ಅ.16 ರಂದು ಕಾಗೋಡು, ಮಧು ಬಂಗಾರಪ್ಪ ಮತ್ತು ಬೇಳೂರಿಗೆ ಸನ್ಮಾನ

0 46

ಸಾಗರ : ಸಾಗರ ವಿಭಾಗೀಯ ನಾಟ ವ್ಯಾಪಾರಸ್ಥರು ಮತ್ತು ಅರಣ್ಯ ಗುತ್ತಿಗೆದಾರರ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಅಕ್ಟೋಬರ್ 16 ರಂದು ಸಂಜೆ 6 ಕ್ಕೆ ಜೋಸೆಫ್ ನಗರದ ಚರ್ಚ್ ಸಮುದಾಯ ಭವನದಲ್ಲಿ ಗೌರವಾನ್ವಿತರಾದ ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ ಕಾಗೋಡು ತಿಮ್ಮಪ್ಪ ಮತ್ತು ಸಚಿವ ಮಧು ಬಂಗಾರಪ್ಪ ಹಾಗೂ ಶಾಸಕ ಗೋಪಾಲಕೃಷ್ಣ ಬೇಳೂರು ಅವರನ್ನು ಸನ್ಮಾನಿಸಲಾಗುವುದು ಎಂದು ಟ್ರಸ್ಟ್ ಜಿಲ್ಲಾಧ್ಯಕ್ಷ ಧರ್ಮೇಂದ್ರ ಬಿ. ಶಿರವಾಳ ಹೇಳಿದರು.


ವೇದಿಕೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್, ಸಾಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್‌ಕುಮಾರ್ ಕೆಂಚಪ್ಪನವರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಉಪಸ್ಥಿತರಿರುವರು ಎಂದರು.


ಹಿರಿಯರಾದ ಕಾಗೋಡು ತಿಮ್ಮಪ್ಪನವರಿಗೆ ಸರ್ಕಾರ ಈ ಬಾರಿ ದೇವರಾಜ ಅರಸು ಪ್ರಶಸ್ತಿ ನೀಡಿದ್ದರಿಂದ ಪ್ರಶಸ್ತಿಯ ಮೌಲ್ಯ ಹೆಚ್ಚಾಗಿದೆ. ತಿಮ್ಮಪ್ಪನವರು ಕೇವಲ ಸಾಗರವಲ್ಲದೇ, ರಾಜ್ಯದಾದ್ಯಂತ ಹೆಸರು ಮಾಡಿರುವ ವ್ಯಕ್ತಿ. ಸಾವಿರಾರು ಕುಟುಂಬಗಳಿಗೆ ಅವರು ಬದುಕು ಕಲ್ಪಿಸಿದ್ದಾರೆ. ರಾಜ್ಯದಲ್ಲಿ ಅವರು ಸರ್ಕಾರದ ಅನೇಕ ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ವಿಧಾನಸಭಾಧ್ಯಕ್ಷರಾಗಿ ಆ ಸ್ಥಾನಕ್ಕೊಂದು ವಿಶೇಷ ಗೌರವವನ್ನು ತಂದುಕೊಟ್ಟಿದ್ದಾರೆ. ಆರೋಗ್ಯ ಸಚಿವರಾಗಿ, ಸಮಾಜ ಕಲ್ಯಾಣ ಸಚಿವರಾಗಿ ಸಮಾಜದಲ್ಲಿ ಅನೇಕ ಬದಲಾವಣೆಗೆ ಕಾರಣರಾಗಿದ್ದಾರೆ. ಅವರ ಎಷ್ಟೋ ಕಾರ್ಯಕ್ರಮಗಳು ಜನ ಕಲ್ಯಾಣಕ್ಕೆ ಪ್ರೇರಣೆ ನೀಡಿದೆ ಎಂದರು.


ಈ ಕಾರ್ಯಕ್ರಮಕ್ಕೆ ಸುಮಾರು ಎರಡು ಸಾವಿರ ಜನರು ಸೇರುವ ನಿರೀಕ್ಷೆಯಿದ್ದು, ಸಾರ್ವಜನಿಕರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಅವರು ವಿನಂತಿಸಿದರು.


ನಮ್ಮ ಸಂಘದಲ್ಲಿ 70 ಜನ ಸದಸ್ಯರಿದ್ದು, ಸಂಘ ಆರಂಭಗೊಂಡು ಐದು ವರ್ಷಗಳು ಕಳೆದಿವೆ. ಸಂಘವು ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಯೋಜಿಸುತ್ತಿದ್ದು, ಕೋವಿಡ್ ಸಂದರ್ಭದಲ್ಲಿ ಪರಿಹಾರ ನಿಧಿಗೆ ಸಂಘದಿಂದ 1 ಲಕ್ಷ ರೂ. ದೇಣಿಗೆ ನೀಡಲಾಗಿದೆ. ಗ್ರಾಮಾಂತರ ಭಾಗದ ಬಡ ಮಕ್ಕಳ ಶಿಕ್ಷಣಕ್ಕೆ ಸಂಘವು ನೆರವಾಗುತ್ತಿದೆ. ಬಡ ಮಕ್ಕಳ ಶಿಕ್ಷಣ ಶುಲ್ಕವನ್ನು ನೀಡುತ್ತಿದ್ದೇವೆ. ಅರಣ್ಯ ಇಲಾಖೆಯಿಂದ ರೈತರಿಗೆ ತೊಂದರೆಯಾಗುವ ಸಂದರ್ಭದಲ್ಲಿ ಮಧ್ಯವರ್ತಿಗಳಾಗಿ ರೈತಸ್ನೇಹಿ ಕೆಲಸಗಳನ್ನು ಮಾಡಲಾಗುತ್ತಿದೆ. ವನ್ಯಜೀವಿ ಸಂರಕ್ಷಣೆ, ಅರಣ್ಯ ನಾಶದ ವಿರುದ್ಧ ಸಂಘವು ಕಾಳಜಿ ವಹಿಸಿದ್ದು, ಸಮುದಾಯದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.


ಟ್ರಸ್ಟ್ ಗೌರವಾಧ್ಯಕ್ಷ ಶಿವರಾಮ್ ಪಡವಗೋಡು, ಕಾರ್ಯದರ್ಶಿ ರಾಜು ಕೆ.ನಾಯರ್, ಖಜಾಂಚಿ ಮುಕ್ತಾರ್ ಅಹಮದ್, ಸಂಘಟನಾ ಕಾರ್ಯದರ್ಶಿ ಮಂಜುನಾಥ ಆಚಾರ್, ಸದಸ್ಯರಾದ ಪುರುಷೋತ್ತಮ, ಶ್ರೀನಿವಾಸ ಬರಗಿ, ಆದಿ, ಶ್ರೀಧರ್ ನಾರಗೋಡು, ನಾಗೇಂದ್ರ, ಪ್ರವೀಣ್, ಕುಮಾರ್ ಹಾಜರಿದ್ದರು.

Leave A Reply

Your email address will not be published.

error: Content is protected !!