ಶಿವಮೊಗ್ಗ: ಮಾಹಿತಿ ತಂತ್ರಜ್ಞಾನ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಶಿವಮೊಗ್ಗ ಜಿಲ್ಲೆ ಪ್ರಮುಖ ಹೂಡಿಕೆ ತಾಣವಾಗಿ ಹೊರಹೊಮ್ಮಬೇಕೆಂದು ಶಾಸಕ ಎಸ್.ಎನ್. ಚನ್ನಬಸಪ್ಪ ಅಭಿಪ್ರಾಯಪಟ್ಟರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೆರೋಕಾಸ್ಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನಾಚರಣೆ ಹಾಗೂ ರಾಷ್ಟ್ರೀಯ ಇಂಜಿನಿಯರ್ಸ್ ಡೇ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿವಮೊಗ್ಗ ಜಿಲ್ಲೆ ಈಗಾಗಲೇ ಆಟೋಮೊಬೈಲ್ ಉದ್ಯಮಕ್ಕೆ ಅಗತ್ಯವಿರುವ ವಿವಿಧ ಉತ್ಪನ್ನಗಳನ್ನು ಪೂರೈಸುವ ಸಾಮರ್ಥ್ಯ ಹೊಂದಿದೆ. ಇಲ್ಲಿನ ಕೆಲವು ಕೈಗಾರಿಕಾ ಘಟಕಗಳು ತಮ್ಮ ಉತ್ಪನ್ನಗಳನ್ನು ವಿದೇಶಗಳಿಗೂ ರಫ್ತು ಮಾಡುತ್ತಿವೆ. ಐರನ್ ಕಾಸ್ಟಿಂಗ್ ಸೇರಿದಂತೆ ಹಲವು ಉತ್ಪನ್ನಗಳ ತಯಾರಿಕೆಯಲ್ಲಿ ಶಿವಮೊಗ್ಗಕ್ಕೆ ತನ್ನದೇ ಆದ ಗುರುತಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಮತ್ತಷ್ಟು ಕೈಗಾರಿಕಾ ಹೂಡಿಕೆ ಆಕರ್ಷಿಸಲು ಸರ್ಕಾರ ಅಗತ್ಯ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಬೆಂಗಳೂರಿನಾಚೆ ಕೈಗಾರಿಕಾ ಬೆಳವಣಿಗೆಗೆ ಗುರುತಿಸಲಾಗುವ ನಗರಗಳ ಪಟ್ಟಿಯಲ್ಲಿ ಶಿವಮೊಗ್ಗಕ್ಕೂ ಸ್ಥಾನ ನೀಡಬೇಕು. ಈ ಕುರಿತು ಸರ್ವಪಕ್ಷಗಳ ನಿಯೋಗದೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲೆಯ ಕೈಗಾರಿಕಾ ಬೆಳವಣಿಗೆಗೆ ಸರ್ ಎಂ. ವಿಶ್ವೇಶ್ವರಯ್ಯ ಅವರ ಕೊಡುಗೆ ಮಹತ್ವದ್ದಾಗಿದೆ. ಭದ್ರಾವತಿಯಲ್ಲಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸ್ಥಾಪನೆ, ಶ್ರೀಗಂಧದ ಎಣ್ಣೆ ಉದ್ಯಮ, ಮೈಸೂರು ಪೇಪರ್ ಮಿಲ್ಸ್, ಶಿವಮೊಗ್ಗ–ತಾಳಗುಪ್ಪ ರೈಲು ಮಾರ್ಗ ಹಾಗೂ ಜೋಗ ಜಲಪಾತದ ಶರಾವತಿ ಜಲವಿದ್ಯುತ್ ಯೋಜನೆ ಸೇರಿದಂತೆ ಹಲವು ಯೋಜನೆಗಳು ಜಿಲ್ಲೆಯ ಅಭಿವೃದ್ಧಿಗೆ ಬುನಾದಿಯಾಗಿವೆ ಎಂದು ಚನ್ನಬಸಪ್ಪ ಸ್ಮರಿಸಿದರು.
ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, ಸರ್ ಎಂ. ವಿಶ್ವೇಶ್ವರಯ್ಯ ಅವರು ಕೇವಲ ಇಂಜಿನಿಯರ್ ಮಾತ್ರವಲ್ಲದೆ ಅತ್ಯುತ್ತಮ ಆಡಳಿತಗಾರರಾಗಿದ್ದರು. ಅವರ ಸೇವೆ ಕರ್ನಾಟಕಕ್ಕೆ ಮಾತ್ರ ಸೀಮಿತವಾಗದೆ ದೇಶದ ಅಭಿವೃದ್ಧಿಗೂ ಮಹತ್ವದ ಕೊಡುಗೆ ನೀಡಿದೆ ಎಂದರು.
ಶಿವಮೊಗ್ಗದ ಕೈಗಾರಿಕಾ ವಲಯ ಎದುರಿಸುತ್ತಿರುವ ವಿದ್ಯುತ್ ಸಮಸ್ಯೆ ತಮ್ಮ ಗಮನದಲ್ಲಿದ್ದು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ. ಗೋಪಿನಾಥ್ ಮಾತನಾಡಿ, ಬೆಂಗಳೂರಿನಾಚೆ ಕೈಗಾರಿಕಾ ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ ಆಯ್ಕೆ ಮಾಡಲಾಗುವ ಪ್ರಮುಖ ನಗರಗಳಲ್ಲಿ ಶಿವಮೊಗ್ಗವನ್ನು ಸೇರಿಸಬೇಕು ಎಂದು ಒತ್ತಾಯಿಸಿದರು.
ಫೌಂಡ್ರಿ ಉದ್ಯಮ, ಶಿಮುಲ್, ಆಹಾರ ಸಂಸ್ಕರಣಾ ಘಟಕಗಳು ಸೇರಿದಂತೆ ಹಲವು ಕೈಗಾರಿಕೆಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಜೊತೆಗೆ ವಿಮಾನ ನಿಲ್ದಾಣ, ಸಂಪರ್ಕ ವ್ಯವಸ್ಥೆ ಹಾಗೂ ಇತರೆ ಮೂಲಸೌಕರ್ಯಗಳಿರುವುದರಿಂದ ಶಿವಮೊಗ್ಗ ಹೂಡಿಕೆದಾರರಿಗೆ ಅನುಕೂಲಕರ ತಾಣವಾಗುವ ಸಾಮರ್ಥ್ಯ ಹೊಂದಿದೆ ಎಂದರು.
ಶಿವಮೊಗ್ಗವನ್ನು ಐಟಿ ಸೇವೆಗಳ ರಫ್ತು ಕೇಂದ್ರವಾಗಿ ಹಾಗೂ ಡಿಜಿಟಲ್ ಶಕ್ತಿ ಕೇಂದ್ರವಾಗಿ ರೂಪಿಸಲು ಸರ್ಕಾರ ವಿಶೇಷ ಕ್ರಮ ಕೈಗೊಳ್ಳಬೇಕು. ದೇಶೀಯ ಮತ್ತು ಜಾಗತಿಕ ಹೂಡಿಕೆಗಳನ್ನು ಸೆಳೆಯುವ ಉದಯೋನ್ಮುಖ ಕೈಗಾರಿಕಾ ಕ್ಲಸ್ಟರ್ ಆಗಿ ಜಿಲ್ಲೆಯನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕೈಗಾರಿಕೋದ್ಯಮಿ ಎಸ್. ರುದ್ರೇಗೌಡ, ಸಂಘದ ಉಪಾಧ್ಯಕ್ಷ ಜಿ. ವಿಜಯಕುಮಾರ್, ಕಾರ್ಯದರ್ಶಿ ಎ.ಎಂ. ಸುರೇಶ್, ಸಹ ಕಾರ್ಯದರ್ಶಿ ಕೆ.ಎಸ್. ಸುಕುಮಾರ್, ಖಜಾಂಚಿ ಆರ್. ಮನೋಹರ, ನಿರ್ದೇಶಕರು, ಮಾಜಿ ಅಧ್ಯಕ್ಷರು ಹಾಗೂ ವಿವಿಧ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇದೇ ವೇಳೆ ಎಸ್‌ಜಿಎಂ ಟೆಕ್ನಾಲಜಿಸ್, ಶ್ರೀ ವಾಸವಿ ಫೌಂಡ್ರಿ ಹಾಗೂ ಸಿಲಿಕನ್ ಸಾಫ್ಟ್‌ವೇರ್ ಸಂಸ್ಥೆಗಳಿಗೆ 2026ನೇ ಸಾಲಿನ ‘ಹೆಮ್ಮೆಯ ಕೈಗಾರಿಕಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಶಾಂತಲಾ ಸ್ಪೆರೋಕಾಸ್ಟ್ ಸಂಸ್ಥೆಯ ಭಾಸ್ಕರ್ ಆರ್. ಹಾಗೂ ಟೆಕ್ನೋ ರಿಂಗ್ಸ್ ಸಂಸ್ಥೆಯ ಪಿ.ಕೆ. ವಿಜಯ್ ಅವರಿಗೆ ಅತ್ಯುತ್ತಮ ಕಾರ್ಮಿಕ ಪ್ರಶಸ್ತಿ ನೀಡಲಾಯಿತು.
ಸರ್ ಎಂ. ವಿಶ್ವೇಶ್ವರಯ್ಯ ಅವರ ಕುರಿತು ನಡೆದ ರಸಪ್ರಶ್ನೆ ಮತ್ತು ಭಾಷಣ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಂಘದ ಅಜೀವ ಸದಸ್ಯರಿಗೆ ಗುರುತಿನ ಚೀಟಿಗಳನ್ನೂ ನೀಡಲಾಯಿತು.

