ಹೊಸನಗರ: ಹೊಸದಾಗಿ 1 ಲಕ್ಷ ಲೀಟರ್ ನೀರು ಸಂಗ್ರಹಿಸುವ ಗಾತ್ರದ ನೀರಿನ ತೊಟ್ಟಿಯನ್ನು ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ಮಾರುತಿಪುರ ಗ್ರಾಮದಲ್ಲಿ ಅಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಬಿ.ಚಿದಂಬರ ಶಿಥಿಲ ತೊಟ್ಟಿಯ ಮೇಲೇರಿ ಪ್ರತಿಭಟನೆ ನಡೆಸಿದರು.
ಅಧಿಕಾರಿಗಳ ನಿರ್ಲಕ್ಷ್ಯತನದಿಂದಾಗಿ ಗ್ರಾಮದ ಜನರಿಗೆ ಶುಧ್ಧ ನೀರು ಸರಬರಾಜು ಮಾಡಲು ಆಗುತ್ತಿಲ್ಲ. ಈಗಿರುವ ತೊಟ್ಟಿ ಸಂಪೂರ್ಣ ಹಾಳಾಗಿದ್ದು, ಗಿಡಗಳು ತೊಟ್ಟಿಯಲ್ಲಿ ಬೆಳೆದು ನಿಂತಿದೆ. ಅಲ್ಲದೇ ನೀರು ಸೋರುತ್ತಿದೆ. ಪಿಲ್ಲರ್‌ಗಳು ಶಿಥಿಲಗೊಂಡಿವೆ. ಐದಾರು ವರ್ಷಗಳಿಂದಲೂ ನೂತನ ತೊಟ್ಟಿ ನಿರ್ಮಾಣಕ್ಕೆ ಪ್ರಸ್ತಾಪನೆ ಕಳುಹಿಸಿದರೂ ಪ್ರಯೋಜನ ಆಗುತ್ತಿಲ್ಲ ಎಂದು ದೂರಿದರು.
ಬೇಸಿಗೆ ಸಮೀಪಿಸುತ್ತಿದ್ದು, ನೀರಿಗಾಗಿ ಬೇಡಿಕೆ ಹೆಚ್ಚುತ್ತಿದೆ. ಗ್ರಾಮ ಪಂಚಾಯಿತಿ ಆಡಳಿತದಿಂದ ನೀರು ಸರಬರಾಜು ಮಾಡುವುದು ಕಷ್ಟವಾಗುತ್ತಿದೆ. ಗ್ರಾಮಸ್ಥರು ಸ್ಥಳೀಯ ಆಡಳಿತವನ್ನು ದೂಷಿಸತೊಡಗಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸ್ಥಳೀಯ ಜನಪ್ರತಿನಿಧಿಗಳು ಇಕ್ಕಟ್ಟಿನಲ್ಲಿ ಸಿಲುಕುವಂತಾಗಿದೆ. ಹೊಸದಾಗಿ ತೊಟ್ಟಿ ನಿರ್ಮಾಣಕ್ಕೆ ಅನುಮೋದನೆ ನೀಡುವವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ಪಟ್ಟು ಹಿಡಿದರು.
ಸ್ಥಳಕ್ಕೆ ಅಗ್ನಿಶಾಮಕ ದಳ, ತಾಲೂಕು ಪಂಚಾಯಿತಿ ಕರ‍್ಯನಿರ್ವಹಣಾಧಿಕಾರಿ ಪ್ರವೀಣ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು.
ಜಲಜೀವನ್ ಮಿಷನ್ ಯೋಜನೆಯಡಿ 1 ಲಕ್ಷ ಲೀ. ಸಾಮರ್ಥ್ಯದ ತೊಟ್ಟಿ ಮಂಜೂರಾಗಿದ್ದು, ಟೆಂಡರ್ ಕರೆದಾಗ ಯಾವುದೇ ಗುತ್ತಿಗೆದಾರ ಭಾಗವಹಿಸಿರಲಿಲ್ಲ. ಮತ್ತೊಮ್ಮೆ ರೀಟೆಂಡರ್ ಕರೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಶಿವಪ್ರಸಾದ್ ಈ ವೇಳೆ ಮಾಹಿತಿ ನೀಡಿದರು.
ಇನ್ನು 15 ದಿನಗಳ ಒಳಗಾಗಿ ಟೆಂಡರ್ ಪ್ರಕ್ರಿಯೆ ಮುಗಿಸಿ ಕಾಮಗಾರಿ ನಡೆಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ ಬಳಿಕ ಪ್ರತಿಭಟನೆ ಅಂತ್ಯಗೊಳಿಸಿದರು.
ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಬಿ.ಚಿದಂಬರ, ಸದಸ್ಯರಾದ ಇಂದ್ರೇಶ, ಚಂದ್ರಪ್ಪ, ಜಿ.ಎಂ.ಪ್ರಕಾಶ್, ದೀಪಿಕಾ, ಆಮ್‌ಆದ್ಮಿ ಪಕ್ಷದ ಸಂಚಾಲಕ ಸೋಗೋಡು ಗಣೇಶ ಮತ್ತಿತರರು ಪಾಲ್ಗೊಂಡಿದ್ದರು.