ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಸ್ಥಾನಕ್ಕೆ ಸಿಸಿ ಕ್ಯಾಮೆರಾ ಅಳವಡಿಕೆಗೆ ಕ್ರಮ ; ಎಸ್ಪಿ

0 43

ಸೊರಬ : ಪುರಾಣ ಹಾಗೂ ಇತಿಹಾಸ ಪ್ರಸಿದ್ಧ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಸ್ಥಾನಕ್ಕೆ ಶೀಘ್ರದಲ್ಲಿಯೇ ಸಿಸಿ ಕ್ಯಾಮೆರಾ ಅಳವಡಿಕೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಹೇಳಿದರು.

ಶುಕ್ರವಾರ ಇಲ್ಲಿನ ಶ್ರೀ ರೇಣುಕಾಂಬ ಸಭಾ ಭವನದಲ್ಲಿ ಏರ್ಪಡಿಸಿದ್ದ ಜನ ಸಂಪರ್ಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಚಂದ್ರಗುತ್ತಿ ಕ್ಷೇತ್ರಕ್ಕೆ ಲಕ್ಷಾಂತರ ಭಕ್ತರು ವಿಶೇಷ ದಿನಗಳಲ್ಲಿ ಆಗಮಿಸುವ ಹಿನ್ನೆಲೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವಂತೆ ದೇವಸ್ಥಾನ ಸಮಿತಿ ಹಾಗೂ ಸ್ಥಳೀಯ ಗ್ರಾಪಂ ಅವರಿಗೆ ಸೂಚನೆ ನೀಡಲಾಗಿದೆ. ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆಯಾಗದಂತೆ ಸ್ಥಳೀಯ ಪೊಲೀಸ್ ಅಧಿಕಾರಿಗಳ ಮೂಲಕ ಮಾಹಿತಿ ಪಡೆದು ಕ್ರಮ ವಹಿಸಲಾಗುವುದು. ಸೊರಬ ಠಾಣೆಯ ಸಿಬ್ಬಂದಿ ಸಿಸಿ ಕ್ಯಾಮೆರಾ ಅಳವಡಿಕೆಗೆ ಸಂಬಂಧಿಸಿದಂತೆ ಸುಮಾರು 30 ಆಯಕಟ್ಟಿನ ಸ್ಥಳಗಳನ್ನು ಗುರುತಿಸಿದ್ದಾರೆ. ರಾತ್ರಿ ವೇಳೆಯಲ್ಲಿಯೂ ಸ್ಪಷ್ಟವಾಗಿ ಚಿತ್ರೀಕರಣವಾಗುವಂತೆ ಸುಮಾರು 40 ಸಿಸಿ ಕ್ಯಾಮೆರಾ ಅಳವಡಿಸುವ ಕುರಿತು ಜಿಲ್ಲಾಧಿಕಾರಿ ಅವರಿಗೆ ಮಾಹಿತಿ ನೀಡಲಾಗುವುದು. ಮುಂದಿನ ಒಂದು ತಿಂಗಳಲ್ಲಿ ಈ ಬಗ್ಗೆ ಕ್ರಮ ವಹಿಸಲಾಗುವುದು ಎಂದರು.

ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷ ರೇಣುಕಾ ಪ್ರಸಾದ್ ಮಾತನಾಡಿ, ಚಂದ್ರಗುತ್ತಿಯ ಪೊಲೀಸ್ ಉಪಠಾಣೆಯನ್ನು ತೆರವು ಮಾಡಿ ತಿಂಗಳುಗಳು ಉರುಳಿದೆ. ಸಿಬ್ಬಂದಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಹೆಚ್ಚಿನ ಸಿಬ್ಬಂದಿ ನೇಮಕ ಮಾಡಬೇಕು. ಮಹಿಳಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಈ ನಿಟ್ಟಿನಲ್ಲಿ ಮಹಿಳಾ ಸಿಬ್ಬಂದಿಯವರ ನೇಮಕವೂ ಆಗಬೇಕು ಎಂದರು ಸಭೆಯ ಗಮನಕ್ಕೆ ತಂದರು.

ತಾಪಂ ಮಾಜಿ ಅಧ್ಯಕ್ಷ ಎಚ್. ಗಣಪತಿ ಮಾತನಾಡಿ, ಕ್ಷೇತ್ರದ ಶಾಸಕರೇ ಆದ ಮಧು ಬಂಗಾರಪ್ಪ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಕ್ಷೇತ್ರಕ್ಕೆ ಅಗತ್ಯವಿರುವ ಮೂಲ ಸೌಲಭ್ಯಗಳು ಮತ್ತು ಪೊಲೀಸ್ ಇಲಾಖೆಗೆ ಅನುಕೂಲವಾಗುವಂತಹ ಸೌಲಭ್ಯಗಳ ಕುರಿತು ಸಚಿವರಲ್ಲಿ ಕೇಳಲಾಗುವುದು. ಸೊರಬ ತಾಲೂಕಿನಲ್ಲಿ ಅಪರಾಧ ಕೃತ್ಯಗಳ ಸಂಖ್ಯೆ ಕಡಿಮೆ. ಆದರೆ, ಕೆಲ ಪ್ರಕರಣಗಳಲ್ಲಿ ತಪ್ಪಿತಸ್ಥರೇ ಮೊದಲು ದೂರು ದಾಖಲಿಸುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಸಣ್ಣ ಪುಟ್ಟ ಗಲಾಟೆಗಳಾದ ಸಂದರ್ಭದಲ್ಲಿ ತತಕ್ಷಣವೇ ಕೇಸು ದಾಖಲಿಸುವ ಬದಲು, ಪ್ರಾಥಮಿಕವಾಗಿ ಮಾಹಿತಿ ಪಡೆದು ಕ್ರಮ ಕೈಗೊಂಡರೆ ನೊಂದವರಿಗೆ ನ್ಯಾಯ ಕಲ್ಪಿಸಿದಂತಾಗುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಎಸ್ಪಿ ಮಿಥುನ್ ಕುಮಾರ್, ಕೆಲ ಬಂಧಿತ ಆರೋಪಿಗಳು ಕೆಲವೇ ದಿನಗಳಲ್ಲಿ ಜಾಮೀನಿನ ಮೇಲೆ ಹೊರ ಬರುತ್ತಾರೆ ಎನ್ನುವುದು ಜನರ ಮನಸ್ಸಿನಲ್ಲಿದೆ. ಪೊಲೀಸ್ ಇಲಾಖೆಯಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ, ದೋಷಾರೋಪಣ ಪಟ್ಟಿ ಸಲ್ಲಿಸಲಾಗುತ್ತದೆ. ಪ್ರಕರಣ ಯಾವ ಹಂತದಲ್ಲಿದೆ ಎನ್ನುವುದಕ್ಕಿಂತ ಆರೋಪಿತರಿಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗುವುದು ಮುಖ್ಯವಾಗುತ್ತದೆ. ಚಂದ್ರಗುತ್ತಿಯ ಉಪ ಪೊಲೀಸ್ ಠಾಣೆಗೆ ಹೆಚ್ಚಿನ ಸಿಬ್ಬಂದಿ ನೇಮಿಸಲಾಗುವುದು ಜೊತೆಗೆ ನಾಲ್ವರು ಗೃಹರಕ್ಷಕರನ್ನು ನೇಮಿಸುವುದಾಗಿ ತಿಳಿಸಿದರು.

ಇದಕ್ಕೂ ಮೊದಲು ಎಸ್‌ಪಿ ಜಿ.ಕೆ. ಮಿಥುನ್ ಕುಮಾರ್, ಶ್ರೀ ರೇಣುಕಾಂಬ ದೇವಸ್ಥಾನಕ್ಕೆ ತೆರಳಿ ಶ್ರೀ ದೇವಿಯ ದರ್ಶನ ಪಡೆದು, ದೇವಸ್ಥಾನ ಹಾಗೂ ದೇವಸ್ಥಾನದ ಸುತ್ತ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಶಿಕಾರಿಪುರ ಡಿವೈಎಸ್‌ಪಿ ಶಿವಾನಂದ ಮದರಕಂಡಿ, ಸಿಪಿಐ ಎಲ್. ರಾಜಶೇಖರ್, ಪಿಎಸ್‌ಐ ಎಚ್.ಎನ್. ನಾಗರಾಜ್, ಗ್ರಾಪಂ ಅಧ್ಯಕ್ಷೆ ಸರಿತಾ ಕೃಷ್ಣಪ್ಪ, ಶ್ರೀ ರೇಣುಕಾಂಬ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಸನ್ನ ಶೇಟ್, ದೇವಸ್ಥಾನದ ಕಾರ್ಯನಿರ್ವಹಣಾ ಅಧಿಕಾರಿ ವಿ.ಎಲ್. ಶಿವಪ್ರಸಾದ್, ಶ್ರೀ ರೇಣುಕಾಂಬ ದಸರಾ ಉತ್ಸವ ಸಮಿತಿ ಅಧ್ಯಕ್ಷ ಡಾ. ಆರ್. ಶ್ರೀಧರ್ ಹುಲ್ತಿಕೊಪ್ಪ, ಗ್ರಾಪಂ ಸದಸ್ಯ ಎಂ.ಪಿ. ರತ್ನಾಕರ, ತಾಪಂ ಮಾಜಿ ಸದಸ್ಯ ಎನ್.ಜಿ. ನಾಗರಾಜ್, ರಘು ಸ್ವಾಧಿ ಸೇರಿದಂತೆ ಇತರರಿದ್ದರು.

Leave A Reply

Your email address will not be published.

error: Content is protected !!