ಸೌರಶಕ್ತಿಯನ್ನು ಸರಿಯಾಗಿ ಬಳಸಿಕೊಂಡು ಅದರಿಂದ ಆರ್ಥಿಕ ಸಬಲೀಕರಣಕ್ಕೆ ಒತ್ತು ಕೊಡಬೇಕು ; ಗುರುಪ್ರಕಾಶ್ ಶೆಟ್ಟಿ

0 49


ಹೊಸನಗರ : ಸೌರಶಕ್ತಿಯನ್ನು ಸರಿಯಾಗಿ ಬಳಸಿಕೊಂಡು ಅದರಿಂದ ಆರ್ಥಿಕ ಸಬಲೀಕರಣಕ್ಕೆ ಒತ್ತು ಕೊಡಬೇಕೆಂದು ಸೆಲ್ಕೋ ಸೋಲಾರ್ ಲೈಟ್ ಪ್ರೈ.ಲಿ. ನ ಉಪಮಹಾಪ್ರಬಂಧಕ ಗುರುಪ್ರಕಾಶ್ ಶೆಟ್ಟಿ ತಿಳಿಸಿದರು‌.


ಕಾರಣಗಿರಿ ಗ್ರಾಮಭಾರತಿ ಟ್ರಸ್ಟ್ ಆಶ್ರಯದಲ್ಲಿ ಸೆಲ್ಕೋ ಸೋಲಾರ್ ಸಂಸ್ಥೆಯ ಸಹಯೋಗದಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಲಾರ್ ಮೂಲಕ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿ ಅವರು ಮಾತನಾಡಿ, ಗ್ರಾಮಾಂತರ ಪ್ರದೇಶದ ಮಕ್ಕಳು ನಗರ ಪ್ರದೇಶದವರಿಗಿಂತ ಶಿಕ್ಷಣದಲ್ಲಿ ಕಡಿಮೆಯಾಗದಂತೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಅಭ್ಯಾಸ ಮಾಡಲು ಸೆಲ್ಕೋ ಸಂಸ್ಥೆ ಪ್ರಯತ್ನಿಸುತ್ತಿದೆ. ಇದಲ್ಲದೆ ಗ್ರಾಮೀಣ ಜನ ತಮ್ಮ ಕಸುಬುಗಳಿಂದಾಗಿ ಸೋಲಾರ್ ಮೂಲಕ ತಂತ್ರಜ್ಞಾನವನ್ನು ಬಳಸಿಕೊಂಡು ಆರ್ಥಿಕ ಸಬಲೀಕರಣಕ್ಕೆ ನೆರವಾಗಲು ಸೆಲ್ಕೋ ಸಹಕರಿಸುತ್ತಿದೆ ಎಂದರು.


ಪರಿಸರ ಕಾರ್ಯಕರ್ತ ಹನಿಯರವಿ ಮಾತನಾಡಿ, ಜಾಗತಿಕ ತಾಪಮಾನಕ್ಕೆ ಕಾರಣವಾಗುವ ಹಸಿರುಮನೆ ಅನಿಲಗಳಲ್ಲಿ ಮೂರನೇ ಒಂದರಷ್ಟು ವಿದ್ಯುತ್ ಉತ್ಪಾದನೆಯಿಂದಾಗುತ್ತದೆ. ಒಂದು ಯೂನಿಟ್ ವಿದ್ಯುತ್ ಉತ್ಪಾದನೆಗೆ 875 ಗ್ರಾಂ. ಕಲ್ಲಿದ್ದಲು ಸುಡಬೇಕಾಗುತ್ತದೆ. ವಿದ್ಯುತ್ತಿನ ಅನವಶ್ಯಕ ಬಳಕೆಯಿಂದಾಗಿ ಮಾಲಿನ್ಯವೂ ಮಿತಿಮೀರುತ್ತಿದೆ. ಅದಕ್ಕೆ ಬದಲಾಗಿ ಇತರ ಮೂಲಗಳ ಕಡೆ ಗಮನಕೊಡಬೇಕು. ಗ್ರಾಮಭಾರತಿ ಟ್ರಸ್ಟ್‌ನ 10 ವರ್ಷಗಳ ಪ್ರಯತ್ನದಿಂದ ಈಗ ಸೋಲಾರ್‌ನಿಂದ ವರ್ಷಕ್ಕೆ 64 ಸಾವಿರ ಯೂನಿಟ್ ವಿದ್ಯುತ್ ಉತ್ಪಾದನೆಯಾಗುತ್ತಿದ್ದು ಇದರಿಂದ ಅಷ್ಟೇ ಪ್ರಮಾಣದಲ್ಲಿ ಇಂಗಾಲವನ್ನು ಕಡಿಮೆ ಮಾಡಿದಂತಾಗಿದೆ ಎಂದರು.


ಗ್ರಾಮಭಾರತಿ ಟ್ರಸ್ಟ್‌ನ ಅಧ್ಯಕ್ಷ ಎನ್. ಡಿ. ನಾಗೇಂದ್ರರಾವ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ನಳಿನಚಂದ್ರ, ಸೆಲ್ಕೋ ಪ್ರಾದೇಶಿಕ ವ್ಯವಸ್ಥಾಪಕ ಶೇಖರಶೆಟ್ಟಿ, ಸುರೇಶ್ ನಾಯಕ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಜೇಶ್, ಗ್ರಾಮಪಂಚಾಯ್ತಿ ಸದಸ್ಯ ಹನಿಯ ಗುರುಮೂರ್ತಿ, ಶಾಖಾ ವ್ಯವಸ್ಥಾಪಕ ಈಶ್ವರ್, ಸಿಂಧು, ಶೈಲಜ, ರಮೇಶ್, ವಿಜೇತ ಪಿ. ರೋಡ್ರಿಗ್ಸ್, ವೀರಪ್ಪಗೌಡ, ವಿನಾಯಕ ಪ್ರಭು ಮುಂತಾದವರು ಉಪಸ್ಥಿತರಿದ್ದರು.

ಶಿಕ್ಷಕಿ ಸವಿತಾ ನಿರೂಪಿಸದರು, ಶಿಕ್ಷಕ ತಿರುಪತಿ ನಾಯಕ್ ಸ್ವಾಗತಿಸಿ, ಶಿಕ್ಷಕಿ ಜಯಲಕ್ಷ್ಮಿ ವಂದಿಸಿದರು.

Leave A Reply

Your email address will not be published.

error: Content is protected !!