ಶಿವಮೊಗ್ಗ: ‘ಶಿವಮೊಗ್ಗದ ಮುಸಲ್ಮಾನರು ಗಲಾಟೆ ಮಾಡೋರಲ್ಲ ನನಗೆ ನೂರಕ್ಕೆ ನೂರು ಗೊತ್ತು. ಹಿಂದೂಗಳಲ್ಲಿಯು ಕೆಲ ತಲೆಹರಟೆಗಳಿದ್ದಾರೆ. ನಾನು ಇಲ್ಲ ಅನ್ನಲ್ಲ. ಮುಸ್ಲಿಂರಲ್ಲಿಯೂ ತಲೆಹರಟೆಗಳಿದ್ದಾರೆ. ಅವರೊಂದು ನಾಲ್ಕು ಜನ ಇವರೊಂದು ನಾಲ್ಕು ಜನ ಸೇರ್ಕೊಂಡು ತಲೆಹರಟೆ ಕೆಲಸ ಮಾಡಿದಾಗ ಗಲಾಟೆ ಶುರುವಾಗುತ್ತದೆ’ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿರುವ ವಿಡಿಯೋವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
ಶಿವಮೊಗ್ಗ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಮೊಹಮ್ಮದ್ ಶಫಿ ಎಂಬವರ ಫೇಸ್ಬುಕ್ನಲ್ಲಿ, ಈ ವಿಡಿಯೋ ಮೊದಲು ಪ್ರಕಟವಾಗಿದ್ದು, ಆನಂತರ ಸೋಶಿಯಲ್ ಮೀಡಿಯಾಗಳಲ್ಲಿ ಪರ-ವಿರೋಧ ಚರ್ಚೆಗಳೊಂದಿಗೆ ಹಂಚಿಕೆಯಾಗುತ್ತಿದೆ.
ಏನಿದೆ ವಿಡಿಯೋದಲ್ಲಿ?
ಮೂರು ದಿನಗಳ ಹಿಂದಿನ ವಿಡಿಯೋ ಇದಾಗಿದ್ದು, ಅಲ್ಪಸಂಖ್ಯಾತ ಮುಖಂಡರು ಕೆ.ಎಸ್.ಈಶ್ವರಪ್ಪನವರೊಂದಿಗೆ ಸೇರಿದ್ದ ಸಭೆಯಲ್ಲಿ ಮಾಜಿ ಸಚಿವರು ಮಾತನಾಡಿದ್ದಾರೆ. ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಶಿವಮೊಗ್ಗ ನಗರ ಕ್ಷೇತ್ರದ ಶಾಸಕರ ಮಾತು ಇಲ್ಲಿದೆ.
‘ಅವರೊಂದು ನಾಲ್ಕು ಜನ ಇವರೊಂದು ನಾಲ್ಕು ಜನ ಸೇರ್ಕೊಂಡು ತಲೆಹರಟೆ ಕೆಲಸ ಮಾಡಿದಾಗ ಗಲಾಟೆ ಶುರುವಾಗುತ್ತದೆ. ಇಲ್ಲಾಂದ್ರೆ ತಣ್ಣಗೆ ಇರುತ್ತದೆ. ನಾನು ತಪ್ಪು ಮಾಡಿದ್ರೆ ಇಲ್ಲಿಯೇ ಸಭೆಯಲ್ಲಿ ಹೇಳಿ, ಸಮಾಜದಲ್ಲಿ ಅಣ್ಣ ತಮ್ಮಂದಿರಂತೆ ಇರುತ್ತೇವೆ. ನಾನ್ಯಾವ ವಿಚಾರಕ್ಕೆ ಗಲಾಟೆ ಮಾಡುತ್ತೇನೆ ಎಂದು ಉದಾಹರಣೆಗೆ ಕೊಡುತ್ತೇನೆ. ಶಿವಪ್ಪನಾಯಕ ಸರ್ಕಲ್ನಲ್ಲಿ ಎಸ್ಡಿಡಿಪಿಐನವರು ಒಂದು ಸಮ್ಮೇಳನ ಮಾಡಿದ್ದರು. ಆ ಸಮ್ಮೇಳನದಲ್ಲಿ ಯಾವನೋ ಒಬ್ಬ ಭಾರತ ವಿರೋಧಿ ಘೋಷಣೆ ಕೂಗುತ್ತಾನೆ. ಅದನ್ನು ಕೇಳಿ ಸುಮ್ಮನಿರುತ್ತಾರಾ ಯಾರಾದ್ರೂ?’ ಎಂದು ಮರುಪ್ರಶ್ನೆ ಮಾಡಿದರು.
‘ನಾನು ಬಾಯಿ ಬಿಟ್ಟು ಹೇಳುತ್ತೇನೆ ನೀವು ಸುಮ್ಮನಿರ್ತೀರಿ. ಆದರೆ ನಾನು ಸುಮ್ಮನಿರಲಿಲ್ಲ. ಅದೇ ದಿನ ವಾಪಸ್ ಹೋಗುವಾಗ ಗಾಜನೂರು ಹತ್ತಿರ ತಲವಾರ್ ಬೀಸಿದರು. ಆದರೆ ಅವರು ಶಿವಮೊಗ್ಗದವರಲ್ಲ. ಇದಕ್ಕೆಲ್ಲಾ ಶಿವಮೊಗ್ಗ ಮುಸಲ್ಮಾನರು ಕಾರಣನಾ?’
‘ಶಿವಮೊಗ್ಗದ ಹರ್ಷನನ್ನು ರಾತ್ರಿ ಬಂದು ಯಾರೋ ಹೊಡೆದೋದ್ರು. ಸುಮ್ಮಸಮ್ಮನೆ ನಮ್ಮ ನಿಮ್ಮ ಮಕ್ಕಳನ್ನ ಹೊಡೆದ್ರೆ ಸುಮ್ಮನಿರೋದಕ್ಕಾಗುತ್ತಾ? ಖಂಡಿಸಬೇಕಾ ಬೇಡವಾ? ನಾನಂತು ಖಂಡಿಸ್ತೇನೆ. ಇಂಥ ಕೆಲಸವನ್ನು ಬಿಜೆಪಿಯಲ್ಲಿ ಬಹಳ ಜನ ಮಾಡಲ್ಲ. ಆ ಪ್ರಶ್ನೆ ಬೇರೆ. ಆದರೆ ನನಗೆ ತಡೆದುಕೊಳ್ಳಲಾಗಲ್ಲ. ಕೆಟ್ಟದನ್ನು ಎಂದೂ ಕೂಡ ನಾನು ಬಿಡೋದಿಲ್ಲ’ ಎಂದು ಖಡಕ್ ಆಗಿ ಮಾತನಾಡಿದ್ದಾರೆ.
‘ಎಲ್ಲಾ ಮುಸಲ್ಮಾನರ ಬಗ್ಗೆ ನಾವು ಹೇಳೋದಿಲ್ಲ, ಗೂಂಡಾಗಿರಿ ಮಾಡಿ ತೊಂದರೆ ಕೊಡುವವರ ಬಗ್ಗೆ ನಾನು ಖಂಡಿಸ್ತೀನಿ’ ಎಂದಿದ್ದಾರೆ.
ಸದ್ಯ ಈ ವಿಡಿಯೋದ ಸ್ಕ್ರೀನ್ ರೆಕಾರ್ಡ್ಗಳು ವಾಟ್ಸ್ಯಾಪ್ ಗ್ರೂಪ್ಗಳಲ್ಲಿ ಹರಿದಾಡುತ್ತಿದ್ದು, ಮಾಜಿ ಸಚಿವರ ಹೇಳಿಕೆಯನ್ನು ತಮ್ಮದೇ ರೀತಿಯಲ್ಲಿ ಅರ್ಥೈಸಲಾಗುತ್ತಿದೆ. ಅಲ್ಲದೆ ಈ ಸಂಬಂಧ ಚರ್ಚೆಗಳು ಸಹ ನಡೆಯುತ್ತಿವೆ.