ಆತಂಕ ತಂದ 4 ಮಂಗಗಳ ಸಾವು !

0 613

ಸೊರಬ : ಬರಗಾಲದ ಛಾಯೆಯ ಹಾನಿ ಪ್ರಾಣಿಗಳ ಮೇಲೆ ಬೀಳುತ್ತಿದ್ದು, ಚಂದ್ರಗುತ್ತಿ ಸೊರಬ ರಸ್ತೆಯ ಬಸದಿ ಬಳಿ ನಾಲ್ಕು ಮಂಗಗಳು ಅಸುನೀಗಿವೆ.

ಒಂದೆಡೆ ಪಕ್ಕದ ತಾಲ್ಲೂಕು ಶಿರಸಿಯಲ್ಲಿ ಮಂಗನ ಕಾಯಿಲೆಗೆ ತುತ್ತಾಗಿ ವ್ಯಕ್ತಿಯೋರ್ವ ಮರಣ ಹೊಂದಿರುವುದು ವರದಿಯಾಗಿದ್ದು, ಬೆನ್ನಲ್ಲೇ ಇಲ್ಲಿ ಮಂಗಗಳು ಸತ್ತಿರುವುದು ಕೂಡ ಜನತೆಯ ಆತಂಕವನ್ನು ಹೆಚ್ಚಿಸಿದೆ.

ಚಂದ್ರಗುತ್ತಿ ಭಾಗದಲ್ಲಿ ಈಚೆಗೆ ಅವ್ಯಾಹತ ಅರಣ್ಯ ನಾಶದ ಜೊತೆಗೆ ಬೆಂಕಿ ಹಚ್ಚಿ ಪಶುಪಕ್ಷಿಗಳಿಗೆ ಏನೂ ಆಹಾರ ಸಿಗದಂತಾಗಿದೆ. ಅವು ನೀರು ಆಹಾರ ಅರಿಸಿ ನಾಡಿಗೆ, ಹೊಲಗದ್ದೆಗಳ ಸಮೀಪಕ್ಕೆ ಬಂದು ಜನರ ಕ್ರೂರತ್ವಕ್ಕೆ ಬಲಿಯಾಗುತ್ತಿವೆ. ನದಿ, ಕೆರೆಗಳಿಗೆ ಪಂಪ್ ಹಚ್ಚುವ ಮೂಲಕ ನೀರು ಸಂಪೂರ್ಣ ಬರಿದಾಗಿದ್ದು ಮನುಷ್ಯನ ಉಪಯೋಗಕ್ಕೂ ನೀರು ಲಭಿಸದಂತಾಗಿದೆ.

ಈಚೆಗೆ ಗಿಳಿ, ಮಂಗ ಇತ್ಯಾದಿ ಕಾಟದಿಂದ ಬೆಳೆಗಳನ್ನು ರಕ್ಷಿಸಿಕೊಳ್ಳಲು ವಾಸನೆ ರಹಿತ ಔಷಧಿಗಳನ್ನು ಇರಿಸುತ್ತಿದ್ದು ಅಂತಹ ಔಷಧಿ ತಿಂದು ಸಹಾ ಮಂಗಗಳು ಸತ್ತಿರಬಹುದು ಎಂದು ಸಾರ್ವಜನಿಕವಾಗಿ ಕೇಳಿ ಬರುತ್ತಿದೆ.

ಹಸಿವಿನಿಂದ ಸತ್ತಿವೆಯೋ ?, ನೀರು ಸಿಗದೆ ಸತ್ತಿವೆಯೋ ?, ಅಥವಾ ಕಾಯಿಲೆಯಿಂದ ಸತ್ತಿವೆಯೋ ?, ಮುಂತಾದ ಚರ್ಚೆಯ ನಡುವೆ ಸಕಾಲಕ್ಕೆ ಗ್ರಾಮ ಪಂಚಾಯತಿ ಗಮನಕ್ಕೆ ಬಂದಿದ್ದು ಕೂಡಲೆ ಕ್ರಮಕ್ಕೆ ಮುಂದಾಗಿದೆ.

ಸ್ಥಳಕ್ಕೆ ಸಂಬಂಧಪಟ್ಟ ಇಲಾಖೆಯವರು ಆಗಮಿಸಿ ಮಹಜರು ನಡೆಸಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

ಜನತೆಯ ದೂರಿನನ್ವಯ ಸ್ಥಳಕ್ಕೆ ಪಶು ವೈದ್ಯರನ್ನು ಅರಣ್ಯ ಸಿಬ್ಬಂದಿಯನ್ನು ಕರೆದುಕೊಂಡು ಹೋಗಿದ್ದು ಮಹಜರು ನಡೆಸಿ ಪರೀಕ್ಷೆಗೆ ಕಳಿಸಲಾಗಿದೆ. ಎಲ್ಲೆ ಮಂಗ ಸತ್ತಿದ್ದು ಕಾಣಿಸಿದರೆ ಕೂಡಲೇ ನಮ್ಮ ಗಮನಕ್ಕೆ ತರಬೇಕು.
– ನಾರಾಯಣಮೂರ್ತಿ, ಪಿಡಿಒ ಚಂದ್ರಗುತ್ತಿ ಗ್ರಾ.ಪಂ.

ಗ್ರಾಪಂ ಅಭಿವೃದ್ಧಿ ಅಧಿಕಾರಿ ನಾರಾಯಣ್ ಮೂರ್ತಿ, ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎಂಪಿ ರತ್ನಾಕರ್, ಪಶು ಸಿಬ್ಬಂದಿ ಕಣ್ಣಪ್ಪ, ಪ್ರಾಥಮಿಕ ಆರೋಗ್ಯ ಕೇಂದ್ರದ ವೀಣಾ, ಹೇಮಾ, ಮುದಾಸಿರ್, ಆಶಾ ಕಾರ್ಯಕರ್ತೆರಾದ ಅಶ್ವಿನಿ, ಶರಾವತಿ, ಅರಣ್ಯ ಸಿಬ್ಬಂದಿ ಪ್ರಶಾಂತ್, ಗ್ರಾಮಸ್ಥರಾದ ಕೃಷ್ಣಪ್ಪ, ಪ್ರಶಾಂತ್ ನಾಯ್ಕ್ ಸೇರಿದಂತೆ ಗ್ರಾಮಸ್ಥರು ಮೃತಪಟ್ಟ ಮಂಗಗಳ ಅಂತ್ಯಕ್ರಿಯೆ ನೆರವೇರಿಸಿದರು.

Leave A Reply

Your email address will not be published.

error: Content is protected !!