ಡಿ.25ಕ್ಕೆ ಕಲಗೋಡು ರತ್ನಾಕರ ಅವರಿಗೆ ಡಾ.ಚಿಕ್ಕಕೋಮಾರಿಗೌಡ ದತ್ತಿ ಪ್ರಶಸ್ತಿ ಪ್ರದಾನ

0 1,119

ಹೊಸನಗರ : ತಮ್ಮ 34 ವರ್ಷಗಳ ಸುಧೀರ್ಘ ರಾಜಕೀಯ ಜೀವನದ ಜನಸೇವೆ ಪರಿಗಣಿಸಿ ಕರ್ನಾಟಕ ಪಂಚಾಯತ್ ರಾಜ್ ಪರಿಷತ್ ವ್ಯವಸ್ಥೆಯಡಿ ನೀಡಲಾಗುವ ‘ಅತ್ಯುತ್ತಮ ಪಂಚಾಯತ್ ರಾಜ್ ಜನಪ್ರತಿನಿಧಿ’ ಪ್ರಶಸ್ತಿಗೆ ಭಾಜನರಾಗಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಶಿವಮೊಗ್ಗ ಜಿಲ್ಲೆಯ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ ಅವರಿಗೆ ಇದೇ ಡಿ. 25ರ ಸೋಮವಾರ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ಡಾ. ಅಂಬೇಡ್ಕರ್ ಸಮುದಾಯ ಭವನದಲ್ಲಿ ಏರ್ಪಡಿಸಿರುವ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ 2021-22ನೇ ಸಾಲಿನ ಡಾ. ಚಿಕ್ಕಕೋಮಾರಿಗೌಡ ದತ್ತಿ ಪ್ರಶಸ್ತಿ ಪ್ರಧಾನ ನಡೆಯಲಿದೆ.

ಗುಂಡ್ಲುಪೇಟೆ ಶಾಸಕ ಹೆಚ್.ಎಂ. ಗಣೇಶ್ ಪ್ರಸಾದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ಪಂಚಾಯತ್ ರಾಜ್ ಪರಿಷತ್ತಿನ ಅಧ್ಯಕ್ಷ ಹಾಗು 5ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ. ನಾರಾಯಣಸ್ವಾಮಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಪಂಚಾಯತ್ ರಾಜ್ ದಾರಿದೀಪ ‘ನಜೀರ್ ಸಾಬ್’ ಎಂಬ ಪುಸ್ತಕವನ್ನು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಬಿಡುಗಡೆ ಮಾಡಲಿದ್ದಾರೆ.

ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಪ್ರಮೋದ್ ಹೆಗಡೆ ದತ್ತಿ ಪ್ರಶಸ್ತಿ ಪುರಸ್ಕಾರ ಪ್ರದಾನ ಮಾಡಲಿದ್ದಾರೆ.
ಸುಮಾರು 34 ವರ್ಷಗಳ ನಿರಂತರ ಜನಸೇವೆ ಪರಿಗಣಿಸಿ ಕರ್ನಾಟಕ ಪಂಚಾಯತ್ ರಾಜ್ ಪರಿಷತ್ ವತಿಯಿಂದ ಕೊಡಮಾಡುವ ಈ ಪ್ರಶಸ್ತಿಗೆ ಶ್ರೀ ಕಲಗೋಡು ರತ್ನಾಕರ ಭಾಜನರಾಗಿರುವುದು ಈ ಬಾರಿ ವಿಶೇಷ.

ತಮ್ಮ ರಾಜಕೀಯ ಜೀವನದಲ್ಲಿ ಸೋಲನ್ನೆ ಕಾಣದೆ, ‘ಸೋಲಿಲ್ಲದ ಸರದಾರ’ ಎಂದೇ ಮಲೆನಾಡು ಭಾಗದಲ್ಲಿ ಖ್ಯಾತಿ ಹೊಂದಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಕಾಂಗ್ರೆಸ್ ಪಕ್ಷದ ಮುಖಂಡ ಕಲಗೋಡು ರತ್ನಾಕರ ಅವರಿಗೆ ಗ್ರಾಮೀಣ ಭಾಗದ ಜೀವನಾಡಿ ಅಂತಿದ್ದ ಹಿರಿಯ ರಾಜಕಾರಣಿ, ಮಾಜಿ ಸಚಿವ ದಿವಂಗತ ಅಬ್ದುಲ್ ನಜೀರ್ ಸಾಬ್ ಜನ್ಮದಿನದಂದೇ ಕಲಗೋಡು ರತ್ನಾಕರ್ ಅವರಿಗೆ ಈ ಪ್ರಶಸ್ತಿ ಪುರಸ್ಕಾರ ನಡೆಯುವುದು ಅವರ ಸರಳ ರಾಜಕೀಯ ಬದುಕಿಗೆ ಹಿಡಿದ ಕೈಗನ್ನಡಿ ಎಂತಿದೆ.

ಕಲಗೋಡು ರತ್ನಾಕರ ಅವರ ಕಿರು ಪರಿಚಯ
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಕೋಡೂರು ಸಮೀಪದ ಯಳಗಲ್ಲು ಗ್ರಾಮದ ಯೋಗೇಂದ್ರನಾಯ್ಕ ಮತ್ತು ಪದ್ಮಾವತಿ ದಂಪತಿಗಳ ಜೇಷ್ಠ ಪುತ್ರನಾಗಿ 1962ರ ಜೂನ್ 30ರಂದು ಇವರ ಜನನ. ತಮ್ಮ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಯಳಗಲ್ಲು, ಕೋಡೂರಿನಲ್ಲಿ, ಪ್ರೌಢಶಿಕ್ಷಣವನ್ನು ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯಲ್ಲಿ ಹಾಗೂ ಪದವಿಪೂರ್ವ ಶಿಕ್ಷಣವನ್ನು ಸಾಗರದ ಎಲ್.ಬಿ.ಕಾಲೇಜಿನಲ್ಲಿ ಪಡೆದಿರುತ್ತಾರೆ. ರಮಾಮಣಿ ಇವರ ಧರ್ಮಪತ್ನಿ ಹಾಗೂ ಅನು ಕಲಗೋಡು (ಮಗಳು), ಆಶಿಕ್ ಕಲಗೋಡು (ಮಗ) ಎಂಬ ಇಬ್ಬರು ಮಕ್ಕಳು.

1985-86ರ ಮಂಡಲ್ ಪಂಚಾಯತಿಯ ಅಬ್ದುಲ್ ನಜೀರ್ ಸಾಬ್ ಅವರ ಮಹಾತ್ವಾಕಾಂಕ್ಷೆ ಯೋಜನೆ ಆಗಿದ್ದ ಪಂಚಾಯತ್ ರಾಜ್ ಕಾಯ್ದೆ ತಿದ್ದುಪಡಿ ಬಳಿಕ 1987ರಲ್ಲಿ ಯಳಗಲ್ಲು ಕ್ಷೇತ್ರದ ಸದಸ್ಯನಾಗಿ ಕೋಡೂರು ಮಂಡಲ ಪಂಚಾಯತಿಗೆ ತಮ್ಮ ರಾಜಕೀಯ ಪ್ರವೇಶ ಮಾಡಿದರು. 1987ರಿಂದ 1992ರ ವರಗೆ ಉಪ-ಪ್ರಧಾನರಾಗಿ ಸೇವೆ ಸಲ್ಲಿಸಿ ಭಾರೀ ಜನಮನ್ನಣೆಗೆ ಪಾತ್ರರಾದರು. 1995ರಲ್ಲಿ ಹೊಸನಗರ ತಾಲೂಕಿನ ಕೋಡೂರು ಕ್ಷೇತ್ರದಿಂದ ತಾಲೂಕು ಪಂಚಾಯತಿ ಸದಸ್ಯನಾಗಿ ಆಯ್ಕೆಯ ಬಳಿಕ ನಾಲ್ಕು ಬಾರಿ ಶಿವಮೊಗ್ಗ ಜಿಲ್ಲಾ ಪಂಚಾಯತಿಗೆ ಸದಸ್ಯನಾಗಿ ಬಹುಮತದಿಂದ ಆಯ್ಕೆಗೊಂಡು ಜನಸೇವೆಯ ಮೂಲಕವೇ ಜನಮನ್ನಣೆ ಪಡೆದ ರಾಜಕೀಯ ಮುತ್ಸದಿ ಎಂಬ ಖ್ಯಾತಿ ಪಾತ್ರರಾಗಿದ್ದಾರೆ.

ಪ್ರಸಕ್ತ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸ್ಥಾನ ಅಲಂಕರಿಸಿದ್ದು, ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ಪ್ರಾಮಾಣಿಕವಾಗಿ ತೊಡಗಿದ್ದಾರೆ. ಈ ಎಲ್ಲಾ ಜನಪರ ಸೇವೆಗಳನ್ನು ಪರಿಗಣಿಸಿ ಹಲವಾರು ಸಂಘ-ಸಂಸ್ಥೆಗಳು ಗೌರವಿಸಿ ಸನ್ಮಾನಿಸಿವೆ.

ಕಲಗೋಡು ರತ್ನಾಕರ ಅವರ ನಿಸ್ವಾರ್ಥ ಜನಸೇವೆಗೆ ಸಂದ ಡಾ. ಚಿಕ್ಕಕೋಮಾರಿಗೌಡ ದತ್ತಿ ಪ್ರಶಸ್ತಿಗೆ ಮುಂದೆಯೂ ಚ್ಯುತಿ ಬಾರದಂತೆ ಜನಸೇವೆ ಮಾಡುವ ಸದುದ್ದೇಶ ಇವರದಾಗಿದೆ.

Leave A Reply

Your email address will not be published.

error: Content is protected !!