ಮಲೆನಾಡಿಗರೇ ಎಚ್ಚರ !! ಇದು ಕಾಳಿಂಗ ಸರ್ಪಗಳ ಮಿಲನ ಕಾಲ, ಈ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ

0 4,697

ಶಿವಮೊಗ್ಗ : ಈಗ ಎಲ್ಲೆಡೆ ಕಾಳಿಂಗ ಸರ್ಪಗಳು ಹೆಚ್ಚು ಕಾಣತೊಡಗಿವೆ, ಮಾರ್ಚ್ ತಿಂಗಳಿಂದ ಕಾಳಿಂಗ ಸರ್ಪಗಳ ಮಿಲನ ಆರಂಭ ಎನ್ನಬಹುದು. ಬೆದೆಗೆ ಅಥವಾ ಹೀಟಿಗೆ ಬಂದ ಹೆಣ್ಣು ಕಾಳಿಂಗ ತನ್ನ ಜನನಾಂಗದಿಂದ Sex Pheromone (ಇದೊಂದು ರಾಸಾಯನಿಕ ಅಥವಾ ಲೈಂಗಿಕ ಸಂಕೇತ ರಾಸಾಯನ) ಹೊರಹಾಕಿ ತಾನು ಸಂತಾನೋತ್ಪತ್ತಿಗಾಗಿ ಮಿಲನಕ್ಕೆ (ಹೆಣೆಯಾಡುವುದು) ತಯಾರಿದ್ದೇನೆ ಎಂಬ ಸಂದೇಶ ಕೊಡುತ್ತಾಳೆ.

ಈ ಲೈಂಗಿಕ ಸಂಕೇತ ರಾಸಾಯನ (SexPheromone) ವಾಸನೆ ಗ್ರಹಿಸುವ ಅಕ್ಕಪಕ್ಕದ ಗಂಡುಗಳು ಅಲ್ಲಿರುವ ಹೆಣ್ಣನ್ನು ಕೂಡಲು (ಹೆಣೆ) ಇತರ ಗಂಡುಗಳ ಜೊತೆ ಹೋರಾಟ (Combat) ನಡೆಸಿ ಗೆದ್ದ ಗಂಡು ಹೆಣ್ಣಿನ ಜೊತೆ ಮಿಲನ ಕ್ರಿಯೆ ನಡೆಸುತ್ತದೆ.

ನಮ್ಮ ಮಲೆನಾಡ ಜನರ ಗಮನಕ್ಕೆ…

ಒಂದು ಹೆಣ್ಣು ನಾಯಿ ಬೆದೆಗೆ (ಹೀಟಿಗೆ) ಬಂದಾಗ ಉಳಿದ ಗಂಡು ನಾಯಿಗಳು ಒಟ್ಟಾಗುವಂತೆ, ಹೆಣ್ಣು ಕಾಳಿಂಗ ಬೆದೆಗೆ ಬಂದಾಗ ಅಕ್ಕಪಕ್ಕದ ಮೂರ್ನಾಲ್ಕು ಗಂಡು ಕಾಳಿಂಗಗಳು ಹುಡುಕಿ ಬರುವುದು ಸಹಜ, ಇದಕ್ಕೆ ಭಯ ಬೇಡ.
ಹೆಣ್ಣನ್ನು ಹುಡುಕಿ ಬರುವ ಗಂಡುಗಳ ನಡುವೆ ಹೋರಾಟ ಅಥವಾ ಕುಸ್ತಿ (Combat) ನಡೆಯುತ್ತದೆ, ಇದಕ್ಕೆ ಅಡ್ಡಿಪಡಿಸಬಾರದು.

ಬೆದೆಗೆ ಬಂದ ಹೆಣ್ಣು ಕಾಳಿಂಗ ನಿಮ್ಮ ತೋಟ ಹಾಗು ಮನೆಯ ಅಕ್ಕಪಕ್ಕ ಬಂದು ಹೋಗಿದ್ದರೆ ಹೆಣ್ಣಿನ ವಾಸನೆಗೆ ಅಕ್ಕಪಕ್ಕದ ಗಂಡು ಕಾಳಿಂಗಗಳು ಹುಡುಕಿ ಬರುತ್ತವೆ, ಇದೇನಪ್ಪ ಇಷ್ಟು ಹಾವುಗಳು ಬಂದಿವೆಯಲ್ಲ ಎಂದು ಗಾಬರಿ ಬೇಡ. ಹೆಣ್ಣು ಕಾಳಿಂಗ ಸರ್ಪಗಳು ಬೆದೆಗೆ ಬಂದಿರುವ ಈ ಸಮಯದಲ್ಲಿ, ಕಾಳಿಂಗ ಸರ್ಪಗಳು ಮನೆ ತೋಟದ ಅಕ್ಕಪಕ್ಕ ಬಂದಾಗ ಹಾವನ್ನು ಹಿಡಿಸಲೇಬೇಡಿ ಕಾರಣ ಅಲ್ಲಿಗೆ ಬಂದ ಹೆಣ್ಣನ್ನು ಹಿಡಿದರೆ ಅಕ್ಕಪಕ್ಕದ ಗಂಡುಗಳು ಹೆಣ್ಣನ್ನು ಹುಡುಕುತ್ತಾ ನಿಮ್ಮ ತೋಟ ಮನೆಯ ಸಮೀಪವೇ ಸುತ್ತುತ್ತಿರುತ್ತವೆ.

ಹಾವು ಕಾಣಿಸಿಕೊಂಡರೆ ತಾನಾಗಿಯೇ ಹೋಗಲು ಬಿಡಿ, ಒಂದು ವೇಳೆ ಅಲ್ಲಿ ಬಂದಿರುವ ಹಾವು ಹೆಣ್ಣಾಗಿದ್ದರೆ ಆ ಹೆಣ್ಣನ್ನು ಹುಡುಕಿ ಬರುವ ಇತರ ಗಂಡುಗಳು, ಹೆಣ್ಣು ಹೋದ ದಾರಿಯಲ್ಲೇ ಸಾಗಿ ಹೋಗುತ್ತದೆ. ಆಗ ನಮಗೆ ಹಿಡಿಸಲೇಬೇಕು ಅನ್ನುವ ಸಮಸ್ಯೆ ಇಲ್ಲ. ಒಂದು ವೇಳೆ ಹೆಣ್ಣು ಹಾವನ್ನು ಹಿಡಿದು ಚೀಲ ತುಂಬಿ ಸಾಗಿಸಿದರೆ ಹೆಣ್ಣು ಸಾಗಿದ ಮಾರ್ಗವನ್ನೇ ಅನುಸರಿಸಿ ಬರುವ ಗಂಡುಗಳಿಗೆ ಹೆಣ್ಣು ಮುಂದೆ ಸಾಗಿದ ಮಾರ್ಗದ ಜಾಡು ಸಿಗದೆ ಗೊಂದಲಕ್ಕೆ ಒಳಗಾಗಿ ಅಲ್ಲಲ್ಲೇ ಸುತ್ತು ಹಾಕುತ್ತವೆ.

ನಮ್ಮ ಜಾನುವಾರು ಬೆದೆಗೆ ಬಂದರೆ 24 ಗಂಟೆಯೊಳಗೆ ಗರ್ಭಧಾರಣೆ ಮಾಡಬೇಕು, ಇಲ್ಲದಿದ್ದರೆ ಹೀಟು ಇಳಿದು ಹೋಗುತ್ತದೆ, ಹಾಗೆಯೇ ಹೆಣ್ಣು ಕಾಳಿಂಗದ ಬೆದೆ ಚಕ್ರಕ್ಕೂ ಒಂದು ಅವಧಿ ಇದೆ ಹಾಗಾಗಿ ಅವುಗಳು ಹೆಣೆಯಾಡಲು ನಮ್ಮಿಂದ ಅಡ್ಡಿ ಬೇಡ.

ಹಾವು ಕಂಡ ಕೂಡಲೇ ಹಾವು ರಕ್ಷಕರನ್ನು ಕರೆಯಿಸಿ ಹಿಡಿಸುವ ಚಾಳಿ ಎಲ್ಲ ಕಡೆ ಇದೆ, ಆದರೆ ಕಾಳಿಂಗಗಳ ಮಿಲನದ ಈ ತಿಂಗಳಲ್ಲಿ (ಮಾರ್ಚ್ – ಮೇ) ಅವುಗಳ ಸಂತಾನೋತ್ಪತ್ತಿಗೆ ಅಡ್ಡಿಪಡಿಸದೆ ಸುಮ್ಮನಿರೋಣ.

ಒಂದು ಹೆಣ್ಣು ಬೆದೆಗೆ ಬಂದಾಗ ಹೊರಹಾಕುವ ಲೈಂಗಿಕ ಸಂಕೇತ ರಸಾಯನ (Sex Pheromone) ಹೆಣ್ಣು ಸಾಗಿದ ದಾರಿಯಲ್ಲಿ ಹರಡಿರುತ್ತದೆ, 15 ದಿನದ ಹಿಂದೆ ಹೆಣ್ಣು ಒಂದು ದಾರಿಯಲ್ಲಿ ಹೋಗಿದ್ದರೂ, ಅದರ ವಾಸನೆ ಗ್ರಹಿಸಿ ಹೆಣ್ಣಿನ ಇರುವಿಕೆಯನ್ನು ಗಂಡುಗಳು ಪತ್ತೆ ಮಾಡಬಲ್ಲವು. ಒಂದು ವೇಳೆ ಮನೆ ಕೊಟ್ಟಿಗೆ ಒಳಗೆ ಕಾಳಿಂಗಗಳು ಬಂದರೆ ಹಿಡಿಸುವುದು ಅನಿವಾರ್ಯ, ಹಿಡಿದ ನಂತರ ಹತ್ತಿರದಲ್ಲೇ ಅದನ್ನು ಬಿಡುಗಡೆಗೊಳಿಸಿದರೆ, ಹತ್ತಿರದಲ್ಲಿರುವ ಕಾಳಿಂಗಗಳು ಪುನಃ ಸಂಪರ್ಕ ಸಾದಿಸಬಲ್ಲವು.
ಸಂತಾನೋತ್ಪತ್ತಿ ಕ್ರಿಯೆಯಲ್ಲಿ ತೊಡಗುವುದು ಮನುಷ್ಯನೂ ಸೇರಿ ಎಲ್ಲಾ ಜೀವಿಗಳ ಪ್ರಕೃತಿ ಸಹಜ ಗುಣ ಇದಕ್ಕೆ ನಾವು ಅಡ್ಡಿಪಡಿಸುವುದು ಬೇಡ. ಗಂಡು ಹೆಣ್ಣು ಜೋಡಿಯಾದ ಮೇಲೆ ಒಂದೇ ಜಾಗದಲ್ಲಿ ಎರಡರಿಂದ ಮೂರು ವಾರ ಇದ್ದು ಮಿಲನ ಕ್ರಿಯೆ ನಡೆಸಿ ತಮ್ಮಷ್ಟಕ್ಕೆ ತಾವು ಹೊರಟು ಹೋಗುತ್ತವೆ.


ಕಾಳಿಂಗಗಳಲ್ಲಿ ಹೆಣ್ಣುಗಳು 7-9 ಅಡಿ ಉದ್ದ ಇದ್ದರೆ ಗಂಡುಗಳು 10-12 ಅಡಿ ಉದ್ದ ಇರುತ್ತವೆ (ಗಂಡುಗಳು ಇನ್ನೂ ಉದ್ದ ಬೆಳೆಯಬಲ್ಲವು).
ಹಾವುಗಳು ಕಂಡಾಗ ಅರಣ್ಯ ಇಲಾಖೆಗೆ ಅಥವಾ ಪರಿಣಿತ ಉರಗ ರಕ್ಷಕರಿಗೆ ಮಾಹಿತಿ ನೀಡೋಣ. ಕಾಳಿಂಗ ಸರ್ಪಗಳು ಮನುಷ್ಯನಿಗೆ ಯಾವುದೇ ಹಾನಿ ಮಾಡುವುದಿಲ್ಲ, ಇವುಗಳ ಬಗ್ಗೆ ಅನಗತ್ಯ ಭಯ ಬೇಡ.

ಈ ಮಾರ್ಚ್ ತಿಂಗಳಿಂದ ಮೇ ವರೆಗೂ ಕಾಳಿಂಗ ಸರ್ಪಗಳ ಸಂತಾನೋತ್ಪತ್ತಿಗೆ ಅಡ್ಡಿಪಡಿಸದೇ ಇರೋಣ. ಕಾಳಿಂಗ ಸರ್ಪಗಳು ಕಂಡುಬಂದರೆ ಹತ್ತಿರದ ಅರಣ್ಯ ಇಲಾಖೆ ಅಥವಾ ಅಜಯ್ ಗಿರಿ ಆಗುಂಬೆ ಮಳೆಕಾಡು ಸಂಶೋಧನ ಕೇಂದ್ರ ಮೊಬೈಲ್ ಸಂಖ್ಯೆ 9353499832, 9483166263 ಹಾಗೂ ನಾಗರಾಜ್ ಬೆಳ್ಳೂರು 9341461867, 7676623759 ಇವರನ್ನು ಸಂಪರ್ಕಿಸಿ.

Leave A Reply

Your email address will not be published.

error: Content is protected !!