ವಿಶ್ವೇಶ್ವರಯ್ಯ ಸೊಸೈಟಿ ಚುನಾವಣೆ, ಅಭ್ಯರ್ಥಿ ಬಗ್ಗೆ ಗಂಭೀರ ಆರೋಪ

0 246

ಶಿವಮೊಗ್ಗ: ಇಲ್ಲಿನ ಪ್ರತಿಷ್ಠಿತ ಸರ್.ಎಂ.ವಿಶ್ವೇಶ್ವರಯ್ಯ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕ ಮಂಡಳಿಯ ಚುನಾವಣೆ ನಾಳೆ ನಡೆಯಲಿದೆ. ಈ ಚುನಾವಣೆಯಲ್ಲಿ ಸೊಸೈಟಿಯ ಸುಮಾರು 3200 ಷೇರುದಾರರು ಮತ ಚಲಾಯಿಸಲಿದ್ದಾರೆ. ಈಗಾಗಲೇ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಷೇರುದಾರರ ಮನೆಗಳಿಗೆ ವೈಯಕ್ತಿಕವಾಗಿ ಮತ್ತು ತಂಡೋಪ ತಂಡವಾಗಿ ಭೇಟಿ ನೀಡಿ ಮತಯಾಚನೆ ನಡೆಸುತ್ತಿದ್ದಾರೆ.

ಈ ಸೊಸೈಟಿಯ ಪ್ರಸಕ್ತ ಆಡಳಿತ ಮಂಡಳಿಯಲ್ಲಿರುವ ನಿರ್ದೇಶಕರನೇಕರು ಒಂದು ಗುಂಪು ರಚಿಸಿಕೊಂಡು ಹಿಂದಿನಂತೆಯೇ ಈ ಬಾರಿಯೂ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಈ ಗುಂಪಿನಲ್ಲಿರುವ ಓರ್ವ ಅಭ್ಯರ್ಥಿಯ ಬಗ್ಗೆ ವಿಶ್ವೇಶ್ವರಯ್ಯ ಸೊಸೈಟಿಯ ಷೇರುದಾರರ ವಲಯದಲ್ಲಿ ಆಕ್ಷೇಪಾರ್ಹ ಮಾತುಗಳು ಕೇಳಿಬರುತ್ತಿವೆ.

ಕಳೆದ ಅವಧಿಯಲ್ಲಿ ಈ ಸೊಸೈಟಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದವರೊಬ್ಬರಿಗೆ 2020ರಲ್ಲಿ ಬೆಳಕಿಗೆ ಬಂದಿದ್ದ ಬೆಂಗಳೂರಿನ ವಸಿಷ್ಠ ಸೌಹಾರ್ದ ಸೊಸೈಟಿಯ ಹಗರಣದ ತಳಕು ಹಾಕಲಾಗುತ್ತಿದೆ. ಇದಕ್ಕೆ ಕಾರಣ ಅವರು ವಸಿಷ್ಠ ಸಹಕಾರಿಯ ಅಧ್ಯಕ್ಷರಾಗಿದ್ದ ಕೆ.ಎನ್. ವೆಂಕಟನಾರಾಯಣ ಅವರ ಅಳಿಯ ಎಂಬುದು ಮತ್ತು ಅವರು ತಮ್ಮ ಮಾವನನ್ನು ವಿಶ್ವೇಶ್ವರಯ್ಯ ಸೊಸೈಟಿಗೆ ಆಹ್ವಾನಿಸಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗೆ ಪಾಠ ಹೇಳಿಸಿದ್ದರು.

ವೆಂಕಟನಾರಾಯಣ ಅವರು 500 ಕೋಟಿಗೂ ಹೆಚ್ಚಿನ ಮೊತ್ತದ ಹಗರಣದಲ್ಲಿ ಆರೋಪಿಯಾಗಿ ಬಂಧಿಸಲ್ಪಟ್ಟಿದ್ದರು. ಈ ಹಗರಣದ ಬಗ್ಗೆ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ತನಿಖೆ ಕೂಡ ನಡೆಯುತ್ತಿದೆ.


ಪ್ರಸ್ತುತ ವಿಶ್ವೇಶ್ವರಯ್ಯ ಸೊಸೈಟಿ ಚುನಾವಣೆಗೆ ಹಾಲಿ ನಿರ್ದೇಶಕ ಮಂಡಳಿಯ ಗುಂಪಿನಲ್ಲಿರುವ ಆರೋಪಿಯಾದ ವೆಂಕಟನಾರಾಯಣ ಅವರ ಶಿವಮೊಗ್ಗ ಅಳಿಯ ಮೂರು ವರ್ಷದ ಹಿಂದೆ ವಸಿಷ್ಠ ಸಹಕಾರಿ ಹಗರಣ ಬೆಳಕಿಗೆ ಬಂದ ಸಂದರ್ಭದಲ್ಲಿಯೇ ಶಿವಮೊಗ್ಗದಲ್ಲಿ ಕಾಂಪ್ಲೆಕ್ಸ್ ನಿರ್ಮಾಣ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಿಬಿಐ ಯಾವುದೇ ಕ್ಷಣದಲ್ಲಿ ಇವರ ಮನೆ ಬಾಗಿಲು ತಟ್ಟಬಹುದು.

ಹೀಗಾಗಿ ಇಲ್ಲಿನ ವಿಶ್ವೇಶ್ವರಯ್ಯ ಸೊಸೈಟಿಗೂ ಮುಂದಿನ ದಿನಗಳಲ್ಲಿ ಕಳಂಕ ಬರಬಾರದು ಎಂದರೆ ಕಳಂಕಿತರ ಸಂಬಂಧಿಗಳು ಇಲ್ಲಿ ನಿರ್ದೇಶಕರಾಗಿ ಆಯ್ಕೆಯಾಗಬಾರದು ಎಂಬುದು ಕೆಲವು ಅಭ್ಯರ್ಥಿಗಳ ಅಭಿಪ್ರಾಯ ವಾಗಿದ್ದು, ಇದಕ್ಕೆ ಎಷ್ಟರಮಟ್ಟಿಗೆ ಪ್ರಾಧಾನ್ಯತೆ ಸಿಗುತ್ತದೆ ಎಂಬುದು ಫಲಿತಾಂಶದ ಬಳಿಕ ದೃಢಪಡಲಿದೆ.

Leave A Reply

Your email address will not be published.

error: Content is protected !!