ರಿಪ್ಪನ್‌ಪೇಟೆ: ಕೆಂಚನಾಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಸರೂರು-ಬೆನವಳ್ಳಿ ಸಂಪರ್ಕ ರಸ್ತೆ ಸಂಪೂರ್ಣ ನಾದುರಸ್ಥಾಗಿದ್ದು ಈ ರಸ್ತೆ ನಿರ್ಮಾಣಕ್ಕೆ ಕ್ಷೇತ್ರದ ಶಾಸಕರಿಗೆ ಮತ್ತು ಜಿಲ್ಲಾ ಪಂಚಾಯ್ತಿ ಸದಸ್ಯರಿಗೆ ಸಾಕಷ್ಟು ಭಾರಿ ಮನವಿ ಮಾಡಿಕೊಳ್ಳಲಾದರು ಕೂಡಾ ಈ ರಸ್ತೆ ಅಭಿವೃದ್ದಿಗೆ ನಿರ್ಲಕ್ಷ್ಯ ವಹಿಸಿರುವುದನ್ನು ಕಂಡು ಇಂದು ಮಸರೂರು ಗ್ರಾಮದವರೇ ಜೆಸಿಬಿಯ ಮೂಲಕ ರಸ್ತೆ ಕಾಮಗಾರಿ ಆರಂಭಿಸಿದ್ದಾರೆ.
ಬೆನವಳ್ಳಿ ಮಸರೂರು ಸಂಪರ್ಕದ ಈ ರಸ್ತೆಯ ಶಿವಮೊಗ್ಗ-ಕುಂದಾಪುರ ರಾಜ್ಯ ಹೆದ್ದಾರಿಗೆ ಹಾಗೂ ಬೆನವಳ್ಳಿ ಮುರುಘಾಮಠದ ಜೋಗ-ಶಿವಮೊಗ್ಗ ಎನ್.ಹೆಚ್ ಸಂಪರ್ಕದ ರಸ್ತೆಯಾಗಿದ್ದು ಈ ಗ್ರಾಮದಲ್ಲಿ ಲಿಂಗಾಯಿತರು ಮತ್ತು ಪರಿಶಿಷ್ಟ ಜಾತಿ ಪಂಗಡದವರು ಸೇರಿದಂತೆ ಸುಮಾರು 50-60 ರೈತ ಕೂಲಿ ಕಾರ್ಮಿಕರ ಕುಟುಂಬದವರು ವಾಸ ಮಾಡುವ ಈ ಗ್ರಾಮಕ್ಕೆ ಸರ್ಕಾರದಿಂದ ಯಾವುದೇ ಮೂಲಭೂತ ಸೌಲಭ್ಯ ಇನ್ನೂ ಮರೀಚಿಕೆಯಾಗಿ ದೂರ ಉಳಿಯುವಂತಾಗಿದೆ.
ನಿತ್ಯ ಈ ಗ್ರಾಮದ ವ್ಯಾಪ್ತಿಯಲ್ಲಿನ ಮಜರೆ ಸಾಕಷ್ಟು ಗ್ರಾಮಗಳು ಸೇರುತ್ತಿದ್ದು ಈ ಮಾರ್ಗದಲ್ಲಿಯೇ ರಿಪ್ಪನ್‌ಪೇಟೆಯ ಶಾಲಾ ಕಾಲೇಜ್‌ಗಳಿಗೆ ನೂರಾರು ವಿದ್ಯಾರ್ಥಿಗಳು ಓಡಾಡುವಂತಾಗಿದ್ದು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಸರಿಯಾದ ರಸ್ತೆಯಿಲ್ಲದೆ ವಿದ್ಯಾರ್ಥಿಗಳು ಸರ್ಕಾರದ ಸೈಕಲ್ ಸಹ ಹೊಡೆಯದೇ ಕಾಲ್ನಡಿಗೆಯಲ್ಲಿ ಬಂದು ಹೋಗುವ ಸ್ಥಿತಿ ನಿರ್ಮಾಣವಾಗಿದ್ದು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುವಂತಾಗಿದೆ.
ಇದನ್ನು ಮನಗಂಡ ಗ್ರಾಮದವರೇ ಇಂದು ನಮ್ಮೂರಿನ ರಸ್ತೆ ನಾವೇ ಮಾಡಿಕೊಳ್ಳುವುದು ಒಳ್ಳೆಯದು ಎಂದು ಅರಿತು ತಾವುಗಳೇ ಜೆಸಿಬಿಯ ಮೂಲಕ ರಸ್ತೆ ನಿಮಾನಕ್ಕೆ ಮುಂದಾಗಿದ್ದು ಜನಪ್ರತಿನಿಧಿಗಳ ಮನೆಗೆ ಅಲೆದಾಡಿ ಕೊನೆಗೆ ಬೇರೆ ಮಾರ್ಗವಿಲ್ಲ ಎಂದು ಭಾವಿಸಿ ತಮ್ಮ ಸ್ವಂತ ಖರ್ಚಿನಲ್ಲಿ ಜೆಸಿಬಿಯ ಮೂಲಕ ರಸ್ತೆ ಮಾಡಲು ಮುಂದಾಗಿರುವುದಾಗಿ ವಿವರಿಸಿದರು.