ನವೋದಯ ಶಾಲೆಗೆ ಮೂವರು ವಿದ್ಯಾರ್ಥಿಗಳು ಆಯ್ಕೆ

0 961

ರಿಪ್ಪನ್‌ಪೇಟೆ : ಗ್ರಾಮೀಣ ಭಾಗದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣದ ಕೊರತೆ ಇದ್ದೆ ಇದೆ. ಮಕ್ಕಳ ಸರ್ವಾoಗೀಣ ಬೆಳವಣಿಗೆಗೆ ಪೂರಕವಾದಂತಹ ವಾತಾವರಣ ಕಲ್ಪಿಸಿಕೊಡುವ ಶಾಲೆಗಳಲ್ಲಿ ನವೋದಯ ಶಾಲೆ ಕೂಡ ಒಂದು. ಈ ಶಾಲೆಯಲ್ಲಿ ಓದುವ ಆಸೆ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಇದ್ದೆ ಇರುತ್ತದೆ. ನವೋದಯ ಪರೀಕ್ಷೆಯಲ್ಲಿ ತೇರ್ಗಡೆ ಆಗಲು ಮಕ್ಕಳಿಗೆ ಉತ್ತಮ ತರಬೇತಿ ಮತ್ತು ಪರಿಶ್ರಮ ಮುಖ್ಯ.

ಈ ನಿಟ್ಟಿನಲ್ಲಿ ಸತತವಾಗಿ ಕಳೆದ ಮೂರು ವರ್ಷಗಳಿಂದ ಹುಂಚ ಗ್ರಾಮ ವ್ಯಾಪ್ತಿಯ ಮಕ್ಕಳಿಗೆ ಉಚಿತವಾಗಿ ನವೋದಯ ಪರೀಕ್ಷೆಗೆ ಅಣಿಗೋಳಿಸುವ ಪ್ರಯತ್ನ ಒಂದು ಸಂಸ್ಥೆ ಮಾಡುತ್ತಿದೆ. ಅದುವೇ ಹಳೆ ನವೋದಯ ವಿದ್ಯಾರ್ಥಿಗಳ ಮತ್ತು ಹುಂಚ ಯುವ ಬಳಗದ ಸಂಸ್ಥೆ, ನವೋದಯ ಮತ್ತು ಮೊರಾರ್ಜಿ ಶಿಬಿರ. ಈ ಶಿಬಿರದಲ್ಲಿ ಪ್ರತಿ ವರ್ಷ 4-5 ತಿಂಗಳು ಪರೀಕ್ಷೆಗೆ ದಾಖಲಿಸಿದ ವಿದ್ಯಾರ್ಥಿಗಳಿಗೆ ನವೋದಯ ಮತ್ತು ಮೊರಾರ್ಜಿ ಶಾಲೆಯ ಪರಿಚಯ, ಆಯ್ಕೆ ಪ್ರಕ್ರಿಯೆ ಮಾಹಿತಿ, ಕೋಚಿಂಗ್, ಮಾದರಿ ಪರೀಕ್ಷೆ, ಕಲಿಕಾ ಸಾಮಗ್ರಿಗಳು, ಸಮಯ ನಿರ್ವಹಣೆ ಮತ್ತು ಇತರೆ ಉಪಯುಕ್ತ ಮಾಹಿತಿಗಳನ್ನು ಕೊಡಲಾಗುತ್ತದೆ.

ಪ್ರಸಕ್ತ ವರ್ಷದ ನವೋದಯ ಅರ್ಹತಾ ಪರೀಕ್ಷೆಯಲ್ಲಿ ಈ ಶಿಬಿರದಿಂದ 6ನೇ ತರಗತಿಗೆ ನಡೆದ ಅರ್ಹತಾ ಪರೀಕ್ಷೆಯಲ್ಲಿ ಮೂರು ಮಕ್ಕಳು ಅರ್ಹತೆಯನ್ನು ಪಡೆದಿರುವುದು ವಿಶೇಷ ಸಾಧನೆಯಾಗಿದೆ.

ಶಿಬಿರದ ವಿದ್ಯಾರ್ಥಿಗಳಾದ ಖುಷಿ ಕುಂದವಿ, ಮಾನ್ಯ ಎನ್, ಗಹನ ಹೆಚ್ ಯು, 6ನೇ ತರಗತಿಯ ಪ್ರವೇಶಕ್ಕೆ ನವೋದಯ ಪರೀಕ್ಷೆಯನ್ನು ಬರೆದಿದ್ದು, ಮೂವರು ವಿದ್ಯಾರ್ಥಿಗಳು ಶಿವಮೊಗ್ಗ ಜಿಲ್ಲೆಯ ಗಾಜನೂರಿನ ನವೋದಯ ಶಾಲೆಗೆ ಅಯ್ಕೆಯಾಗಿದ್ದಾರೆ. ಈ ಫಲಿತಾಂಶ ಮಲೆನಾಡಿನ ಭಾಗದ ಮಕ್ಕಳಲ್ಲಿ ಹೊಸ ಚೈತನ್ಯ ಮೂಡಿಸಿದೆ.

ಈ ಶಿಬಿರದ ಸಂಸ್ಥಾಪಕರಾದ, ಹಳೆ ನವೋದಯ ವಿದ್ಯಾರ್ಥಿಯಾದ ಪ್ರಕಾಶ್ ಜೋಯ್ಸ್ ಶಿಬಿರದ ಮಕ್ಕಳ ಈ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಉಚಿತ ನವೋದಯ ತರಬೇತಿ ಶಿಬಿರದ ಕಲ್ಪನೆ, ಗ್ರಾಮೀಣ ಭಾಗದ ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿ ಎಂದು ಹೇಳಿ, ಈ ಯಶಸ್ಸಿಗೆ ಕಾರಣಕರ್ತರಾದ ಶಿಬಿರದ ಶಿಕ್ಷಕ ವೃಂದಕ್ಕೆ, ಸಂಚಾಲಕರಿಗೆ ಮತ್ತು ಮಕ್ಕಳಿಗೆ ಶುಭ ಕೋರಿದ್ದಾರೆ.

ಈ ಸಂಸ್ಥೆಯಿಂದ ಕಳೆದ ಮೂರು ವರ್ಷಗಳಿಂದ ಒಟ್ಟು 7 ಮಕ್ಕಳು ನವೋದಯ ಶಾಲೆಗೆ ಮತ್ತು 27 ಮಕ್ಕಳು ಮೊರಾರ್ಜಿ ವಸತಿ ಶಾಲೆಗಳಿಗೆ ತೇರ್ಗಡೆಯಾಗಿರುತ್ತಾರೆ. ಖುಷಿಯಾದ ವಿಚಾರ ಏನಂದರೆ ಈ ಸಂಸ್ಥೆಯಿಂದ ಗ್ರಾಮೀಣ ಭಾಗದ ಮಕ್ಕಳು 97.4 ಲಕ್ಷ ರೂಪಾಯಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಶೈಕ್ಷಣಿಕ ಉಪಯೋಗ ಪಡೆದುಕೊಂಡಿದ್ದಾರೆ.

ಪ್ರಸಕ್ತ ವರ್ಷದಲ್ಲಿ ಈ ಸಂಸ್ಥೆ ಹುಂಚ, ಕೋಣಂದೂರು ಮತ್ತು ಶಿಕಾರಿಪುರದ ನೆಲವಾಗಿಲು ಗ್ರಾಮಗಳಲ್ಲೂ ಕಾರ್ಯ ನಡೆಸುತ್ತಿದೆ. ನವೋದಯ ಮತ್ತು ಮೊರಾರ್ಜಿ ಶಾಲೆಯ ಪರೀಕ್ಷೆಯ ಬಗ್ಗೆ ಮಾಹಿತಿಗಾಗಿ ಸಂಪರ್ಕಿಸಿ ಪ್ರಕಾಶ್ ಜೋಯ್ಸ್ 9980463013.

Leave A Reply

Your email address will not be published.

error: Content is protected !!