ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅಪಮಾನ ; ಲಿಲ್ಲಿ ಡಿಸೋಜ

0 726

ಹೊಸನಗರ: ಮನುಷ್ಯ ತಮ್ಮ ಜೀವಿತದ ಆವಧಿಯಲ್ಲಿ ಎನಾದರೂ ಸಾಧನೆ ಮಾಡಬೇಕು ಸಾಧನೆ ಮಾಡಲು ಗುರಿ ಇಟ್ಟುಕೊಂಡು ಬದುಕಬೇಕು ಅದು ಬಿಟ್ಟು ಯಾವುದೇ ಸಾಧನೆ ಮಾಡದೇ ಸತ್ತರೇ ಸಾವಿಗೆ ಅವಮಾನವೆಂದು ಪ್ರಾಥಮಿಕ ಬಾಲಕರ ಪಾಠ ಶಾಲೆಯ ಮುಖ್ಯ ಶಿಕ್ಷಕಿ ಲಿಲ್ಲಿ ಡಿಸೋಜ ಹೇಳಿದರು.

ಪಟ್ಟಣದ ಸರ್ಕಾರಿ ಹಿರಿಯ ಬಾಲಕರ ಪಾಠ ಶಾಲೆಯ ಆವರಣದಲ್ಲಿ ವರ್ಷದ ಕೊನೆಯ ಅವಧಿಯಲ್ಲಿ ಶಾರದ ಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈ ಸಮಾರಂಭದಲ್ಲಿ ಮಾತನಾಡಿದ ಅವರು, ನಾವು ಓದುವಾಗ 6 ವರ್ಷದವರೆಗೆ ಆಟ-ಊಟದಲ್ಲಿ ಕಾಲ ಕಳೆಯುತ್ತಿದ್ದೆವು. ಕಾಲ ಬದಲಾದಂತೆ 3 ವರ್ಷ ಕಳೆಯುತ್ತಿದ್ದಂತೆ ಪೋಷಕರು ಮಕ್ಕಳಿಗೆ ಓದಲು, ಬರೆಯಲು ಕಲಿಸುವತ್ತಾ ಮುಖ ಮಾಡುತ್ತಾರೆ. ಮಕ್ಕಳಿಗೆ ಆಟವಾಡಲು ಸಮಯವಿಲ್ಲವಾಗಿದೆ. ಎಲ್ಲ ಸಮಯದಲ್ಲೂ ಓದು-ಓದು ಎಂದು ಹಿಂಸೆ ನೀಡುತ್ತಿದ್ದು ಇದರಿಂದ ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರುವಂತಾಗಿದೆ. ಮಕ್ಕಳಿಗೆ ಹೊರಗಿನ ಪ್ರಪಂಚದ ಅರಿವಿಲ್ಲದೆ ಬರಿ ಓದಿನ ಕಡೆ ಹೆಚ್ಚು ಗಮನ ಹರಿಸುವುದರಿಂದ ತಿಳುವಳಿಕೆಯ ಮಟ್ಟ ಕುಂಠಿತವಾಗುತ್ತಿದೆ. ಮಕ್ಕಳನ್ನು ಯಾವುದೇ ಒತ್ತಡಕ್ಕೆ ಸಿಲುಕಿಸದೆ ಅವರ ಇಷ್ಟಕ್ಕೆ ಬಿಟ್ಟಾಗ ಅವರಿಗೂ ತಿಳುವಳಿಕೆ ಬರುತ್ತದೆ ಹಾಗೂ ಅವರು ಯಾವುದಾದರೂ ಒಂದು ಗುರಿಯತ್ತಾ ಮುಖ ಮಾಡುತ್ತಾರೆ. ಈ ದೇಶದ ಸಾಧನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ ಆದ್ದರಿಂದ ಮಕ್ಕಳ ಮನಸ್ಸು ಮೃದುವಾಗಿದ್ದು ಅವರ ಮನಸ್ಸಿನ ಮೇಲೆ ಯಾವುದೇ ಪರಿಣಾಮ ಬೀರದಂತೆ ಪೋಷಕರು ಒತ್ತಡ ಹಾಕಬಾರದೆಂದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ, ಪಟ್ಟಣ ಪಂಚಾಯತಿ ಸದಸ್ಯ ನಾಗಪ್ಪ ವಹಿಸಿ ಮಾತನಾಡಿ, ಸರ್ಕಾರಿ ಶಾಲೆ-ಶಾಲೆಗಳ ಬಗ್ಗೆ ಪೈಪೋಟಿ ಇರಬಾರದು ಎಲ್ಲ ಸರ್ಕಾರಿ ಶಾಲೆಗಳಲ್ಲಿ ಸೌಹಾರ್ದೆತೆಯಿಂದ ಅವರವರ ಶಾಲೆಗಳನ್ನು ಪೈಪೋಟಿ ಇಲ್ಲದೇ ನಡೆಸಿದಾಗ ಸರ್ಕಾರಿ ಶಾಲೆಗಳು ಉಳಿಯಲು ಬೆಳೆಯಲು ಸಾಧ್ಯ ಎಂದರು.

ಪಟ್ಟಣ ಪಂಚಾಯಿತಿ ಸದಸ್ಯ ಆರ್ ಗುರುರಾಜ್‌ರವರು ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕ ವೃಂದ ಉತ್ತಮ ಗುಣ ಮಟ್ಟದ ಶಿಕ್ಷಣ ಉತ್ತಮ ಪರಿಸರವಿದ್ದರೂ ಪೋಷಕರು ಖಾಸಗಿ ಶಾಲೆಗಳತ್ತಾ ಮುಖ ಮಾಡುತ್ತಿರುವುದು ಬೇಸರದ ಸಂಗತಿಯಾಗಿದೆ ನಾವು ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕೇಂದರು.

ಈ ಸಂದರ್ಭದಲ್ಲಿ ಈ ಸಮಾರಂಭದಲ್ಲಿ ಸಿಆರ್‌ಪಿ ಮಂಜಪ್ಪನವರನ್ನು ಸನ್ಮಾನಿಸಲಾಯಿತು. ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸುವುದರ ಜೊತೆಗೆ ಮಧ್ಯಾಹ್ನ ಅಕ್ಷರ ದಾಸೋಹ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.

ಈ ಸಮಾರಂಭದಲ್ಲಿ ನಾಗಪ್ಪ, ಗುರುರಾಜ್, ಸಿಆರ್‌ಪಿ ಮಂಜಪ್ಪ, ಸಿಆರ್‌ಪಿ ರಂಗನಾಥ್, ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಆರ್ ಸುರೇಶ್, ಬಡ್ತಿ ಶಿಕ್ಷಕರ ಸಂಘದ ಅಧ್ಯಕ್ಷ ಕುಬೇಂದ್ರಪ್ಪ, ಶಿಕ್ಷಕ ಈಶ್ವರ್ ಎಸ್ ಪಟಗಾರ್, ಶಿಕ್ಷಕಿಯರಾದ ಸುಮನ, ಅನಿತಾ, ಸುಪ್ರಿಯ, ಅಂಗನವಾಡಿ ಶಿಕ್ಷಕಿ ಶಾರದಮ್ಮ, ಸುಲೋಚನಮ್ಮ, ಮಂಜುಳಾ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!