ಶ್ರೀ ಪಾರ್ಶ್ವನಾಥ ಸ್ವಾಮಿ ಶ್ರೀ ಪದ್ಮಾವತಿ ದೇವಿ ಮಹಾರಥಾರೋಹಣ | ‘ಭಕ್ತವೃಂದ ಭಕ್ತಿ ಸಿಂಚನ ; ಜೈಕಾರ ಸಮೃದ್ಧ ವೃದ್ಧಿ, ಆರೋಗ್ಯ, ಸಾಮರಸ್ಯಕ್ಕಾಗಿ ಪ್ರಾರ್ಥನೆ ಸತ್ಫಲ ನೀಡಲಿ’ – ಹೊಂಬುಜ ಶ್ರೀಗಳು

0 329

ರಿಪ್ಪನ್‌ಪೇಟೆ : ಅತಿಶಯ ಶ್ರೀಕ್ಷೇತ್ರ ಹೊಂಬುಜದ ಭಗವಾನ ಶ್ರೀ ಪಾರ್ಶ್ವನಾಥ ಸ್ವಾಮಿ ಶ್ರೀ ಪದ್ಮಾವತಿ ದೇವಿ ರಥಾರೋಹಣವು ಪೂರ್ವಪರಂಪರೆಯಂತೆ ಮೂಲನಕ್ಷತ್ರದ ಶುಭ ಮುಹೂರ್ತದಲ್ಲಿ ನಿತ್ಯವಿಧಿ ಸಹಿತ (1.05 ಗಂಟೆಗೆ) ವಿಧಿವತ್ತಾಗಿ ನೆರವೇರಿತು. ಜೈ ಪಾರ್ಶ್ವನಾಥ ಸ್ವಾಮಿ, ಜಯ ಶ್ರೀ ಪದ್ಮಾವತಿ ದೇವಿ ಎಂಬ ಭಕ್ತವೃಂದದವರ ಜಯಘೋಷ, ವಾದ್ಯಗೋಷ್ಠಿ, ಚೆಂಡೆ, ಡೋಲು, ನಾನಾ ಘಂಟಾನಾದಗಳಿಂದ ಶ್ರೀ ಕ್ಷೇತ್ರದಲ್ಲಿ ಧರ್ಮಪ್ರಜ್ಞೆಯ ನೈಜ ಚಿತ್ರಣ ಕಂಡು ಬಂದಿತ್ತು. ಪ್ರಸಾದ ಬೇಡಿಕೆ ಬಳಿಕ ರಥಯಾತ್ರೆಗೆ ಚಾಲನೆ ನೀಡಲಾಯಿತು.

ಮುನಿಶ್ರೀ 108 ಅಮೋಘಕೀರ್ತಿ ಮಹಾರಾಜರು, ಮುನಿಶ್ರೀ 108 ಅಮರಕೀರ್ತಿ ಮಹಾರಾಜರು, ಆರ್ಯಿಕಾ 105 ಪದ್ಮಶ್ರೀ ಮಾತಾಜಿಯವರ ಸಾನಿಧ್ಯದಲ್ಲಿ ರಥಾರೋಹಣ ವಿಧಿಗಳು ಸಾಂಪ್ರದಾಯಿಕವಾಗಿ ನೆರವೇರಿದವು.

ಹೊಂಬುಜ ಶ್ರೀ ಜೈನ ಮಠದ ಪಟ್ಟಾಚಾರ್ಯವರ್ಯರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳವರ ದಿವ್ಯ ಸಾನಿಧ್ಯ, ನೇತೃತ್ವ, ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಿಗಳು ಸಂಪನ್ನಗೊಂಡವು.

ಭಕ್ತರ ಸಂಭ್ರಮ, ಸಡಗರ, ಧನ್ಯತಾಭಾವ ಶ್ರೀಕ್ಷೇತ್ರಕ್ಕೆ ಆಗಮಿಸಿದ ಸಾವಿರಾರು ಪರವೂರ ಭಕ್ತರು, ಊರಭಕ್ತಾದಿಗಳು ಬಿರುಬಿಸಿಲಿನ ಬೇಗೆಯನ್ನು ಲೆಕ್ಕಿಸದೇ ಶ್ರೀ ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಉತ್ಸವ, ರಥಾರೋಹಣ ವೀಕ್ಷಿಸಿ ಸಂಭ್ರಮಿಸಿದರು. ಧನ್ಯತಾಭಾವ ಪ್ರಕಟಗೊಂಡು ಇಷ್ಟಾರ್ಥ ನೆರವೇರಲು ಪ್ರಾರ್ಥಿಸಿಕೊಂಡರು.

ಅನ್ನಪ್ರಸಾದದ ವ್ಯವಸ್ಥೆ, ಭಕ್ತರಿಗೆ ವಸತಿ, ವಾಹನ ನಿಲುಗಡೆ, ಕುಡಿಯುವ ಶುದ್ಧ ನೀರಿನ ವ್ಯವಸ್ಥೆಯನ್ನು ಶ್ರೀಮಠದಿಂದ ಕಲ್ಪಿಸಲಾಗಿತ್ತು.
ಕಂಬದಹಳ್ಳಿ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ, ಸೋಂದಾ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಅಕಲಂಕಕೇಸರಿ ಭಟ್ಟಾಕಲಂಕ ಭಟ್ಟಾರಕ ಮಹಾಸ್ವಾಮೀಜಿಯವರು ದಿವ್ಯ ಉಪಸ್ಥಿತಿಯನ್ನು ನೀಡಿ, ಭಕ್ತರನ್ನು ಹರಸಿದರು.

ಅಲಂಕೃತ ಗಜ ಐಶ್ವರ್ಯ, ಅಶ್ವ ಮಾನವಿ ಶ್ರೀದೇವರ ರಥೋತ್ಸವ ಮಹೋತ್ಸವದಲ್ಲಿ ವಿಶೇಷ ಮೆರಗು ನೀಡಿತ್ತು.

Leave A Reply

Your email address will not be published.

error: Content is protected !!