Shivamogga Airport | ಕೊನೆಗೂ ಮಲೆನಾಡಿನಲ್ಲಿ ಲೋಹದ ಹಕ್ಕಿಗಳ ಕಲರವ ಗರಿಗೆದರಲು ಮುಹೂರ್ತ ಫಿಕ್ಸ್

0 44

ಶಿವಮೊಗ್ಗ : ಮಲೆನಾಡಿನಲ್ಲಿ ಕೊನೆಗೂ ಲೋಹದ ಹಕ್ಕಿಗಳ ಕಲರವ ಗರಿಗೆದರಲು ಮುಹೂರ್ತ ಕೂಡಿ ಬಂದಿದೆ. ಆಗಸ್ಟ್ 11ರಂದು ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣದಿಂದ ಇಂಡಿಗೋ ಸಂಸ್ಥೆಯ ಮೊದಲ ವಿಮಾನ ಬೆಂಗಳೂರಿನತ್ತ ಹಾರಲಿದೆ.

ಅದೇ ದಿನದಿಂದ ಶಿವಮೊಗ್ಗ-ಬೆಂಗಳೂರು ನಡುವೆ ಅಧಿಕೃತವಾಗಿ ವಿಮಾನ ಹಾರಾಟ ಶುರುವಾಗಲಿದೆ’ ಎಂದು ಇಂಡಿಗೋ ವಿಮಾನಯಾನ ಸಂಸ್ಥೆಯ ಹುಬ್ಬಳ್ಳಿ ವಲಯದ ಮುಖ್ಯಸ್ಥ ಮನೋಜ್ ಪ್ರಭು ಖಚಿತ‍ಪಡಿಸಿದ್ದಾರೆ‌.

‘ವಿಮಾನ ಪ್ರತಿದಿನ ಬೆಳಿಗ್ಗೆ 9ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಲಿದೆ. ಶಿವಮೊಗ್ಗಕ್ಕೆ ಬೆಳಿಗ್ಗೆ 10:30ಕ್ಕೆ ಬರಲಿದೆ. ಮಧ್ಯಾಹ್ನ 12ಕ್ಕೆ ವಾಪಸ್ ತೆರಳಲಿದೆ. ಮಧ್ಯಾಹ್ನ 1:30ಕ್ಕೆ ಬೆಂಗಳೂರು ತಲುಪಲಿದೆ. ಪ್ರಯಾಣಿಕರ ಸ್ಪಂದನೆ ನೋಡಿಕೊಂಡು ಬೇರೆ ಕಡೆಗೆ ವಿಮಾನ ಹಾರಾಟ ಆರಂಭಿಸಲಿದ್ದೇವೆ. ಸದ್ಯ ದಿನಕ್ಕೆ ಒಂದು ಬಾರಿ ಮಾತ್ರ ವಿಮಾನ ಹಾರಾಟ ನಡೆಸಲಿದೆ’ ಎಂದು ಹೇಳಿದ್ದಾರೆ.

‘ಇಂಡಿಗೋ ಸಂಸ್ಥೆಯ ಎಟಿಆರ್‌ 72 ಮಾದರಿಯ 78 ಆಸನಗಳ ವಿಮಾನ ಹಾರಾಟ ಆರಂಭಿಸಲಿದೆ. ಜೂನ್‌ ತಿಂಗಳ ಕೊನೆಯ ವಾರ ಇಲ್ಲವೇ ಜುಲೈ ಮೊದಲ ವಾರ ವಿಮಾನ ಹಾರಾಟಕ್ಕೆ ಅಧಿಕೃತ ಚಾಲನೆಯ ಸಂಭ್ರಮ ಸೋಗಾನೆ ವಿಮಾನ ನಿಲ್ದಾಣದಲ್ಲಿ ಹಂಚಿಕೊಳ್ಳಲಿದ್ದೇವೆ. ನಂತರ ಟಿಕೆಟ್ ಬುಕ್ಕಿಂಗ್ ಆರಂಭವಾಗಲಿದೆ’ ಎಂದು ಮನೋಜ್‌ ಪ್ರಭು ತಿಳಿಸಿದ್ದಾರೆ.

ಐದು ತಿಂಗಳ ನಂತರ ಬಳಕೆ:

ಸೋಗಾನೆ ವಿಮಾನ ನಿಲ್ದಾಣವನ್ನು ಫೆಬ್ರುವರಿ 27ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಆಗಿನಿಂದಲೂ ಇಲ್ಲಿಂದ ವಿಮಾನ ಕಾರ್ಯಾಚರಣೆ ಆರಂಭವಾಗುವುದನ್ನು ಮಲೆನಾಡಿನ ಜನರು ಕಾಯುತ್ತಿದ್ದಾರೆ. ಅಂತೂ ಐದು ತಿಂಗಳ ನಂತರ ಕನಸು ನನಸಾಗಲು ಮುಹೂರ್ತ ನಿಗದಿ ಆಗಿದೆ.

ವಿಧಾನಸಭೆ ಚುನಾವಣೆ ವೇಳೆ ಗಣ್ಯರ ಓಡಾಟಕ್ಕೆ ವಿಮಾನ ನಿಲ್ದಾಣ ನೆರವಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ರಾಹುಲ್‌ ಗಾಂಧಿ, ಪ್ರಿಯಾಂಕ ಗಾಂಧಿ ಇಲ್ಲಿ ಬಂದಿಳಿದಿದ್ದರು.

Leave A Reply

Your email address will not be published.

error: Content is protected !!