ಶಿವಮೊಗ್ಗ: ಚಾಲಕರೊಬ್ಬರ ವೈಯಕ್ತಿಕ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡು ಅವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ₹4,04,125 ಹಣವನ್ನು ಅಕ್ರಮವಾಗಿ ವರ್ಗಾಯಿಸಿಕೊಂಡಿರುವ ಘಟನೆ ನಡೆದಿದೆ. ಈ ಸಂಬಂಧ ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾಲಕನ ಮೊಬೈಲ್‌ಗೆ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗಿರುವ ಕುರಿತು ಒಂದರ ಹಿಂದೆ ಒಂದಾಗಿ ಸಂದೇಶಗಳು ಬಂದಿವೆ. ಅನುಮಾನಗೊಂಡ ಅವರು ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ, ಹಲವು ಹಂತಗಳಲ್ಲಿ ಹಣ ವರ್ಗಾವಣೆಯಾಗಿರುವುದು ಗೊತ್ತಾಗಿದೆ.
ಒಟ್ಟಾರೆ ₹4,04,125 ಹಣ ಖಾತೆಯಿಂದ ಕಡಿತವಾಗಿರುವುದನ್ನು ಗಮನಿಸಿದ ಚಾಲಕ ತಕ್ಷಣ ಸಂಬಂಧಪಟ್ಟ ಬ್ಯಾಂಕ್‌ಗೆ ತೆರಳಿ ವಿಚಾರಿಸಿದ್ದಾರೆ.
ವಿಚಾರಣೆ ವೇಳೆ ತಮ್ಮ ವೈಯಕ್ತಿಕ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡು ಅಪರಿಚಿತರು ಖಾತೆಯಿಂದ ಹಣ ವರ್ಗಾಯಿಸಿಕೊಂಡಿರುವುದು ತಿಳಿದುಬಂದಿದೆ.
ಬಳಿಕ ವಂಚನೆಗೊಳಗಾದ ಚಾಲಕ ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

