ರಿಪ್ಪನ್‌ಪೇಟೆ: ಈಗ ಎಲ್ಲೆಡೆ ಕೇರೆ ಹಾವುಗಳ ಮಿಲನ ಶುರುವಾಗಿದೆ, ಕೆಲವು ಸಲ ನವೆಂಬರ್ ತಿಂಗಳಿಂದಲೇ ಶರುವಾಗಿ ಏಪ್ರಿಲ್ ಮೇ ವರೆಗೂ ಇರುತ್ತದೆ.ಹೆಣ್ಣಿಗಾಗಿ ಗಂಡುಗಳು ಹೋರಾಟದಲ್ಲಿ ತೊಡಗುತ್ತವೆ, ಈ ಹೋರಾಟ ಅಥವಾ ಕುಸ್ತಿಯನ್ನೇ ಬಹುತೇಕ ಜನ ಮಿಲನ ಹೆಣೆ ಅಥವಾ ಬೆದೆಯಾಡುವುದು ಎಂದು ಕರೆಯುತ್ತಾರೆ. ಹಗ್ಗದ ಎಳೆಗಳಂತೆ ಬಿಗಿಯಾಗಿ ಸುತ್ತಿಕೊಳ್ಳುತ್ತಾ ಹೊರಳಾಡುವ ಈ ಪ್ರಕ್ರಿಯೆ ಎರಡು ಗಂಡು ಹಾವುಗಳ ಕುಸ್ತಿಯಾಗಿರುತ್ತದೆ (Combat).
ಗಂಡು ಹೆಣ್ಣು ಹೆಣೆಯಾಡುವಾಗ (mating) ಜನನಾಂಗವಿರುವ ಜಾಗದ ಬಳಿ ಗಂಡು ಹೆಣ್ಣು ಒಂದು ಸುತ್ತು ಸುತ್ತಿಕೊಂಡು ಇಲ್ಲವೆ, ಜನನಾಂಗಗಳನ್ನು ಬೆಸೆದುಕೊಂಡು ವಿರುದ್ಧ ದಿಕ್ಕಿನಲ್ಲಿ ಅಥವಾ ಒಂದರ ಪಕ್ಕ ಇನ್ನೊಂದು ಸುಮ್ಮನೆ ಬಿದ್ದುಕೊಂಡಿರುತ್ತವೆ. ಕೆಲವು ಸಲ ಗಂಡು ಹೆಣ್ಣನ್ನು ಮೃದುವಾಗಿ ಕಚ್ಚುವುದನ್ನು ನೋಡಬಹುದು.
ಬಹುತೇಕ ಜನ ಕೇರೆ ಹಾವು ನಾಗರಹಾವು ಹೆಣೆಯಾಡುತ್ತವೆ ಎಂದು ಹೇಳುತ್ತಾರೆ. ಕೇರೆ ಹಾವು ಮತ್ತು ನಾಗರಹಾವುಗಳಲ್ಲಿ ಗಂಡು ಹೆಣ್ಣು ಇರುವುದರಿಂದ ಆಯಾ ಜಾತಿಯ ಹಾವುಗಳು ಮಾತ್ರ ಹೆಣೆಯಾಡುತ್ತವೆ. ಕೇರೆ ಹಾವು ನಾಗರಹಾವು ಹೆಣೆಯಾಡುವುದು ಸಾಧ್ಯವೆ ಇಲ್ಲ.
ಕೆಲವು ದಿನಗಳಿಂದ ನಮ್ಮನೆ ಸಮೀಪ ಕೇರೆಹಾವುಗಳ ಕುಸ್ತಿ ಹಾಗು ಹೆಣೆಯಾಡುವ ಎರಡೂ ದೃಶ್ಯಗಳು ಕಾಣುತ್ತಿವೆ.ಕುಸ್ತಿ ಆಡುವಾಗ ಹತ್ತಿರ ಹೋದರೂ ನಮ್ಮನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಆದರೆ ಮಿಲನವಾಗುವಾಗ ಹತ್ತಿರ ಹೋಗುತ್ತಿದ್ದಂತೆ ಜನನಾಂಗಗಳನ್ನು ಬಿಡಿಸಿಕೊಂಡು ಓಡಿ ಹೋಗುತ್ತವೆ, ಹಾಗಾಗಿ ಅವುಗಳ ಮಿಲನ ಕ್ರಿಯೆಗೆ ಅಡ್ಡಿಪಡಿಸುವುದು ಬೇಡ ಎಂದು ಮಿಲನದ ವೀಡಿಯೋ ಮಾಡಿಲ್ಲ.
ಬರಹ : ನಾಗರಾಜ್ ಬೆಳ್ಳೂರು, ನಿಸರ್ಗ ಕನ್ಸರ್ವೇಶನ್ ಟ್ರಸ್ಟ್.