ಅಬ್ಬಲಗೆರೆ ಗ್ರಾ.ಪಂ. ಗ್ರೇಡ್-2 ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ

0 285

ಶಿವಮೊಗ್ಗ: ಜಮೀನಿನ ಖಾತೆ ಮಾಡಿಕೊಡಲು 15 ಸಾವಿರ ರೂ. ಲಂಚ ಪಡೆಯುತ್ತಿದ್ದ ಅಬ್ಬಲಗೆರೆ ಗ್ರಾಮ ಪಂಚಾಯಿತಿಯ ಗ್ರೇಡ್-2 ಕಾರ್ಯದರ್ಶಿ ಟಿ.ಯೋಗೇಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಹಣ ವಶಕ್ಕೆ ಪಡೆದು ಆರೋಪಿ ಯೋಗೇಶ್‌ನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ನವುಲೆಯ ಯಶವಂತ ದೂರು ನೀಡಿದ್ದರು. ಚನ್ನಮುಂಭಾಪುರದ ಸರ್ವೆ ನಂಬರ್ 9/8ರಲ್ಲಿ 8.10 ಗುಂಟೆ ಜಾಗಬಿದ್ದು ತಮ್ಮ ಹೆಸರಿಗೆ ಖಾತೆ ಮಾಡಿಕೊಡಲು ಯಶವಂತ ಅವರು 6 ತಿಂಗಳ ಹಿಂದೆ ಆಧಾರ ಕಾರ್ಡ್, ಸ್ಕೆಚ್, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಏಕ ನಿವೇಶನ ವಿನ್ಯಾಸ ನಕ್ಷೆ ದೃಢೀಕರಣ, ಡಿಸಿ ಅವರ ಅಲಿನೇಷನ್ ಪತ್ರ ಲಗತ್ತಿಸಿ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಖಾತೆ ಮಾಡಿಕೊಡಲು ಯೋಗೇಶ್ 15 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಲಂಚ ಕೊಡಲು ಇಷ್ಟವಿಲ್ಲದ ಯಶವಂತ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಬುಧವಾರ ಯಶವಂತ್ ಅವರಿಂದ ಹಣ ಪಡೆಯುತ್ತಿದ್ದಾಗ ಯೋಗೇಶ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಲೋಕಾಯುಕ್ತ ಎಸ್ಪಿ ಮಂಜುನಾಥ್, ಡಿವೈಎಸ್ಪಿ ಉಮೇಶ್ ಈಶ್ವರನಾಯ್ಕ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಶಿವಮೊಗ್ಗ ಲೋಕಾಯುಕ್ತ ಇನ್ಸ್‌ಪೆಕ್ಟರ್ ವೀರಬಸಪ್ಪ ಎಲ್. ಕುಸಲಾಪುರ, ಪ್ರಕಾಶ್, ಎಚ್.ಎಸ್.ಸುರೇಶ್, ಸಿಬ್ಬಂದಿ ಯೋಗೇಶ್, ಎಚ್.ಜಿ.ಸುರೇಂದ್ರ, ಪ್ರಶಾಂತ್‌ಕುಮಾರ್, ರಘುನಾಯ್ಕ, ದೇವರಾಜ್, ಎನ್.ಪುಟ್ಟಮ್ಮ, ಪ್ರದೀಪ್, ವಿ.ಗೋಪಿ, ಜಯಂತ್ ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!