ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ ಪ್ರಕರಣಕ್ಕೆ ಟ್ವಿಸ್ಟ್ ; ದೂರುದಾರರ ವಿರುದ್ದವೇ ದಾಖಲಾಯ್ತು ಕೇಸ್ !

0 609

ರಿಪ್ಪನ್‌ಪೇಟೆ : ಇತ್ತೀಚೆಗೆ ರಾಜ್ಯಾದ್ಯಂತ ಸುದ್ದಿಯಾಗಿದ್ದ ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಲಕ್ಷಾಂತರ ರೂ. ವಂಚನೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರಕಿದ್ದು ದೂರುದಾರರ ಮೇಲೆಯೇ ರಿಪ್ಪನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಘಟನೆ ನಡೆದಿದೆ.

ಕಳೆದ ಕೆಲವು ದಿನಗಳ ಹಿಂದೆ ರಿಪ್ಪನ್‌ಪೇಟೆಯ ಶ್ವೇತಾ ಎನ್ನುವವರ ಮೇಲೆ ಪಟ್ಟಣದ ಠಾಣೆಯಲ್ಲಿ ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದಾರೆಂಬ ಆರೋಪದ ಮೇಲೆ ದೂರುದಾರರಾದ ತೀರ್ಥಹಳ್ಳಿ ಮೂಲದ ಆದರ್ಶ್ ಹಾಗೂ ಶಿವಮೊಗ್ಗ ಮೂಲದ ನವೀನ್ ಪ್ರಕರಣ ದಾಖಲಿಸಿದ್ದರು. ಈ ಸಂದರ್ಭದಲ್ಲಿ ಹೊಸನಗರದ ಸಾಮಾಜಿಕ ಹೋರಾಟಗಾರ್ತಿ ಸೀಮಾ ಸೆರಾವೋ ವಂಚನೆಗೊಳಗಾದ ದೂರುದಾರರಿಗೆ ಬೆಂಬಲಿಸಿದ್ದರು.

ವೃತ್ತಿ ವೈಷಮ್ಯದಿಂದ ಏಳಿಗೆ ಸಹಿಸದೇ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತಿದ್ದಾರೆ ಎಂದು ಶ್ವೇತಾ ರವರು ಹೊಸನಗರ ನ್ಯಾಯಲಯದಲ್ಲಿ ಖಾಸಗಿ ದೂರು ದಾಖಲಿಸಿದ ಹಿನ್ನಲೆಯಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹೊಸನಗರದ ಸೀಮಾ ಸೆರಾವೋ ಆದರ್ಶ್ ಶೆಟ್ಟಿ , ನವೀನ್ ರವರ ಮೇಲೆ 409, 384, 420, 504, 506, 509 ಐಪಿಸಿ ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನಲ್ಲೇನಿದೆ ?

ನಾನು ರಿಪ್ಪನ್‌ಪೇಟೆಯಲ್ಲಿ ಟೈಲರಿಂಗ್ ಮತ್ತು ಬ್ಯೂಟಿಶಿಯನ್ ಕೆಲಸ ಮಾಡಿಕೊಂಡಿದ್ದು, ಸೀಮಾ ಸೆರಾವೋ ಬ್ಯೂಟಿಶಿಯನ್ ವೃತ್ತಿಯ ವಿಚಾರವಾಗಿ ಮೊದಲಿನಿಂದಲೂ ವೈಮನಸ್ಸು ಇರುತ್ತದೆ. ನನ್ನ ಕಾರ್ಯಚಟುವಟಿಕೆ ಗುರುತಿಸಿ ಏಷಿಯನ್ ಕಲ್ಚರಲ್ ಅಕಾಡೆಮಿ ಕೊಯಮತ್ತೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ಪ್ರಧಾನ ಮಾಡಿದ್ದು, ನನ್ನ ಏಳಿಗೆಯನ್ನು ಸಹಿಸದ ಆರೋಪಿಗಳು ಹೆಸರಿಗೆ ಕಳಂಕ ತರಲು ಪ್ರಯತ್ನಿಸುತ್ತಿದ್ದು 2023ರ ಆ.30 ರಂದು 1ನೇ ಆರೋಪಿಯು ತಮ್ಮ ಮೊಬೈಲ್ ನಿಂದ ನನ್ನಗೆ ಮತ್ತು ಗಂಡನಿಗೂ ಕರೆ ಮಾಡಿ, ಹಣದ ಬೇಡಿಕೆ ಇಟ್ಟು ಕೊಡದೇ ಇದ್ದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿರುತ್ತಾರೆ. ಅಲ್ಲದೇ ಇತರೆ ಮೊಬೈಲ್ ನಂಬರ್ ಗಳಿಂದಲೂ ಕರೆ ಮಾಡಿ ನನ್ನ ಮತ್ತು ಗಂಡನ ಮಾನ ಕಳೆದು ಬೀದಿಗೆ ಬರುವಂತೆ ಮಾಡುತ್ತೇವೆ ಎಂದು ಅವಾಚ್ಯವಾಗಿ ಬೈದು ಕೊಲೆ ಬೆದರಿಕೆ ಹಾಕಿದ್ದಾರೆ.

ರೇಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಲಕ್ಷಾಂತರ ರೂಪಾಯಿ ವಂಚಿಸಿದ ಪ್ರಮುಖ ಆರೋಪಿಯನ್ನು ಬಂಧಿಸಿದ್ದು 2ನೇ ಆರೋಪಿ ಶ್ವೇತಾ ಪತ್ತೆಯಾಗಿಲ್ಲ. ವಂಚಕಿಗೂ ಗೌರವ ಡಾಕ್ಟರೇಟ್ ಪದವಿ ಎಂಬಿತ್ಯಾದಿ ಪೋಸ್ಟರ್ ಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಅಶ್ಲೀಲ ಪದಗಳಿಂದ ಮೆಸೇಜ್, ಇಮೇಲ್ ಮಾಡಿ ಬೆದರಿಕೆ ಹಾಕಿ ಇತರೆ ವ್ಯಕ್ತಿಗಳ ಫೋಟೋ ತಿದ್ದುಪಡಿ ಮಾಡಿ ಅಶ್ಲೀಲ ಫೋಟೋ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟು ನನ್ನ ಮತ್ತು ಗಂಡನ ಮಾನಹಾನಿ ಮಾಡಿರುತ್ತಾರೆ. ನನ್ನ ಪರ ಪುರುಷರೊಂದಿಗೆ ವ್ಯವಹರಿಸಿದ ಬಗ್ಗೆ, ಫೋಟೋಗಳು ಇವೆಯೆಂದು ಹೇಳಿ ಹತ್ತು ಲಕ್ಷ ಹಣ ಬೇಡಿಕೆ ಇಟ್ಟು ಕೊಡದೇ ಇದ್ದಲ್ಲಿ ಫೋಟೋ ಬಹಿರಂಗಪಡಿಸಿ ಮಾನ ಹರಾಜು ಮಾಡುವುದಾಗಿ ಬ್ಲಾಕ್ ಮೇಲ್ ಮಾಡುತ್ತಿದುದಾಗಿ ಆರೋಪಿಗಳು ನನ್ನ ಘನತೆ ಗೌರವಕ್ಕೆ ಧಕ್ಕೆ ತರುತ್ತಿದ್ದು ಈ ಮೇಲ್ಕಂಡ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಶ್ವೇತಾ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!