ಅಜ್ಜ ಅಜ್ಜಿಯರ ಪಾದ ಪೂಜೆ ಮಾಡಿ ಸಂತಸಪಟ್ಟ ಮೊಮ್ಮಕ್ಕಳು ಅಕ್ಷತೆಯನಿಕ್ಕಿ ಹರಸಿದ ಅಜ್ಜ ಅಜ್ಜಿಯರು ; ಹೃದಯಸ್ಪರ್ಶಿ ಕಾರ್ಯಕ್ರಮಕ್ಕೆ ಸಾಕ್ಷಿಯಾಯ್ತು ಸಮಟಗಾರು ಶಾಲೆ

0 619

ರಿಪ್ಪನ್‌ಪೇಟೆ : ಪ್ರತಿ ಮನೆಯ ಆಸ್ತಿ ಅಲ್ಲಿನ ಹಿರಿಯ ಜೀವಗಳು. ಸದಾ ಕಿರಿಯರ ಶ್ರೇಯೋಭಿವೃದ್ಧಿಯನ್ನು ಬಯಸುವ ಈ ಹಿರಿಯ ಜೀವಗಳಾದ ಅಜ್ಜ ಅಜ್ಜಿಯನ್ನು ಗೌರವಿಸುವ ಒಂದು ವಿನೂತನ ಕಾರ್ಯಕ್ರಮಕ್ಕೆ ಹೊಸನಗರ ತಾಲೂಕಿನ ಸ.ಹಿ.ಪ್ರಾಥಮಿಕ ಶಾಲೆ ಸಮಟಗಾರುವಿನಲ್ಲಿ ನಡೆಯಿತು.

ಏಳನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಜೊತೆ ನಡೆದ ಈ ಕಾರ್ಯಕ್ರಮದಲ್ಲಿ ಅಜ್ಜ ಅಜ್ಜಿಯರ ಪಾದ ಪೂಜೆ ಮಾಡಿ ಮೊಮ್ಮಕ್ಕಳು ಸಂತಸಪಟ್ಟರೆ, ಅಕ್ಷತೆಯನಿಕ್ಕಿ ಹರಸಿ ಅಜ್ಜ ಅಜ್ಜಿಯರು ಕಣ್ತುಂಬಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಕಾಂತ ಉಡುಪ, ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವ ಶಾಲೆಯ ಶಿಕ್ಷಕ ವೃಂದವನ್ನು ಶ್ಲಾಘಿಸಿದರು.

ವೃದ್ಧಾಶ್ರಮಗಳ ಕಡೆ ಮುಖ ಮಾಡುತ್ತಿರುವ ಇಂದಿನ ಕಾಲದಲ್ಲಿ ಎಳೆಯ ಮನಗಳಿಗೆ ಇಂತಹ ಹಿರಿಯರನ್ನು ಗೌರವಿಸುವ ಸಂಸ್ಕೃತಿ ಬೆಳೆಸುತ್ತಿರುವುದು ನಾಡಿಗೆ ಮಾದರಿ ಎಂದು ನೆರೆದ ಎಲ್ಲರೂ ಅಭಿಪ್ರಾಯಪಟ್ಟರು.

ಅಜ್ಜ ಅಜ್ಜಿಯರಿಗೂ ವಿವಿಧ ಆಟ, ಮನರಂಜನ ಕಾರ್ಯಕ್ರಮಗಳಿಂದ ರಂಜಿಸಲಾಯಿತು. ಅತ್ಯಂತ ಹೃದಯಸ್ಪರ್ಶಿಯಾದ ಈ ಕಾರ್ಯಕ್ರಮದಲ್ಲಿ ಊರಿನ ಹಿರಿಯರಾದ ಶ್ರೀಧರ ಮೂರ್ತಿ, ನಾಗಭೂಷಣ ರಾವ್ ಅನಂತ ರಾವ್ ಎಸ್‌ಡಿಎಂಸಿ ಅಧ್ಯಕ್ಷರಾದ ಕೃಷ್ಣನಾಯ್ಕ ಉಪಾಧ್ಯಕ್ಷರಾದ ಆಶಾ, ಮುಖ್ಯ ಶಿಕ್ಷಕರಾದ ರತ್ನಕುಮಾರಿ ಎಸ್, ಶಿಕ್ಷಕರಾದ ಅಂಬಿಕಾ, ದಿನೇಶ್, ಶಶಿಕಲಾ, ಕಾವ್ಯ ಎಲ್ಲ ಮಕ್ಕಳ ಅಜ್ಜ ಅಜ್ಜಿಯಂದಿರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!