ಕೃಷಿಗೆ 7 ಗಂಟೆ ವಿದ್ಯುತ್ ಪೂರೈಕೆ ; ಕೆ.ಜೆ‌. ಜಾರ್ಜ್

0 288

ಚಿಕ್ಕಮಗಳೂರು: ರೈತರಿಗೆ ಕೃಷಿ ಚಟುವಟಿಕೆಗೆ 7 ಗಂಟೆ ವಿದ್ಯುತ್ ನೀಡುವಂತೆ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದ್ದು, ಅದರಂತೆ 3 ಫೇಸ್ ವಿದ್ಯುತ್ ನೀಡುವಂತೆ ಇಂಧನ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಇಂಧನ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಇಂದು ಚಿಕ್ಕಮಗಳೂರು ಜಿಲ್ಲೆಯ ವಿದ್ಯುತ್ ವಿತರಣೆ ಕುರಿತಂತೆ ಇಂಧನ ಇಲಾಖೆಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಗರ ಪ್ರದೇಶಗಳಲ್ಲಿ ವಿದ್ಯುತ್ ಕಡಿತದ ಬಗ್ಗೆ ಸಮಸ್ಯೆ ಇಲ್ಲ ಹಳ್ಳಿಗಳಲ್ಲಿ ಕೃಷಿ ಚಟುವಟಿಕೆಗಳಿಗೆ 5 ಗಂಟೆ ವಿದ್ಯುತ್ ನೀಡುವಂತೆ ಈಗಾಗಲೇ ಆದೇಶ ಹೊರಡಿಸಿದ್ದರು ಕೂಡ ದೂರುಗಳು ಬರುತ್ತಿವೆ. ಅಧಿಕಾರಿಗಳು ಸರ್ಕಾರದ ಆದೇಶದಂತೆ 3 ಫೇಸ್‌ನಲ್ಲಿ 5 ಗಂಟೆ ವಿದ್ಯುತ್ ನೀಡಬೇಕು. ಸಂಪೂರ್ಣ ವಿದ್ಯುತ್ ಕಡಿತವಾಗುತ್ತಿದೆ ಎಂದು ದೂರುಗಳು ಬಂದರು ಕೂಡ ಅಧಿಕಾರಿಗಳು ಏಕೆ ಕ್ರಮ ವಹಿಸುತ್ತಿಲ್ಲ, ಏನಾದರೂ ಸಮಸ್ಯೆಗಳಿದ್ದರೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಿ ರೈತರಿಗೆ ವಿದ್ಯುತ್ ಸಮಸ್ಯೆಯಾಗದಂತೆ ಕ್ರಮ ವಹಿಸುವಂತೆ ಸೂಚಿಸಿದರು.

ಚಿಕ್ಕಮಗಳೂರಿನಲ್ಲಿ ಸೋಲಾರ್ ಪಾರ್ಕ್ ನಿರ್ಮಾಣದ ಕುರಿತು 180 ಎಕರೆ ಸರ್ಕಾರಿ ಜಾಗ ಗುರುತಿಸಲಾಗಿದೆ. ಈಗಾಗಲೇ ಕ್ಯಾಬಿನೇಟ್‌ನಲ್ಲಿ ಅನುಮೋದನೆಯಾಗಿದ್ದು ಇಲ್ಲಿ 100 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಹುದಾಗಿದೆ. ಖಾಸಗಿ ಜಮೀನು ಸಿಕ್ಕರೆ ಅದನ್ನು ಗುತ್ತಿಗೆ ಪಡೆದು ಸೋಲಾರ್ ಪಾರ್ಕ್ ನಿರ್ಮಿಸಲು ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದ ಅವರು ಅಕ್ರಮ ಸಕ್ರಮದಲ್ಲಿ ಕಡೂರಿನಲ್ಲಿ 8332 ಅರ್ಜಿಗಳು ಸಕ್ರಮಕ್ಕಾಗಿ ಬಂದಿವೆ. ಮೂಡಿಗೆರೆ ಹಾಗೂ ಚಿಕ್ಕಮಗಳೂರಿನಲ್ಲಿ ಅಕ್ರಮ ಸಕ್ರಮಕ್ಕೆ ಸಂಬಂಧಿಸಿದಂತೆ ದೂರುಗಳು ಇರುವುದಿಲ್ಲ ಎಂದು ಮೆಸ್ಕಾಂ ಕಾರ್ಯಪಾಲಕ ಅಭಿಯಂತರರು ಸಭೆಗೆ ಮಾಹಿತಿ ನೀಡಿದರು.

ಅಕ್ರಮ ಸಕ್ರಮದಲ್ಲಿ ಸಕ್ರಮಕ್ಕಾಗಿ ಅರ್ಜಿ ಹಾಕಿರುವವರಿಗೆ 500 ಮೀಟರ್‌ಗಿಂತ ಕಡಿಮೆಯಿದ್ದರೆ ಅಂತಹವರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬಹುದು. 500 ಮೀಟರ್‌ಗಿಂತ ಜಾಸ್ತಿಯಿದ್ದರೆ ಸೋಲಾರ್ ವ್ಯವಸ್ಥೆ ಕಲ್ಪಿಸಬಹುದು. ಸೋಲಾರ್ ವಿದ್ಯುತ್ ಉತ್ಪಾದನೆಗೆ ಸರ್ಕಾರ ಶೇ 80 ರಷ್ಟು ಸಬ್ಸಿಡಿ ನೀಡುತ್ತದೆ. ರೈತರು ಇದರ ಉಪಯೋಗವನ್ನು ಪಡೆದುಕೊಳ್ಳುವಂತೆ ಹೇಳಿದರು.

ಅಧಿಕಾರಿಗಳು ಯಾವ ಸಮಯಕ್ಕೆ ವಿದ್ಯುತ್ ಕಡಿತಗೊಳಿಸಲಾಗುತ್ತದೆ ಎಂಬುದರ ಕುರಿತು ವಾಟ್ಸ್ ಆಪ್ ಹಾಗೂ ಎಸ್ ಎಂ ಎಸ್ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಸಾರ್ವಜನಿಕರಿಂದ ಇಲಾಖೆಗೆ ಒಳ್ಳೆಯ ಹೆಸರು ಬರುವ ರೀತಿಯಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ಡಿ. ತಮ್ಮಯ್ಯ, ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್., ಇಂಧನ ಹಾಗೂ ಚಿಕ್ಕಮಗಳೂರು ಜಿಲ್ಲಾ ಸಚಿವರ ಆಪ್ತ ಕಾರ್ಯದರ್ಶಿ ಸತೀಶ್ ಕುಮಾರ್ ಡಿ.ಎಂ. ಹಾಗೂ ಇಂಧನ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Leave A Reply

Your email address will not be published.

error: Content is protected !!