9 ಮತ್ತು 10ನೇ ತರಗತಿ ಮಕ್ಕಳಿಗೂ ಬೇಯಿಸಿದ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ ಕಾರ್ಯಕ್ರಮ
ಜಿ.ಪಂ ಸಿಇಓ ರಿಂದ ಚಾಲನೆ

0 37


ಶಿವಮೊಗ್ಗ : ಮಕ್ಕಳಲ್ಲಿ ಅಪೌಷ್ಟಿಕತೆ ಮತ್ತು ರಕ್ತಹೀನತೆ ನಿವಾರಣೆಗಾಗಿ ಜಾರಿಗೆ ತರಲಾಗಿರುವ ಪಿ.ಎಂ.ಪೋಷಣ್ ಮಧ್ಯಾಹ್ನ ಉಪಹಾರ ಯೋಜನೆಯಡಿ 9 ಮತ್ತು 10 ನೇ ತರಗತಿ ಮಕ್ಕಳಿಗೂ ಬೇಯಿಸಿದ ಮೊಟ್ಟೆ, ಮೊಟ್ಟೆ ಸೇವಿಸದವರಿಗೆ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿಯನ್ನು ಇಂದಿನಿಂದ ವಿತರಿಸಲಾಗುತ್ತಿದೆ ಎಂದು ಜಿ.ಪಂ.ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ ತಿಳಿಸಿದರು.


ಇಂದು ಪಿಳ್ಳಂಗಿರಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಈ ಯೋಜನೆಗೆ ಚಾಲನೆ ನೀಡಿ, ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದೊಂದಿಗೆ ಮೊಟ್ಟೆ/ಬಾಳೆಹಣ್ಣು/ಶೇಂಗಾ ಚಿಕ್ಕಿಯನ್ನು ವಿತರಣೆ ಮಾಡಿ ಮಾತನಾಡಿದರು.
ಈ ಹಿಂದೆ 1 ರಿಂದ 8 ನೇ ತರಗತಿ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರವನ್ನು ವಾರದಲ್ಲಿ ಒಂದು ದಿನ ಮೊಟ್ಟೆ, ಮೊಟ್ಟೆ ಸೇವಿಸದ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿಯನ್ನು ವಾರ್ಷಿಕ ಒಟ್ಟು 46 ದಿನಗಳ ಕಾಲ ವಿತರಸಲಾಗಿತ್ತು.
9 ಮತ್ತು 10 ನೇ ತರಗತಿ ಮಕ್ಕಳಿಗೂ ಕೂಡ ಪೌಷ್ಟಿಕಾಂಶವುಳ್ಳ ಪೂರಕ ಆಹಾರವನ್ನು ನೀಡಬೇಕಂದು ನಿರ್ಧರಿಸಿ ಸರ್ಕಾರ ಪ್ರಸಕ್ತ ಸಾಲಿನ ಇಂದಿನಿಂದ ಈ ಮಕ್ಕಳಿಗೂ ಈ ಯೋಜನೆಯನ್ನು ವಿಸ್ತರಿಸಿದೆ. ಮಕ್ಕಳಿಗೆ ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳಿಗೆ ಪೌಷ್ಟಿಕಾಂಶ ಆಹಾರ ಅಗತ್ಯವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ವೃದ್ದಿಸುವಲ್ಲಿ ಇದು ಸಹಕಾರಿಯಾಗಿದೆ. ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಲು ಇದು ಸಹಕರಿಸುತ್ತದೆ. ವಿದ್ಯಾರ್ಥಿಗಳ ಇದರ ಸದುಪಯೋಗ ಪಡೆದು ಉತ್ತಮ ವಿದ್ಯಾಭ್ಯಾಸ ಪಡೆದು ಉತ್ತಮ ನಾಗರೀಕರಾಗಬೇಕೆಂದು ಹಾರೈಸಿದರು.


ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ, ಜಿಲ್ಲೆಯಲ್ಲಿ ಒಟ್ಟು 159507 ವಿದ್ಯಾರ್ಥಿಗಳಿದ್ದು ವಾರ್ಷಿಕವಾಗಿ ರೂ.7.65 ಕೋಟಿ ಅನುನಾದ ಈ ಯೋಜನೆಯಡಿ ನಿಗದಿಯಾಗಿದೆ. ಇಂದು ಪಿಳ್ಳಂಗಿರಿ ಪ್ರೌಢಶಾಲೆಯಲ್ಲಿ ಹಾಜರಿದ್ದ 254 ಮಕ್ಕಳ ಪೈಕಿ 224 ಮಕ್ಕಳು ಮೊಟ್ಟೆ, 29 ಮಕ್ಕಳು ಶೇಂಗಾ ಚಿಕ್ಕಿ ಮತ್ತು 01 ಮಗು ಬಾಳೆ ಹಣ್ಣನ್ನು ಸೇವಿಸಿದರು ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಬಿಇಓ ನಾಗರಾಜ್, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ದಾದಾಪೀರ್, ಪ್ರಾಥಮಿಕ ಮತ್ತು ಪ್ರೌಢಶಾಲಾ ಎಸ್‍ಡಿಎಂಸಿ ಅಧ್ಯಕ್ಷರು, ಶಾಲಾ ಮುಖ್ಯೋಪಾಧ್ಯಾಯಿನಿ ವಿಶಾಲಾಕ್ಷಿ, ಸಹ ಶಿಕ್ಷಕರು, ಶಿಕ್ಷಣ ಸಂಯೋಜನಾಧಿಕಾರಿಗಳು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದರು.

Leave A Reply

Your email address will not be published.

error: Content is protected !!