ರಿಪ್ಪನ್‌ಪೇಟೆ : ಇತ್ತೀಚೆಗೆ ಕಳ್ಳತನ ಆರೋಪದಲ್ಲಿ ಪಟ್ಟಣದ ಠಾಣೆಯಲ್ಲಿ ಬಂಧಿತನಾಗಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಎಸ್ಕೇಪ್ ಆಗಿ ರಾಜ್ಯಾದ್ಯಂತ ಸುದ್ದಿಯಾಗಿದ್ದ ಇಲ್ಲಿನ ವಡಗೆರೆಯ ನಿವಾಸಿ ಪ್ರತಾಪ್ ಮತ್ತೊಂದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಘಟನೆಯ ಹಿನ್ನಲೆ:
ಶುಕ್ರವಾರ ತಡರಾತ್ರಿ ವಡಗೆರೆ ನಿವಾಸಿ ಭರತ್ ಸಿಂಗ್ ಎಂಬಾತನು ಮನೆಯಲ್ಲಿ ಊಟ ಮಾಡಿಕೊಂಡು ತನ್ನ ಸ್ನೇಹಿತ ಬಾಲಾಜಿರವರ ಶುಂಠಿ ಕಾಯಲು ಮನೆಯ ಮುಂಭಾಗ ಹೋಗುತ್ತಿದ್ದಾಗ ಭರತ್ ಬೈಕ್ ಹತ್ತಿರ ಪ್ರತಾಪ್ ಸಿಂಗ್ ನಿಂತಿದ್ದು, ಯಾರು ಎಂದು ಕೇಳಿದ್ದಕೆ ಪ್ರತಾಪ್ ಸಿಂಗ್ ಏಕಾಏಕಿ ಭರತ್ ಮೇಲೆ ಅವಾಚ್ಯವಾಗಿ ನಿಂದಿಸಿ ಹೊಡೆದು ನಂತರ ಅಲೆ ಇದ್ದ ದೊಣ್ಣೆಯಿಂದ ಭರತ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಭರತ್ ಸಿಂಗ್ ಜೋರಾಗಿ ಕೂಗಿ ಕೊಂಡಿದ್ದರಿಂದ ತಾಯಿ ಮತ್ತು ಸ್ಥಳೀಯರು ಬಂದಿದ್ದಾರೆ. ಈ ಸಂಧರ್ಭದಲ್ಲಿ ಭರತ್ ಸಿಂಗ್ ಗೆ ಜೀವಬೆದರಿಕೆ ಹಾಕಿ ಪ್ರತಾಪ್ ಓಡಿಹೋಗಿದ್ದಾನೆ.
ನಂತರ ಭರತ್ ಸಿಂಗ್ ತಾಯಿ ಮತ್ತು ಸ್ಥಳೀಯರು ಗಂಭೀರ ಗಾಯಗೊಂಡಿದ್ದ ಭರತ್ ನನ್ನು ರಿಪ್ಪನ್‌ಪೇಟೆ ಆಸ್ಪತ್ರೆಗೆ ಕರೆದುಕೊಂಡು ಬಂದು ನಂತರ ಅಲ್ಲಿಂದ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ 108 ಆ್ಯಂಬುಲೆನ್ಸ್ ನಲ್ಲಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿ ಒಳರೋಗಿಯಾಗಿ ದಾಖಲಿಸಿದ್ದಾರೆ.
ಈ ಬಗ್ಗೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.