Shivamogga News

ಟಿವಿಎಸ್ ಕ್ರೆಡಿಟ್‌ಗೆ ಗ್ರಾಹಕ ಆಯೋಗದ ಆದೇಶ: ವಾಹನ ಹಿಂತಿರುಗಿಸಿ, ₹1.10 ಲಕ್ಷ ಪರಿಹಾರ ಪಾವತಿಸಿ

ಮುನ್ಸೂಚನೆ ನೀಡದೆ ವಾಹನ ಜಪ್ತಿ ಮಾಡಿ ಮಾರಾಟ ಮಾಡಿದ್ದ ಪ್ರಕರಣದಲ್ಲಿ ಟಿವಿಎಸ್ ಕ್ರೆಡಿಟ್ ಸರ್ವಿಸಸ್ ಸಂಸ್ಥೆಗೆ ಶಿವಮೊಗ್ಗ ಜಿಲ್ಲಾ ಗ್ರಾಹಕ ಆಯೋಗ ವಾಹನ ಹಿಂತಿರುಗಿಸುವಂತೆ ಹಾಗೂ ದೂರುದಾರರಿಗೆ ₹1.10 ಲಕ್ಷ ಪರಿಹಾರ ಪಾವತಿಸುವಂತೆ ಆದೇಶಿಸಿದೆ.

ಟಿವಿಎಸ್ ಕ್ರೆಡಿಟ್‌ಗೆ ಗ್ರಾಹಕ ಆಯೋಗದ ಆದೇಶ: ವಾಹನ ಹಿಂತಿರುಗಿಸಿ, ₹1.10 ಲಕ್ಷ ಪರಿಹಾರ ಪಾವತಿಸಿ – courts

ಶಿವಮೊಗ್ಗ: ಮುನ್ಸೂಚನೆ ನೀಡದೆ ವಾಹನ ಜಪ್ತಿ ಮಾಡಿ ಮಾರಾಟ ಮಾಡಿದ್ದ ಪ್ರಕರಣದಲ್ಲಿ ಟಿವಿಎಸ್ ಕ್ರೆಡಿಟ್ ಸರ್ವಿಸಸ್ ಸಂಸ್ಥೆಗೆ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಮಹತ್ವದ ಆದೇಶ ನೀಡಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ದೂರುದಾರರಿಗೆ ವಾಹನವನ್ನು ಹಿಂತಿರುಗಿಸುವ ಜೊತೆಗೆ, ಮಾನಸಿಕ ಹಿಂಸೆ ಮತ್ತು ವ್ಯಾಜ್ಯ ವೆಚ್ಚ ಸೇರಿ ಒಟ್ಟು ₹1.10 ಲಕ್ಷ ಪರಿಹಾರ ಪಾವತಿಸುವಂತೆ ಆಯೋಗ ಸೂಚಿಸಿದೆ.

ಶಿವಮೊಗ್ಗದ ತುಂಗಾನಗರ ನಿವಾಸಿ ಶಾಬಾಜ್ ಎಸ್. ಅವರು ಜೀವನೋಪಾಯಕ್ಕಾಗಿ ₹15,10,147 ಸಾಲ ಪಡೆದು ಐಷರ್ ಪ್ರೊ 30009 ಗೂಡ್ಸ್ ವಾಹನ ಖರೀದಿಸಿದ್ದರು. ತಿಂಗಳಿಗೆ ₹44,361 ಇಎಂಐ ನಿಗದಿಯಾಗಿದ್ದು, ಅವರು 5 ಕಂತುಗಳನ್ನು ಪಾವತಿಸಿ, 4 ಕಂತುಗಳನ್ನು ಬಾಕಿ ಉಳಿಸಿಕೊಂಡಿದ್ದರು.

2024ರ ಡಿಸೆಂಬರ್ 31ರಂದು ವಾಹನವು ಕೆಲಸದ ನಿಮಿತ್ತ ಹಾಸನಕ್ಕೆ ತೆರಳಿದ್ದ ವೇಳೆ, ಯಾವುದೇ ಪೂರ್ವ ಮಾಹಿತಿ ಅಥವಾ ನೋಟಿಸ್ ನೀಡದೆ ಟಿವಿಎಸ್ ಕ್ರೆಡಿಟ್ ಸಂಸ್ಥೆ ವಾಹನವನ್ನು ಜಪ್ತಿ ಮಾಡಿಕೊಂಡಿತ್ತು ಎಂದು ದೂರುದಾರರು ಆರೋಪಿಸಿದ್ದರು.

ನಂತರ ಆರ್‌ಬಿಐ ಮಾರ್ಗಸೂಚಿಗಳನ್ನು ಪಾಲಿಸದೆ ವಾಹನವನ್ನು ಹರಾಜು ಮೂಲಕ ಮಾರಾಟ ಮಾಡಲಾಗಿದೆ ಎಂದು 2025ರ ಫೆಬ್ರವರಿ 2ರಂದು ಸಂಸ್ಥೆ ನೋಟಿಸ್ ನೀಡಿತ್ತು. ಜೊತೆಗೆ ಬಾಕಿ ವ್ಯತ್ಯಾಸ ಮೊತ್ತವಾಗಿ ₹4,84,204 ಪಾವತಿಸುವಂತೆ ಶಾಬಾಜ್ ಅವರಿಗೆ ಸೂಚಿಸಿತ್ತು.

ಇದನ್ನು ಪ್ರಶ್ನಿಸಿ ಶಾಬಾಜ್ ಅವರು ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಮೆಟ್ಟಿಲೇರಿದ್ದರು.

ವಿಚಾರಣೆ ನಡೆಸಿದ ಆಯೋಗವು, ಆರ್‌ಬಿಐ ಮಾರ್ಗಸೂಚಿಗಳ ಉಲ್ಲಂಘನೆ ಮತ್ತು ಹೈಕೋರ್ಟ್ ತೀರ್ಪುಗಳನ್ನು ಪರಿಗಣಿಸಿ, ಹಣಕಾಸು ಸಂಸ್ಥೆಯ ನಡೆ ಸೇವಾ ನ್ಯೂನ್ಯತೆ ಮತ್ತು ಅನುಚಿತ ವ್ಯವಹಾರ ಪದ್ಧತಿ ಎಂದು ತೀರ್ಮಾನಿಸಿದೆ.

ಆದೇಶ ನೀಡಿದ ದಿನಾಂಕದಿಂದ 45 ದಿನಗಳ ಒಳಗೆ ಐಷರ್ ವಾಹನವನ್ನು ದೂರುದಾರರ ವಶಕ್ಕೆ ನೀಡಬೇಕು ಎಂದು ಆಯೋಗ ಸೂಚಿಸಿದೆ. ನಿಗದಿತ ಅವಧಿಯಲ್ಲಿ ವಾಹನ ಹಿಂತಿರುಗಿಸಲು ವಿಫಲವಾದರೆ, ವಾಹನ ಹಸ್ತಾಂತರಿಸುವವರೆಗೆ ದಿನಕ್ಕೆ ₹2,000 ದಂಡ ಪಾವತಿಸಬೇಕು ಎಂದು ಆದೇಶಿಸಲಾಗಿದೆ.

ಇದೇ ವೇಳೆ ಮಾನಸಿಕ ಹಿಂಸೆಗೆ ₹1,00,000 ಮತ್ತು ವ್ಯಾಜ್ಯ ವೆಚ್ಚವಾಗಿ ₹10,000 ಸೇರಿ ಒಟ್ಟು ₹1,10,000 ಪರಿಹಾರವನ್ನು 45 ದಿನಗಳ ಒಳಗೆ ಪಾವತಿಸಬೇಕು. ತಪ್ಪಿದಲ್ಲಿ ವಾರ್ಷಿಕ ಶೇ.10ರ ಬಡ್ಡಿ ಸಹಿತ ಮೊತ್ತ ಪಾವತಿಸಬೇಕಾಗುತ್ತದೆ.

ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ. ಶಿವಣ್ಣ ಹಾಗೂ ಸದಸ್ಯ ಬಿ.ಡಿ. ಯೋಗಾನಂದ ಅವರನ್ನೊಳಗೊಂಡ ಪೀಠ ಈ ಆದೇಶ ನೀಡಿದೆ.

ಮಾಹಿತಿ ಮತ್ತು ಮೂಲ: ಈ ವರದಿಯ ಮಾಹಿತಿ ವರದಿಗಾರರು, ಅಧಿಕೃತ ಪ್ರಕಟಣೆಗಳು ಅಥವಾ ಸ್ಥಳದಲ್ಲಿನ ವಿಶ್ವಾಸಾರ್ಹ ಮೂಲಗಳಿಂದ ಪರಿಶೀಲಿಸಲಾಗಿದೆ.

Koushik G K

MalnadTimes.com ವೆಬ್‌ಸೈಟ್‌ನ ಸ್ಥಾಪಕ ಮತ್ತು ನಿರ್ವಾಹಕರಾಗಿದ್ದಾರೆ. ಅಕ್ಟೋಬರ್ 3 2019 ರಲ್ಲಿ ಈ ತಾಣವನ್ನು ಆರಂಭಿಸಿದ ಅವರು, ಮೊದಲಿಗೆ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ತಮ್ಮ ತಾಂತ್ರಿಕ ಪರಿಣತಿಯನ್ನು ಮತ್ತು ಸ್ಥಳೀಯ ಸುದ್ದಿಗಳ ಪ್ರೀತಿಯನ್ನು ಒಂದಾಗಿಸಿ, ಮಲ್ನಾಡಿನ ಜನತೆಗೆ ನಿಖರವಾದ, ವಿಶ್ವಾಸಾರ್ಹ ಹಾಗೂ ಸಮಗ್ರ ಸುದ್ದಿಗಳನ್ನು ತಲುಪಿಸುವ ನಿಟ್ಟಿನಲ್ಲಿ ಈ ತಾಣವನ್ನು ರೂಪಿಸಿದ್ದಾರೆ. Malnad Times ಮೂಲಕ  ಶಿವಮೊಗ್ಗ ಮತ್ತು ಮಲ್ನಾಡು ಭಾಗದ ಸಮುದಾಯದ ಧ್ವನಿಯಾಗಿ, ಗ್ರಾಮೀಣ ಬದುಕು, ಪರಿಸರ, ಕೃಷಿ, ಶಿಕ್ಷಣ, ಮತ್ತು ಸಾರ್ವಜನಿಕ ವಿಚಾರಗಳನ್ನು ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.ಈ ತಾಣದ ನಿರ್ವಹಣೆ, ತಾಂತ್ರಿಕ ಹಾಗೂ ಸಂಪಾದಕೀಯ ಕಾರ್ಯಗಳಲ್ಲಿ ನಿತ್ಯ ಭಾಗವಹಿಸುತ್ತಿದ್ದಾರೆ.Contact No -7022818650