ಅಮ್ಮನಘಟ್ಟಕ್ಕೆ ನಿರೀಕ್ಷೆಗೂ ಮೀರಿ ಹರಿದು ಬರುತ್ತಿರುವ ಭಕ್ತರು ; ಸಾಲುಗಟ್ಟಿ ನಿಂತ ವಾಹನಗಳು

0 1,439

ರಿಪ್ಪನ್‌ಪೇಟೆ: ಪುರಾಣ ಪ್ರಸಿದ್ದ ಏಕಶೀಲೆಯ ಹೆಬ್ಬಂಡೆಯಲ್ಲಿ ವಿರಾಜಮಾನವಾಗಿ ಕಂಗೊಳಿಸುತ್ತಾ ಬೇಡಿ ಬರುವ ಭಕ್ತರ ಇಷ್ಟಾರ್ಥಗಳನ್ನು ಪರಿಹರಿಸುವ ಶ್ರೀ ಜೇನುಕಲ್ಲಮ್ಮ ದೇವಿಯ ದರ್ಶನಕ್ಕೆ ಇಂದು 3ನೇ ಜಾತ್ರೋತ್ಸವದ ಹಿನ್ನೆಲೆಯಲ್ಲಿ ಭಕ್ತರ ದಂಡೇ ಹರಿದು ಬರುತ್ತಿದೆ.


ಬೆಳಗ್ಗೆ 06 ಗಂಟೆಯಿಂದಲೇ ದೇವಿ ದರ್ಶನಕ್ಕೆ ಭಕ್ತರು ಆಗಮಿಸುತ್ತಿದ್ದು 08 ಗಂಟೆ ಹೊತ್ತಿಗೆ ಒಂದು ಕಿ.ಮೀ. ಗೂ ಅಧಿಕ ದೂರದಿಂದ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡುಬಂದಿತು.

ಕಿರಿದಾದ ರಸ್ತೆ ಹಾಗೂ ಪಾರ್ಕಿಂಗ್ ವ್ಯವಸ್ಥೆಗೆ ಸ್ಥಳಾವಕಾಶದ ಕೊರತೆ ಇರುವುದರಿಂದ ವಾಹನಗಳಲ್ಲಿ ಆಗಮಿಸುತ್ತಿರುವ ಭಕ್ತರನ್ನು ನಿಯಂತ್ರಿಸಲು ರಕ್ಷಣಾ ಇಲಾಖೆ, ಸಮಿತಿ ಸದಸ್ಯರು ಹಾಗೂ ಸ್ವಯಂ ಸೇವಕರು ಹರಸಾಹಸ ಪಡುತ್ತಿದ್ದು ವಾಹನಗಳು ಸಾಲುಗಟ್ಟಿ ನಿಂತಿವೆ.

ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ತಾಲ್ಲೂಕು, ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಂದ ಭಕ್ತರು ತಮ್ಮ ಅನುಕೂಲಕ್ಕೆ ತಕ್ಕಂತೆ ವಾಹನಗಳ ಮೂಲಕ ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದಾರೆ. ತಮ್ಮ ಹೊಲದಲ್ಲಿ ಬೆಳೆದ ಶುಂಠಿ, ಅಡಿಕೆ, ಅಕ್ಕಿ, ಇನ್ನಿತರ ಬೆಳೆಗಳನ್ನು ತಂದು ದೇವಿಗೆ ಅರ್ಪಿಸುತ್ತಾರೆ.

ವಿಶೇಷವೆಂದರೆ ಇಲ್ಲಿನ ದೇವಿಗೆ ಬೆಣ್ಣೆ ಮತ್ತು ಬುತ್ತಿಯ ಬುಟ್ಟಿ ಹೊತ್ತು ತಂದು ದೇವಿಗೆ ನೈವೇದ್ಯ ಮಾಡಿಸಿಕೊಂಡು ಅಲ್ಲಿಯೇ ಬಂಡೆಯ ಮೇಲೆ ಕುಳಿತು ಬರುವ ಭಕ್ತರಿಗೂ ಹಂಚಿ ಊಟ ಮಾಡಿದರೆ ಕುಟುಂಬದ ಶ್ರೇಯೋಭಿವೃದ್ದಿ ಹೊಂದುವುದೆಂಬ ನಂಬಿಕೆ ಇಲ್ಲಿನ ಹಲವು ಭಕ್ತರದಾಗಿದೆ.

ಒಟ್ಟಾರೆಯಾಗಿ ಕಂಕಣ ಧಾರಣೆ ಮಾಡಿದ ಹದಿನೈದು ದಿನಗಳ ಕಾಲ ಕಂಕಣ ಕಟ್ಟಿಸಿಕೊಂಡ ವ್ಯಕ್ತಿ ಮನೆಯನ್ನು ತೊರೆದು ದೇವಿಯ ಸನ್ನಿಧಿಯಲ್ಲಿಯೇ ಇದ್ದು ಜಾತ್ರಾ ಮಹೋತ್ಸವವನ್ನು ಯಶಸ್ವಿಯಾಗಿ ನೆರವೇರಿಸುವುದು ಇಲ್ಲಿನ ಪದ್ದತಿಯಾಗಿದೆ. ಇನ್ನು ಸಿಡಿ ಭೂತಪ್ಪ ಮತ್ತು ಉರಿ ಭೂತಪ್ಪ ಸೇರಿದಂತೆ ಭೈರ ಪರಿವಾರ ದೇವರುಗಳಿಗೆ ಪೂಜೆ ಸಲ್ಲಿಸಿದರೆ ಬೆನ್ನು ನೋವಿನಿಂದ ಬಳಲುವವರು ಸಿಡಿ ಭೂತಪ್ಪನಿಗೆ ಶ್ರದ್ದಾಭಕ್ತಿಯಿಂದ ಪೂಜೆ ಸಲ್ಲಿಸಿ ಹರಕೆ ಮಾಡಿಕೊಂಡರೆ ಬೆನ್ನು ನೋವು ಮನೆಗೆ ಹೋಗುವುದರೊಳಗೆ ಮಾಯವಾಗುವುದೆಂಬ ಪವಾಡವೇ ಇಲ್ಲಿನ ವಿಶೇಷವಾಗಿದೆ‌.

Leave A Reply

Your email address will not be published.

error: Content is protected !!