ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ !

0 70

ರಿಪ್ಪನ್‌ಪೇಟೆ : ಇಲ್ಲಿನ ತೀರ್ಥಹಳ್ಳಿ ರಸ್ತೆಯ ಬೆಟ್ಟಿನಕೆರೆ ಗ್ರಾಮದ ಮನೆಯೊಂದರಲ್ಲಿ ಪುರುಷನ ಶವ ಕೊಳೆತ ಸ್ಥಿತಿಯಲ್ಲಿಂದು ಪತ್ತೆಯಾಗಿದೆ.

ಮೃತನನ್ನು ಬೆಟ್ಟಿನಕೆರೆ ನಿವಾಸಿ ಜೋಸ್ (68) ಎಂದು ಗುರುತಿಸಲಾಗಿದೆ. ಈತನು ಮನೆಯಲ್ಲಿ ಒಬ್ಬನೇ ವಾಸ ಮಾಡುತಿದ್ದು ಪತ್ನಿ ಮತ್ತು ಮಕ್ಕಳು ಹಲವು ವರ್ಷಗಳ ಹಿಂದೆಯೇ ಈತನನ್ನು ಬಿಟ್ಟು ಬೇರೆಡೆಗೆ ವಾಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮನೆಯಲ್ಲಿ ಒಬ್ಬನೇ ವಾಸ ಮಾಡುತಿದ್ದ ಈತ ಕಳೆದ ನಾಲ್ಕು ದಿನಗಳ ಹಿಂದೆ ಈತ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಈತ ಮನೆಮನೆಗೆ ಹಾಲು ವ್ಯಾಪಾರ ಮಾಡುತ್ತಿದ್ದನು. ನಾಲ್ಕು ದಿನಗಳಿಂದ ಹಾಲು ಕೊಡಲು ಬಾರದ ಹಿನ್ನಲೆಯಲ್ಲಿ ಸ್ಥಳೀಯರು ಇಂದು ಅವರ ಮನೆಗೆ ಹೋಗಿ ನೋಡಿದಾಗ ಮನೆಯ ಒಳಗೆ ಕೊಳೆತ ಸ್ಥಿಯಲ್ಲಿ ಶವ ಪತ್ತೆಯಾಗಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅಂತ್ಯಕ್ರಿಯೆ ನೆರವೇರಿಸಿದ ಗ್ರಾಮಾಡಳಿತ :

ಇಂದು ಬೆಳಿಗ್ಗೆ ಜೋಸ್ ಮೃತಪಟ್ಟಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಕುಟುಂಬಸ್ಥರಿಗೆ ದೂರವಾಣಿ ಮೂಲಕ ಕರೆಯ ಮಾಹಿತಿ ತಿಳಿಸಲು ಪ್ರಯತ್ನಿಸಿದ್ದಾರೆ. ಆದರೆ ಕುಟುಂಬಸ್ಥರು ಸಮರ್ಪಕವಾಗಿ ಸ್ಪಂದಿಸದೇ ನಮಗೂ ಅವರಿಗೂ ಸಂಬಂಧವಿಲ್ಲವೆಂದು ಕಡ್ಡಿಮುರಿದಂತೆ ತಿಳಿಸಿದ್ದಾರೆ.

ಕೂಡಲೇ ಎಚ್ಚೆತ್ತುಕೊಂಡ ರಿಪ್ಪನ್‌ಪೇಟೆ ಗ್ರಾಪಂ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿ ಕಾನೂನು ರೀತ್ಯಾ ಕ್ರಮಕೈಗೊಂಡು ಅಂತ್ಯ ಸಂಸ್ಕಾರ ನೆರವೇರಿಸಿದರು.

ಮೃತ ವ್ಯಕ್ತಿಗೆ ಸಂಬಂಧಪಟ್ಟ ಸುಮಾರು ಒಂದೂವರೆ ಲಕ್ಷ ರೂ‌. ಮೌಲ್ಯದ 5 ಗೋವುಗಳನ್ನು ಆನಂದಪುರ ಸಮೀಪದ ಮುರುಘಾ ಮಠದ ಗೋಶಾಲೆಗೆ ಕಳುಹಿಸಿಕೊಡಲಾಯಿತು. ಆತನ ಮನೆ ಹಾಗೂ ಬೈಕ್ ನ್ನು ಗ್ರಾಮ ಪಂಚಾಯತಿ ಸುಪರ್ದಿಗೆ ತೆಗೆದುಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಪಿಡಿಓ ಜಿ ಚಂದ್ರಶೇಖರ್ ಗ್ರಾಪಂ ಸದಸ್ಯರಾದ ಪಿ‌ ರಮೇಶ್, ಆಸೀಫ಼್ ಭಾಷಾ, ರಕ್ಷಣಾ ಇಲಾಖೆಯ ಎಎಸೈ ಮಂಜಪ್ಪ, ಹೆಡ್ ಕಾನ್ಸ್‌ಟೇಬಲ್ ಪರಮೇಶ್ವರಪ್ಪ ಮತ್ತು ಗ್ರಾಪಂ ಸಿಬ್ಬಂದಿಗಳಾದ ನಾಗೇಶ್, ರಾಜೇಶ್ ಇದ್ದರು.

ಈ ಘಟನೆ ಸಂಬಂಧ ರಿಪ್ಪನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದು ಸಹಜ ಸಾವೋ ಅಥವಾ ಕೊಲೆಯೋ ಎಂಬುದು ಪೊಲೀಸ್ ತನಿಖೆಯಿಂದಷ್ಟೆ ತಿಳಿದುಬರಬೇಕಾಗಿದೆ.

Leave A Reply

Your email address will not be published.

error: Content is protected !!