ನಾಳೆ ತೀರ್ಥಹಳ್ಳಿಯಲ್ಲಿ ಕನ್ನಡ ಹಬ್ಬ | 10ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ

0 412

ತೀರ್ಥಹಳ್ಳಿ : ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ ನಡೆಯುತ್ತಿದ್ದು ನಾಳೆ (ನ. 29ರಂದು) ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.

ಸಮ್ಮೇಳನದ ಸರ್ವಾಧ್ಯಕ್ಷರಾಗಿ ಎಂ ನವೀನ್ ಕುಮಾರ್ ಎಳೆಯೋಣ ಬನ್ನಿ ಕನ್ನಡದ ತೇರು ಸಮಾರಂಭವನ್ನು ನಡೆಸಿ ಕೊಡುವರು. ನವೆಂಬರ್ 29ರಂದು ಬಾಳೆಬೈಲಿನ ಕನ್ನಡ ಭವನದಿಂದ ಸಮ್ಮೇಳನ ಅಧ್ಯಕ್ಷರನ್ನು ಮೆರವಣಿಗೆಯಲ್ಲಿ ಸಭಾ ಮಂಟಪಕ್ಕೆ ಕರೆತರಲಾಗುವುದು. ನಾಗನಂದ ಮುಖ್ಯದ್ವಾರದಲ್ಲಿ ಮಾಜಿ ಶಾಸಕ ಕಡಿದಾಳು ದಿವಾಕರ್ ಮೆರವಣಿಗೆಗೆ ಚಾಲನೆ ನೀಡುವರು.

ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಲಿವೆ. ಸಮ್ಮೇಳನದಲ್ಲಿ ರಾಷ್ಟ್ರಧ್ವಜ, ನಾಡ ಧ್ವಜ ಮತ್ತು ಪರಿಷತ್ತಿನ ಧ್ವಜಾರೋಹಣ ನಡೆಯಲಿದೆ. ಶಾಸಕ ಆರಗ ಜ್ಞಾನೇಂದ್ರ, ಜಿಲ್ಲಾ ಕಸಾಪ ಅಧ್ಯಕ್ಷ ಡಿ ಮಂಜುನಾಥ್, ತಾಲೂಕು ಕಸಾಪ ಅಧ್ಯಕ್ಷ ಟಿ ಕೆ ರಮೇಶ ಶೆಟ್ಟಿ ಧ್ವಜಾರೋಹಣ ನೆರವೇರಿಸುವರು. ಸಮ್ಮೇಳನದ ಉದ್ಘಾಟನಾ ಸಮಾರಂಭವನ್ನು ಡಾ. ಯು ಆರ್ ಅನಂತಮೂರ್ತಿ ವೇದಿಕೆಯಲ್ಲಿ ನಡೆಯಲಿದ್ದು, ವಿಮರ್ಶಕ, ಸಾಹಿತಿ ಡಾ. ರಾಜೇಂದ್ರ ಚೆನ್ನಿ ಉದ್ಘಾಟಿಸುವರು. ಶಾಸಕ ಆರಗ ಜ್ಞಾನೇಂದ್ರ ಅಧ್ಯಕ್ಷತೆ ವಹಿಸುವರು.

ತಾ. ಕ.ಸಾ.ಪ ಅಧ್ಯಕ್ಷ ಟಿ ಕೆ ರಮೇಶ ಶೆಟ್ಟಿ ನಿಕಟಪೂರ್ವ ಸಮ್ಮೇಳನ ಅಧ್ಯಕ್ಷ ಶರತ್ ಕಲ್ಕೋಡು, ಸಮ್ಮೇಳನಾಧ್ಯಕ್ಷ ನವೀನ್ ಕುಮಾರ್, ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ಕಸಾಪ ಜಿಲ್ಲಾಧ್ಯಕ್ಷ ಡಿ ಮಂಜುನಾಥ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್‌ ಎಂ ಮಂಜುನಾಥಗೌಡ ಮತ್ತು ಗಣ್ಯರು ವೇದಿಕೆಯಲ್ಲಿ ಇರುವರು. ಸಮ್ಮೇಳನದಲ್ಲಿ ಮೂರು ವಿಧದ ಘೋಷ್ಠಿಗಳು ನಡೆಯಲಿವೆ.

ಪ್ರಸಕ್ತ ಕಾಲಘಟ್ಟದ ಆತಂಕಗಳು, ಮಳೆ ಕಾಡು ಸಂಸ್ಕೃತಿ, ಸಮ್ಮೇಳನಾಧ್ಯಕ್ಷರ ಬದುಕು ಬರಹ, ಹಾಗೂ ಕವಿ ಕಲರವ ನಡೆಯಲಿದ್ದು ವಿಷಯ ತಜ್ಞರು ಭಾಗವಹಿಸುವರು.
ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ ಶಿವಮೊಗ್ಗ ಕಮಲ ನೆಹರು ಕಾಲೇಜಿನ ಪ್ರಚಾರ್ಯ ಹೆಚ್ಎಸ್ ನಾಗಭೂಷಣ ಸಮಾರೋಪ ನುಡಿಗಳಾಡುವರು. ಸಮ್ಮೇಳನದ ವೇದಿಕೆಯಲ್ಲಿ ಸ್ಯಾಕ್ಸೋಫೋನ್ ವಾದನ, ಕಿರು ನಾಟಕ, ಸಾಧಕರಿಗೆ ಸನ್ಮಾನ, ಕನ್ನಡ ಗೀತೆಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮಾರೋಪದಲ್ಲಿ ತೀರ್ಥಹಳ್ಳಿ ಮೂಲದ ಸಾಧಕರಿಗೆ ಸನ್ಮಾನ ಮಾಡಲಾಗುತ್ತದೆ.

ಹತ್ತನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಅವಿರತ ಶ್ರಮಿಸುತ್ತಿರುವ ಅಧ್ಯಕ್ಷ ಟಿ ಕೆ ರಮೇಶ್ ಶೆಟ್ಟಿ ಹಾಗೂ ಪದಾಧಿಕಾರಿಗಳು, ಸದಸ್ಯರ ಸಾರಥ್ಯದಲ್ಲಿ ಸಕಲ ಸಿದ್ಧತೆಗಳು ನಡೆದಿದ್ದು, ಸಮಾರಂಭಕ್ಕೆ ಬನ್ನಿ ಕನ್ನಡದ ತೇರು ಎಳೆಯೋಣ ಎಂದು ಎಲ್ಲರನ್ನು ಸ್ವಾಗತಿಸಿದ್ದಾರೆ.

Leave A Reply

Your email address will not be published.

error: Content is protected !!