಟು ನಿರ್ಮಾಣದಿಂದ ಆದ ಮುಳುಗಡೆ ಸಂತ್ರಸ್ತ ಕುಟುಂಬಗಳ ನೋವು, ಜನಜೀವನ, ಕಥೆ-ವ್ಯಥೆ ಕುರಿತಂತೆ ಸರ್ಕಾರ ಸಮಗ್ರ ಮಾಹಿತಿಯನ್ನು ಈಗಾಗಲೇ ಸಂಗ್ರಹಿಸಿದೆ.
ಕೆಲವು ಪರಿಸರಾಸ್ತರು ಯೋಜನೆಯ ಅನುಷ್ಠಾನಕ್ಕೆ ಭಾರಿ ವಿರೋಧ ವ್ಯಕ್ತಪಡಿಸುತ್ತಿರುವುದು, ಪ್ರತಿಭಟನೆಗೆ ಮುಂದಾಗಲು ತಂತ್ರ ರೂಪಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಕ್ಷೇತ್ರದ ಶಾಸಕನಾಗಿ ಜನಪರ ನಿಲುವು ತಾಳಬೇಕಾಗಿರುವುದು ನನ್ನ ಆದ್ಯ ಕರ್ತವ್ಯ. ಈ ಹಿನ್ನಲೆಯಲ್ಲಿ ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವ ನಾನು ಈಗಾಗಲೇ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ಪ್ರಸಕ್ತ ವಿದ್ಯಮಾನಗಳ ಕುರಿತಂತೆ ಚರ್ಚಿಸಿದ್ದೇನೆ.
ಕ್ಷೇತ್ರದ ಜನರಿಗೆ ಅನಾನುಕೂಲ ಆಗುವಂತ ಯಾವುದೇ ಯೋಜನೆಗಳ ಅನುಷ್ಠಾನದ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಅವರೇ ಸ್ಪಷ್ಟ ಪಡಿಸಿದ್ದಾರೆ. ಈ ಕುರಿತು ಕ್ಷೇತ್ರದ ಜನರು ಆತಂಕ ಪಡುವ ಅಗತ್ಯವಿಲ್ಲ. ಯೋಜನೆಯ ಅನುಷ್ಠಾನ ವಿಷಯ ಕುರಿತಂತೆ ಸ್ಥಳೀಯ ಜನರು, ಪರಿಸರಾಸ್ತರು ಕಿವಿಕೊಡಬಾರದು ಎಂದು ಬೇಳೂರು ವಿನಂತಿಸಿದರು.
ಈ ವೇಳೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಬಿ.ಚಿದಂಬರ, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜುನಾಥ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.