ಸೆ.9ರಂದು ಐಐಎಫ್ ರಾಷ್ಟ್ರೀಯ ಅಧ್ಯಕ್ಷರಾಗಿ ಉದ್ಯಮಿ
ಡಿ.ಎಸ್ ಚಂದ್ರಶೇಖರ್ ಅಧಿಕಾರ ಸ್ವೀಕಾರ

0 43

ಶಿವಮೊಗ್ಗ: ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಫೌಂಡ್ರಿಮೆನ್, (ಐಐಎಫ್) ರಾಷ್ಟ್ರೀಯ ಅಧ್ಯಕ್ಷರಾಗಿ ಶಿವಮೊಗ್ಗದ ಶಾಂತಲಾ ಸ್ಪೆರೋಕಾಸ್ಟ್ ಸಂಸ್ಥೆಯ ಉಪಾಧ್ಯಕ್ಷ ಹಾಗೂ ಉದ್ಯಮಿ ಡಿ.ಎಸ್ ಚಂದ್ರಶೇಖರ್ ಅವರು ಆಯ್ಕೆಯಾಗಿದ್ದು, ಸೆ.9ರಂದು ಶಿವಮೊಗ್ಗದ ಕಿಮ್ಮನೆ ಗಾಲ್ಫ್ ರೆಸಾರ್ಟ್ ನಲ್ಲಿ ನಡೆಯಲಿರುವ ಸರ್ವ ಸದಸ್ಯರ ಸಭೆಯಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಶಿವಮೊಗ್ಗ ವಿಭಾಗದ ಅಧ್ಯಕ್ಷ ಟಿ.ಎನ್. ಪರಮಶೇಖರ್ ಹೇಳಿದರು.

ಅವರು ಇಂದು ಹೋಟೆಲ್ ಮಥುರಾ ಪ್ಯಾರಾಡೈಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಾರತದ ಫೌಂಡ್ರಿಮೆನ್ ಶಿಕ್ಷಣ, ಸಂಶೋಧನೆ, ತರಬೇತಿ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲು 1950ರಲ್ಲಿ ಸ್ಥಾಪಿತವಾದ ಸಂಸ್ಥೆಯಾಗಿದೆ. ಈ ಸಂಸ್ಥೆ ತನ್ನ 26 ಅಂಗ ಸಂಸ್ಥೆಗಳ ಮೂಲಕ ಇಡೀ ದೇಶಕ್ಕೆ ಸೇವೆಯನ್ನೊದಗಿಸುತ್ತಿದೆ ಎಂದರು.

ಶಿವಮೊಗ್ಗ ಶಾಖೆಯ ಮಾಜಿ ಅಧ್ಯಕ್ಷ ಶ್ರೀನಾಥ್ ಗಿರಿಮಾಜಿ ಮಾತನಾಡಿ, ಈ ಸಂಸ್ಥೆಯ ಶಿವಮೊಗ್ಗ ವಿಭಾಗವು ಕಳೆದ ಹತ್ತು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ಕಳೆದ ವರ್ಷ ದಶಮಾನೋತ್ಸವವನ್ನು ಆಚರಿಸಿಕೊಂಡಿದೆ. ದಕ್ಷಿಣ ಭಾರತದ ಮೂರು ಪ್ರಾಂತ್ಯಗಳೂ ಸಹ ಕಲ್ಕತ್ತಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಫೌಂಡ್ರಿಮೆನ್‌ನ ಅಂಗ ಸಂಸ್ಥೆಗಳೇ ಆಗಿವೆ ಎಂದರು.


ಶಾಂತಲಾ ಸ್ಪೆರೋಕಾಸ್ಟ್ ಪ್ರೈವೇಟ್ ಲಿಮಿಟೆಡ್‌ನ ಉಪಾಧ್ಯಕ್ಷ ಡಿ.ಎಸ್.ಚಂದ್ರಶೇಖರ್ ಅವರು 2023-24 ರಲ್ಲಿ ಇಂಡಿಯನ್ ಇನ್ಸಿಟ್ಯೂಟ್ ಆಫ್ ಫೌಂಡ್ರಿಮೆನ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇದೀಗ ಇಂಡಿಯನ್ ಇನ್ಸಿಟ್ಯೂಟ್ ಆಫ್ ಫೌಂಡ್ರಿಮೆನ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಸೆ.9ರಂದು ಬೆಳಿಗ್ಗೆ 10-30ರಿಂದ ಸಭೆಗಳು ನಡೆಯಲಿದ್ದು, ಸಂಜೆ 6-30ಕ್ಕೆ ಶಿವಮೊಗ್ಗದಲ್ಲಿ ನಡೆಯುವ ಸರ್ವ ಸದಸ್ಯರ ಸಭೆಯಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಕಲ್ಕತ್ತಾದ ನವನೀತ್ ಅಗರ್‌ವಾಲ್ ಅವರು ಉಪಾಧ್ಯಕ್ಷರಾಗಿ, ಕೊಯಮತ್ತೂರಿನ ಮುತ್ತುಕುಮಾರ್ ಅವರು ಗೌರವ ಕಾರ್ಯದರ್ಶಿಯಾಗಿ ಮತ್ತು ನಾಗಪುರದ ಸುಶೀಲ್ ಶರ್ಮಾ ಅವರು ಖಜಾಂಚಿಯಾಗಿ ಸಹ ರಾಷ್ಟ್ರೀಯ ಪದಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದರು.

ನೂತನ ಅಧ್ಯಕ್ಷ ಡಿ.ಎಸ್. ಚಂದ್ರಶೇಖರ್ ಮಾತನಾಡಿ, ನನ್ನ ಅವಧಿಯಲ್ಲಿ ಫೌಂಡ್ರಿ ಸಂಖ್ಯೆಯನ್ನು 5 ಸಾವಿರಕ್ಕೆ ಹೆಚ್ಚಿಸುವ ಉದ್ದೇಶ ಹೊಂದಿದ್ದೇನೆ ಎಂದರು.
ಶಿವಮೊಗ್ಗದ ವಿಜಯಾ ಟೆಕ್ನೊಕ್ಯಾಟ್ಸ್ನ ಡಿ.ಜಿ.ಬೆನಕಪ್ಪ, ಪಿಯರ್‌ಲೈಟ್ ಲೈರ‍್ಸ್ ನ ಅಂಕಿತ್ ದಿವೇಕರ್, ಶ್ರೇಯೋನಿಧಿ ಎಂಟರ್‌ಪ್ರೈಸಸ್‌ನ ಡಿ.ವಿ. ಕಿರಣ್‌ಕುಮಾರ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಫೌಂಡ್ರಿಮೆನ್‌ನ ರಾಷ್ಟ್ರೀಯ ಕೌನ್ಸಿಲ್‌ಗೆ ಚುನಾಯಿತರಾಗಿದ್ದಾರೆ ಎಂದರು.

ಅಧ್ಯಕ್ಷರ ಅಧಿಕಾರಾವಧಿ ಒಂದು ವರ್ಷವಾಗಿರುತ್ತದೆ. ಈ ವರ್ಷ ದಕ್ಷಿಣ ಭಾರತದ ಇಂಡಿಯನ್ ಇನ್ಸ್ಸಿಟ್ಯೂಟ್ ಆಫ್ ಫೌಂಡ್ರಿಮೆನ್ ಪ್ರಾಂತೀಯ ಸಂಸ್ಥೆಯು ಶಿವಮೊಗ್ಗದ ಇಂಡಿಯನ್ ಇನ್ಸಿಟ್ಯೂಟ್ ಆಫ್ ಫೌಂಡ್ರಿಮೆನ್ ಜೊತೆಗೂಡಿ 2024 ರ ಫೆಬ್ರವರಿ 2, 3 ಮತ್ತು 4ರಂದು ಬೆಂಗಳೂರಿನಲ್ಲಿ ಅಂತರ ರಾಷ್ಟ್ರೀಯ 72ನೇ ಸಮಾವೇಶವನ್ನು ನಡೆಸುವ ಜವಾಬ್ದಾರಿಯನ್ನು ಪಡೆದಿದೆ. ಈ ಸಮಾವೇಶದಲ್ಲಿ ರಾಷ್ಟçಮಟ್ಟದ ಇಂಡಿಯನ್ ಇನ್ಸಿಟ್ಯೂಟ್ ಆಫ್ ಫೌಂಡ್ರಿಮೆನ್‌ನ ಸದಸ್ಯರು, ನಾಲ್ಕು ವಿಭಾಗ ಮತ್ತು 26 ಕೇಂದ್ರಗಳವರೂ ಸಹ ಭಾಗವಹಿಸುತ್ತಾರೆ. ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ದಾಮೋದರ್ ಬಾಳಿಗಾ, ಅಂಕಿತ್ ದಿವೇಕರ್, ಡಿ.ಜಿ.ಬೆನಕಪ್ಪ, ಎಂ.ಎನ್.ಸುರೇಶ್, ಎಂ.ವಿ.ರಾಘವೇಂದ್ರ, ಡಾ.ರಾಘವೇಂದ್ರ ಹೆಬ್ಬಾರ್ ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!