ಬಿಜೆಪಿಯವರು ಪ್ರಚಾರಕ್ಕಾಗಿಯೇ ದೇವರ ಹೆಸರಿನಲ್ಲಿ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ ; ಆಯನೂರು ಮಂಜುನಾಥ್

0 331

ರಿಪ್ಪನ್‌ಪೇಟೆ: ಬಡತನ ಮತ್ತು ಭಾವನೆಗಳ ಮಧ್ಯನಡೆಯುತ್ತಿರುವ ಚುನಾವಣೆ ಇದು. ಬಿಜೆಪಿ ಬಡವರ ಬದುಕಿನ ಬಗ್ಗೆ ಮಾತನಾಡುತ್ತಿಲ್ಲ ಕೇವಲ ರಾಮಮಂದಿರ ಬಗ್ಗೆ ಹೆಚ್ಚು ಚರ್ಚಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆ ಉಚಿತವಾಗಿ ನೀಡಿದರೆ ಸರ್ಕಾರದ ಖಜಾನೆ ಖಾಲಿ ಎಂದು ಬಿಜೆಪಿಗರು ಟೀಕಿಸುತ್ತಿದ್ದಾರೆ. ಆದರೆ ಬಿಜೆಪಿ ಆಡಳಿತದಲ್ಲಿ ಶೇ. 40 ಕಮಿಷನ್ ಲೂಟಿ ಹೊಡೆದಾಗ ಸರ್ಕಾರದ ಖಜಾನೆ ಖಾಲಿ ಆಗಿಲ್ಲವಾ? ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಆಯನೂರು ಮಂಜುನಾಥ್ ಪ್ರಶ್ನಿಸಿದರು.

ಬೆಳ್ಳೂರು ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಲೋಕಸಭಾ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಆಡಳಿತಾವಧಿಯಲ್ಲಿ ನೂರಾರು ದೇವಾಲಯಗಳನ್ನು ನಿರ್ಮಿಸಿದ್ದಾರೆ. ಆದರೆ ಎಲ್ಲಿಯೂ ಪ್ರಚಾರ ಪಡೆಯಲಿಲ್ಲ. ಬಿಜೆಪಿಯವರು ಪ್ರಚಾರಕ್ಕಾಗಿಯೇ ದೇವರ ಹೆಸರಿನಲ್ಲಿ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಆದ್ದರಿಂದ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಗೀತಾ ಶಿವರಾಜ್‌ಕುಮಾರ್ ಅವರಿಗೆ ಬೆಂಬಲಿಸಬೇಕು ಎಂದರು.

ಸಾಗರ ಕ್ಷೇತ್ರದ ಶಾಸಕ, ರಾಜ್ಯ ಅರಣ್ಯ ಕೈಗಾರಿಕಾಭಿವೃದ್ದಿ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ ಸೋಲಿಗೆ ನ್ಯಾಯ ಕಂಡುಕೊಳ್ಳಬೇಕಿದೆ. ಅದೇ ಕಾರಣಕ್ಕೆ ಗೀತಾ ಶಿವರಾಜ್‌ಕುಮಾರ್ ಅವರಿಗೆ ಮತ ನೀಡಿ ಸೋಲಿಸುಬೇಕು. ಸಂಸದ‌ ಬಿ.ವೈ.ರಾಘವೇಂದ್ರ ಹಾಗೂ ಮಾಜಿ ಶಾಸಕ ಹರತಳು ಹಾಲಪ್ಪ ಅವರು ಮುಳುಗಡೆ ರೈತರ ಕತ್ತು ಹಿಸುಕುತ್ತಿದ್ದಾರೆ. ಜಿಲ್ಲೆಯಲ್ಲಿ 15 ವರ್ಷ ಆಡಳಿತ ನಡೆಸಿದ್ದಾರೆ. ಆದರೆ ಕೇಂದ್ರ ಸರ್ಕಾರದ ಹಂತದಲ್ಲಿ ನೊಂದ ರೈತರಿಗೆ ನ್ಯಾಯ ಒದಗಿಸುವಲ್ಲಿ ವಿಫಲರಾಗಿದ್ದಾರೆಂದು ಹೇಳುವುದರೊಂದಿಗೆ ಮುಳಗಡೆ ನಾಯಕ ಹಾಲಪ್ಪ ಬಂದರೆ ಮರಕ್ಕೆ ಕಟ್ಟಿಹಾಕಿ ಎಂದು ಕಾರ್ಯಕರ್ತರ ಸಭೆಯಲ್ಲಿ ಬಹಿರಂಗವಾಗಿ ಹೇಳಿ ಚಪ್ಪಾಳೆಯನ್ನು ಗಿಟ್ಟಿಸಿಕೊಂಡರು. ಈ ಹಿಂದೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ರೈತರಿಗೆ ಹಕ್ಕುಪತ್ರ ನೀಡಿದ್ದರು. ಆದರೆ ಪ್ರಸ್ತುತ ಸಂಸದ ರಾಘವೇಂದ್ರ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ತಮ್ಮ ಆಸ್ತಿ ಇರುವ ಕಡೆ ಮಾತ್ರ ಅಭಿವೃದ್ಧಿ ಪಡಿಸಿಕೊಂಡಿದ್ದಾರೆ. ಗ್ರಾಮಾಂತರ ಪ್ರದೇಶದಲ್ಲಿ ಮೊಬೈಲ್ ನೆಟ್‌ವರ್ಕ್ ಹುಡುಕಬೇಕು ಅಂದರೆ ಬೆಟ್ಟಗುಡ್ಡ ಏರಬೇಕು ಇದು ಬಿಜೆಪಿಯ ಸಾಧನೆ ಎಂದರು.

ಲೋಕಸಭಾ ಚುನಾವಣೆ ಶಿವಮೊಗ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಮಾತನಾಡಿ, ಸ್ವಯಂ ಉದ್ಯೋಗ ಸೃಷ್ಠಿಗೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಹಕಾರಿ ಆಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮತದಾರರಿಗೆ ನೀಡಿದ್ದ ಐದು ಗ್ಯಾರಂಟಿ ಭರವಸೆ ಈಡೇರಿಸಿದ್ದಾರೆ. ಅದೇ ರೀತಿಯಲ್ಲಿ ನಾನು ಕೂಡಾ ಜಿಲ್ಲೆಯ ಎಲ್ಲ ವರ್ಗದವರ ಪರವಾಗಿ ಧ್ವನಿಯಾಗಿ ಲೋಕಸಭೆಯಲ್ಲಿ ಜಿಲ್ಲೆಯ ಜ್ವಲಂತ ಸಮಸ್ಯೆಗಳಾದ ಶರಾವತಿ ಮುಳುಗಡೆ ರೈತರ ಸಂಕಷ್ಟವನ್ನು ಪರಿಹರಿಸುವುದಾಗಿ ಹೇಳಿದರು.

ಲೋಕಸಭಾ ಚುನಾವಣೆಯ ಜಿಲ್ಲಾ ಉಸ್ತುವಾರಿ ಅನಿಲ್ ಕುಮಾರ್ ತಡಕಲ್, ಜಿಲ್ಲಾ ಪಂಚಾಯ್ತಿ ಮಾಜಿ ಆಧ್ಯಕ್ಷ ಕಲಗೋಡು ರತ್ನಾಕರ್, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ಶ್ವೇತಾ ಆರ್.ಬಂಡಿ, ಅನಿತಾಕುಮಾರಿ, ಬಂಡಿ ರಾಮಚಂದ್ರ, ಎಪಿಎಂಸಿ ಅಧ್ಯಕ್ಷ ಹೆಚ್.ವಿ.ಈಶ್ವರಪ್ಪಗೌಡ, ಸಾಕಮ್ಮ, ಧನಲಕ್ಷ್ಮಿ, ವೈ.ಹೆಚ್.ನಾಗರಾಜ್, ಸುಮಾ ಸುಬ್ರಹ್ಮಣ್ಯ, ಬಿ.ಜಿ.ಚಂದ್ರಮೌಳಿ, ಪ್ರವೀಣ್, ಲಕ್ಷ್ಮಿಕಾಂತ್, ಮಹೇಂದ್ರ ಬುಕ್ಕಿವರೆ, ಸೂಡೂರು ಶಿವಣ್ಣ ಇನ್ನಿತರ ಮುಖಂಡರು ಹಾಜರಿದ್ದರು.

ಹೊಸನಗರ ತಾಲ್ಲೂಕಿನ ಕೆರೆಹಳ್ಳಿ ಹೋಬಳಿ ವ್ಯಾಪ್ತಿಯ ಬೆಳ್ಳೂರು ಹಾರೋಹಿತ್ತಲು, ಕೆಂಚನಾಲ, ಅರಸಾಳು, ಕೋಡೂರು, ಮಾರುತಿಪುರ, ಬಾಳೂರು, ಮುಂಬಾರು, ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ನಡೆಸಲಾಯಿತು.

Leave A Reply

Your email address will not be published.

error: Content is protected !!