ನೌಕರರ ನಿಯತ್ತೇ ಸಂಸ್ಥೆಯ ತಾಕತ್ತು ; ಶಾಸಕ ಹರತಾಳು ಹಾಲಪ್ಪ

ರಿಪ್ಪನ್‌ಪೇಟೆ: ಯಾವುದೇ ಒಂದು ಸಂಸ್ಥೆ ಉತ್ತರೋತ್ತರವಾಗಿ ಅಭಿವೃದ್ಧಿಯನ್ನು ಸಾಧಿಸಬೇಕಾದಲ್ಲಿ ಅಲ್ಲಿನ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಅಂತಹ ಸಂಸ್ಥೆಯ ಗಟ್ಟಿತನವನ್ನು ಅಲ್ಲಿನ ಸಿಬ್ಬಂದಿಗಳ ನಿಯತ್ತು ನಿರ್ಧರಿಸುತ್ತದೆ ಎಂದು ಶಾಸಕ ಹಾಗೂ ಎಂಎಸ್‌ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು.

ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡ ಹಾಗೂ 85 ಲಕ್ಷ ರೂ. ವೆಚ್ಚದ ನಬಾರ್ಡ್ ಯೋಜನೆಯಲ್ಲಿ ನಿರ್ಮಿಸಿರುವ ಬಹುಸೇವಾ ವಾಣಿಜ್ಯ ಗೋದಾಮು ಹಾಗೂ 4ನೇ ವರ್ಷದ ಜಿಲ್ಲಾ ಮಟ್ಟದ ಜಾನಪದ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಹಿಂದಿನ ದಿನಗಳಲ್ಲಿ ಉಳ್ಳವರಿಂದ ಇಲ್ಲದವರು ಹುಲಿ ಭತ್ತದ ವ್ಯವಹಾರವನ್ನು ನಡೆಸುತ್ತಿದ್ದರು. ತೆಗೆದುಕೊಂಡ ಭತ್ತವನ್ನು ವಾಪಾಸು ನೀಡಲಾಗದೆ ಬಹಳಷ್ಟು ಕುಟುಂಬಗಳು ಮುಳುಗಿಹೋಗಿರುವ ಉದಾಹರಣೆಗಳು ಸಾಕಷ್ಟಿದೆ. ಅಂತಹ ಕಾಲಘಟ್ಟದಲ್ಲಿ ಸಹಕಾರಿ ಪದ್ಧತಿಯು ಪ್ರವರ್ಧಮಾನಕ್ಕೆ ಬಂದು ರೈತರಲ್ಲಿ ಒಂದು ಹೊಸ ಭರವಸೆಯನ್ನು ಮೂಡಿಸಿದೆ. ಬ್ಯಾಂಕ್‌ಗಳಿಂದ ರೈತರು ತೆಗೆದುಕೊಳ್ಳುವ ಸಾಲಕ್ಕೆ ಶೇ.18% ಬಡ್ಡಿ ದರಂತೆ ಮರುಪಾವತಿ ಮಾಡಬೇಕಾಗಿತ್ತು. ಕಾಲಾನಂತರ ಸರ್ಕಾರಗಳು ರೈತರ ನೆರವಿಗೆ ಧಾವಿಸಿ ಹಂತಹಂತವಾಗಿ ಬಡ್ಡಿ ದರವನ್ನು ಕಡಿತಗೊಳಿಸುತ್ತ ಬಂದು ಈಗ ಶೂನ್ಯ ಬಡ್ಡಿದರದಲ್ಲಿಯೂ ರೈತರಿಗೆ ಸಾಲ ನೀಡುವ ಯೋಜನೆಯಿದೆ. ಗ್ರಾಮೀಣ ಪ್ರದೇಶದಲ್ಲಿ ಪ್ರಕೃತಿ ಸಂಕಷ್ಟಗಳಿರಲೀ, ಬೆಲೆಗಳ ಏರಿಳಿತವಾಗಲೀ ಮೊದಲು ಬಿಸಿ ತಟ್ಟುವುದು ಸಹಕಾರ ಸಂಘಗಳಿಗೆ. ಸಂಘದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳು ಅಧ್ಯಯನ ಶೀಲರಾಗಿದ್ದು ರೈತಪರ ಯೋಜನೆಗಳನ್ನು ರೂಪಿಸುವುದರಿಂದ ರೈತರ ಹಿತಕಾಪಾಡುವ ಜೊತೆಗೆ ಸಂಸ್ಥೆಯ ಅಭಿವೃದ್ಧಿಯನ್ನು ಕಾಣಬಹುದು. ಸುಮಾರು 109 ವರ್ಷವಾಗಿರುವ ರಿಪ್ಪನ್‌ಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತಕ್ಕೆ ಅಧ್ಯಕ್ಷರಾದ ಎಂ.ಎಂ. ಪರಮೇಶ ಹಾಗೂ ಅವರ ಆಡಳಿತ ಮಂಡಳಿಯು ಅವಿರತವಾಗಿ ಶ್ರಮಿಸಿರುವ ಪ್ರತಿಫಲವಾಗಿ ಸಂಘವು ಲಾಭದಾಯಕದಲ್ಲಿದ್ದು, ಸುಸಜ್ಜಿತ ಬೃಹತ್ ಸ್ವಂತ ಕಟ್ಟಡವನ್ನು ನಿರ್ಮಿಸಲು ಸಾಧ್ಯವಾಗಿದೆ. ಅವರ ಕಾರ್ಯ ಕ್ಷಮತೆ ಮೆಚ್ಚಬೇಕಿದ್ದು, ಜೊತೆಗೆ ಇತರ ಸಹಕಾರಿ ಸಂಘಗಳಿಗೆ ಮಾದರಿಯಾಗಿದ್ದಾರೆಂದು ಶ್ಲಾಘಿಸಿದರು.

ರಿಪ್ಪನ್‌ಪೇಟೆ ಪಟ್ಟಣದಲ್ಲಿ ಶಿವಮೊಗ್ಗ ಜಿಲ್ಲಾ ಜಾನಪದ ಪರಿಷತ್ತಿನ ಸಮ್ಮೇಳನದ ಕಲಾತಂಡಗಳ ಮೆರವಣಿಗೆ

ಸಹಕಾರಿ ಚಳುವಳಿ ಜನರ ಚಳುವಳಿ:
ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಪಕ್ಷ, ಜಾತಿ, ರಾಜಕಾರಣ ಬೇಡ. ಸ್ವಾತಂತ್ರ್ಯ ಪೂರ್ವದಿಂದಲೂ ಜನರ, ರೈತರ ನಾಡಿಮಿಡತವನ್ನು ಅರಿತು ಅವರ ಬದುಕನ್ನು ಸರಿದಾರಿಗೆ ತರುವ ಉದ್ದೇಶದಿಂದ ರೂಪಿತವಾದ ಸಹಕಾರಿ ಚಳುವಳಿಗಳು ನಿಜವಾಗಿಯೂ ಜನರ ಚಳುವಳಿಗಳಾಗಿದೆ. ಇದರಿಂದಲೇ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತಿದೆ. ಶಿವಮೊಗ್ಗ ಜಿಲ್ಲೆಯೊಂದರಲ್ಲೆ ಸುಮಾರು ಒಂದು ಸಾವಿರ ರೈಸ್‌ಮಿಲ್‌ಗಳು ಮುಚ್ಚಿವೆ. ಕಾರಣ ಭತ್ತದ ಬೆಳೆ ಕ್ಷೀಣವಾಗಿರುವುದು. ಮಿಲ್‌ಗಳು ಮುಚ್ಚಿರುವ ಕಾರಣ ಸಾವಿರಾರು ಜನರ ಉದ್ಯೋಗ ನಷ್ಟವಾಗಿದ್ದು, ಆರ್ಥಿಕ ಸ್ಥಿತಿಯ ಮೇಲೆ ದುಷ್ಪರಿಣಾಮ ಬೀರಿದೆ. ಆದ್ದರಿಂದ ಭತ್ತದ ಜೊತೆಗೆ ಆಹಾರ ಧಾನ್ಯ ಬೆಳೆಗಳಿಗೆ ಸರಕಾರಗಳು ಸೂಕ್ತ ಬೆಲೆ ನೀಡಬೇಕು. ಇತ್ತೀಚೆಗೆ ನಬಾರ್ಡ್ ಕೂಡ ಲಾಭದಾಯಕ ವಿಚಾರದೊಂದಿಗೆ ರೈತರೊಂದಿಗೆ ವ್ಯವಹಾರ ನಡೆಸುತ್ತಿದೆ. ರೈತರ ಸರಾಸರಿ ಸಾಲದ ಗುರಿ 30 ಸಾವಿರ ರೂ.ಗಳಾಗಿದ್ದು, ಇದನ್ನು ಒಂದು ಲಕ್ಷಕ್ಕೆ ಏರಿಸುವ ದಿಶೆಯಲ್ಲಿ ನಬಾರ್ಡ್ ಹಾಗೂ ರಿಸರ್ವ್ ಬ್ಯಾಂಕ್‌ಗಳು ಯೋಜನೆ ರೂಪಿಸಿಬೇಕು. ಈ ದೇಶದ ಆರ್ಥಿಕ ವ್ಯವಸ್ಥೆ ಉಳಿದಿರುವುದು ಸಹಕಾರಿ ಸಂಸ್ಥೆಗಳಿಂದ. ಸಹಕಾರಿ ಸಂಸ್ಥೆಗಳನ್ನು ಬಲಪಡಿಸದಿದ್ದರೆ ದೇಶದ ಆರ್ಥಿಕತೆಗೆ ಪೆಟ್ಟುಬೀಳಲಿದ್ದು ಸರಕಾರಗಳು ಈ ಬಗ್ಗೆ ಗಮನ ಹರಿಸಬೇಕು ಎಂದರು.

ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಮಲೆನಾಡಿ ಭಾಗಗಳಲ್ಲಿ ಈ ಭಾರಿಯ ಹವಾಮಾನ ವೈಪರಿತ್ಯದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಅಡಿಕೆ ಬೆಳೆಗೆ ಎಲೆಚುಕ್ಕೆ ರೋಗ ವ್ಯಾಪಕವಾಗಿ ಬಾಧಿಸುತ್ತಿದ್ದು, ಬಹುತೇಕ ತೋಟಗಳು ಅಳಿವಿನಂಚಿನಲ್ಲಿವೆ. ರೈತರ ನೆರವಿಗೆ ಸರಕಾರ ಧಾವಿಸುವ ಅಗತ್ಯವಿದ್ದು ಎಲ್ಲಾ ರೈತರ ಸಾಲವನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.


ಕನ್ನಡ ಸಾಹಿತ ಪರಿಷತ್ ಹಾಗೂ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಅಧ್ಯಕ್ಷ ಡಿ. ಮಂಜುನಾಥ ಮಾತನಾಡಿ, ಕೃಷಿ ಜಾನಪದಕ್ಕೂ ಅವಿನಾಭಾವ ಸಂಬಂಧವಿದೆ. ಸಹಕಾರಿ ಸಂಘದೊಡನೆ ಜಾನಪದ ಕಲೆಯನ್ನು ಸೇರಿಸಿ ಮನರಂಜನೆ ನೀಡಬಹುದೆಂಬುದನ್ನು ಪ್ರಥಮವಾಗಿ ಸಂಘ ತೋರಿಸಿಕೊಟ್ಟಿದೆ. ಜಾನಪದ ಕಲೆಯನ್ನು ಉಳಿಸಬೇಕಾದರೆ ಕಲಾವಿದರನ್ನು ಜೋಪಾನ ಮಾಡಬೇಕು. ನಿಮ್ಮ ಮನೆಬಾಗಲಿಗೆ ಬಂದ ಕಲಾವಿದರನ್ನು ಭಿಕ್ಷುಕರಂತೆ ಕಾಣದೆ. ಒಬ್ಬ ಸಾಂಸ್ಕೃತಿಕ ರಾಯಭಾರಿಯನ್ನಾಗಿ ಕಂಡು ಪ್ರೋತ್ಸಾಹಿಸಿದರೆ ಕಲೆ ಬೆಳೆಯುತ್ತದೆ. ಪುರಾತನ ಜಾನಪದ ಕಲೆಯು ಶ್ರೇಷ್ಠ ಪರಂಪರೆಯಾಗಿದ್ದು, ಅದನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ಎಲ್ಲರಮೇಲಿದೆ ಎಂದರು.

ಸಹಕಾರಿ ಸಂಘದ ಅಧ್ಯಕ್ಷ ಎಂ.ಎಂ. ಪರಮೇಶ ಮಾತನಾಡಿ, ಅನಿರೀಕ್ಷಿತವಾಗಿ ಸಹಕಾರಿ ಕ್ಷೇತ್ರಕ್ಕೆ ಬಂದ ನಾನು ನಿಮ್ಮೆಲ್ಲರ ಆಶೀರ್ವಾದದಿಂದ ಒಂದಷ್ಟು ಕೆಲಸವನ್ನು ನಿರ್ವಹಿಸುತ್ತಿದ್ದೇನೆ. ಸಹಕಾರ ಸಂಘದ ಶ್ರೇಯಸ್ಸು ಎಲ್ಲಾ ಷೇರುದಾರರಿಗೆ ಸಲ್ಲುತ್ತದೆ. ನಾವಿಲ್ಲಿ ನಿಮ್ಮ ಸೇವಕನಾಗಿದ್ದು, ಮಾಲೀಕರಾದ ತಾವುಗಳು ನೀಡುವ ಸಲಹೆ, ಸಹಕಾರದಿಂದ ಇನ್ನಷ್ಟು ಅಭಿವೃದ್ಧಿಯನ್ನು ಮಾಡಬಹುದು. ನಮ್ಮ ಬೆನ್ನಿಗೆ ನಿಂತು ಸಂಘವನ್ನು ಲಾಭಗಳಿಸಲು, ಉತ್ತಮ ಕಟ್ಟಡ ನಿರ್ಮಾಣಮಾಡಲು ಪ್ರೊತ್ಸಾಹಿಸಿದಂತಹ ಮಾಜಿ ಅಧ್ಯಕ್ಷರು, ನಿರ್ದೇಶಕರು ಹಾಗೂ ಷೇರುದಾರರಿಗೆ ಋಣಿಯಾಗಿದ್ದು ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ರಿಪ್ಪನ್‌ಪೇಟೆ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ನೂತನ ಕಟ್ಟಡವನ್ನು ಶಾಸಕ ಹರತಾಳು ಹಾಲಪ್ಪ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸಮ್ಮೇಳನ ಅಧ್ಯಕ್ಷ ಆಂಜನೇಯ ಜೋಗಿ, ಸಂಘದ ಉಪಾಧ್ಯಕ್ಷ ಎನ್.ಪಿ. ರಾಜು, ಗ್ರಾಮ ಪಂಚಾಯತಿ ಉಪಾಧ್ಯಕ್ಷೆ, ಮಹಾಲಕ್ಷ್ಮಿ, ಡಿ.ಸಿ.ಸಿ. ಉಪಾಧ್ಯಕ್ಷ ಷಡಾಕ್ಷರಿ, ನಿರ್ದೇಶಕ ಮಧುಸೂದನ್ ಎಸ್. ನಾವಡ, ವಾಟಗೋಡು ಸುರೇಶ, ನಬಾರ್ಡ್ ಬ್ಯಾಂಕ್ ಅಧಿಕಾರಿ ಜಿ. ರವಿ, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಹೆಚ್.ಎನ್. ವಿಜಯದೇವ್, ವಿಜಯೇಂದ್ರ ಶೇಟ್, ಸಂಘದ ನಿರ್ದೇಶಕರು ಇನ್ನಿತರರಿದ್ದರು.

ಕರ್ನಾಟಕ ಜಾನಪದ ಪರಿಷತ್ ಶಿವಮೊಗ್ಗ ಮತ್ತು ಹೊಸನಗರ ತಾಲ್ಲೂಕು ಶಾಖೆಯ ಆಶ್ರಯದಲ್ಲಿ ಹೊಸನಗರ ರಸ್ತೆಯ ಬಿಎಸ್‌ಬಿ ಕಲ್ಯಾಣ ಮಂದಿರದಿಂದ ಹಿಂದೂ ರಾಷ್ಟ್ರಸೇನಾ ಸಭಾಂಗಣಕ್ಕೆ ಜಿಲ್ಲೆಯ ಹೆಸರಾಂತ ಜಾನಪದ ಕಲಾತಂಡಗಳೊಂದಿಗೆ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ನಡೆಯಿತು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,745FollowersFollow
0SubscribersSubscribe
- Advertisement -spot_img

Latest Articles

error: Content is protected !!