ರಿಪ್ಪನ್‌ಪೇಟೆ: ಅರಸಾಳು ಗ್ರಾಪಂ ವ್ಯಾಪ್ತಿಯ ಬಸವಾಪುರ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟಗಾರನಿಗೆ ಮಹಿಳೆಯರಿಂದ ಪೊರಕೆ ಸೇವೆ ನಡೆಸಿರುವ ಘಟನೆ ವರದಿಯಾಗಿದೆ.
ಬಸವಾಪುರ ಗ್ರಾಮದ ಅಕ್ರಮ ಮದ್ಯ ಮಾರಾಟಗಾರ ನಂದ್ಯಪ್ಪ ಡಿ.ಪಿ ಎಂಬುವವನಿಗೆ ಮಹಿಳೆಯರು ಪೊರಕೆ ಸೇವೆ ಮಾಡಿದ ವಿಡಿಯೋ ವೈರಲ್ ಆಗಿದ್ದು ಅಂತರರಾಷ್ಟ್ರೀಯ ಮಹಿಳಾ ದಿನವಾದ ಇಂದು ಮಹಿಳೆಯರು ತಮ್ಮ ನಾರಿಶಕ್ತಿ ಪ್ರದರ್ಶನ ಮಾಡಿದ್ದಾರೆ.
ಕುಡಿದು ಬಂದು ಗಲಾಟೆ ಮಾಡುತ್ತಿದ್ದ ತಮ್ಮ ಗಂಡಂದಿರ ಕಾಟ ತಾಳಲಾರದೆ ಅಕ್ರಮ ಮದ್ಯ ಮಾರಾಟಗಾರನಿಗೆ ಬೆಳಂಬೆಳಗ್ಗೆ ಪೊರಕೆ ಸೇವೆ ಮಾಡಿದ್ದಾರೆ. ಅಬಕಾರಿ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರು ರೈಡ್‌ಗೆ ಬಂದ ಹಾಗೆ ಮಾಡಿ ಅಂಗಡಿವರ ಬಳಿ ಲಂಚ ಪಡೆದು ಹೋಗುತ್ತಿದ್ದರು. ಇದರಿಂದ ರೊಚ್ಚಿಗೆದ್ದ ಮಹಿಳೆಯರು ಇಂದು ಮದ್ಯ ಮಾರಾಟಗಾರನಿಗೆ ಪೊರಕೆ ಸೇವೆ ಮಾಡಿದ್ದು ಮುಂದೊಂದು ದಿನ ಅಬಕಾರಿ ಅಧಿಕಾರಿಗಳಿಗೂ ಇದೇ ಗತಿಯಾಗುವುದೆಂದು ಬಸವಾಪುರ ಗ್ರಾಮದ ಮಹಿಳೆಯರು ಎಚ್ಚರಿಕೆ ನೀಡಿದ್ದಾರೆ.
ಈ ವ್ಯಾಪ್ತಿಯ ಸುತ್ತಮುತ್ತಲಿನಲ್ಲಿ ಇನ್ನೂ ಮೂರ್ನಾಲ್ಕು ಇದೇ ರೀತಿ ಅಕ್ರಮ ಮದ್ಯ ಮಾರಾಟ ಅಂಗಡಿಗಳಿದ್ದು ಅವರಿಗೆ ಈ ಮೂಲಕ ಎಚ್ಚರಿಕೆ ನೀಡಿದ್ದಾರೆ.