ತೀರ್ಥಹಳ್ಳಿ: ತಾಲೂಕಿನ ನೆರಟೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಡೆಮನೆ ಸಂಪರ್ಕ ರಸ್ತೆ ಕಳೆದ ಒಂದು ವಾರದ ಹಿಂದೆ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು ಇದೀಗ ಒಂದು ವಾರಕ್ಕೆ ರಸ್ತೆ ಹಪ್ಪಳದಂತೆ ಕಿತ್ತು ಬಂದಿದೆ.
ಗುರುವಾರ ರಸ್ತೆಯಲ್ಲಿ ಸೇರಿದ ಗ್ರಾಮಸ್ಥರು ಕೈಯಲ್ಲೇ ಟಾರ್ ರಸ್ತೆ ಕಿತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೆರಟೂರು ಗ್ರಾಮ ಪಂಚಾಯತ್ ಹೊರಣಿ ಗ್ರಾಮದ ಜಿಗಳಗೋಡಿನಿಂದ ಕಡೆಮನೆಗೆ ಒಂದೂವರೆ ಕಿ.ಮೀ ಸಂಪರ್ಕ ರಸ್ತೆ ಇದಾಗಿದೆ.
ಸುಮಾರು 28 ಮನೆಗಳಿವೆ. ಶಾಸಕ ಆರಗ ಜ್ಞಾನೇಂದ್ರ ರವರು ಅನುದಾನ ತಂದಿದ್ದಾರೆ. ಆದರೆ ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಿ ಅವರ ಹೆಸರಿಗೆ ಕಳಂಕ ತರುತ್ತಿದ್ದಾರೆ. ಇನ್ನು ರಸ್ತೆಗೆ ಟಾರು ಹಾಕುವಾಗ ಗ್ರಾಮಸ್ಥರಿಗೆ ಮಾಹಿತಿ ನೀಡದೆ ಕಳಪೆ ಹಾಕಲಾಗಿದೆ. ಕಾಲು ಇಂಚು ಕೂಡ ಟಾರು ಹಾಕಿಲ್ಲ. ಇದರಿಂದಾಗಿ ಎಲ್ಲಾ ಕಡೆ ರಸ್ತೆ ಹೊಂಡ ಬಿದ್ದಿದೆ. ತಕ್ಷಣ ಜಿಲ್ಲಾ ಅಧಿಕಾರಿಗಳು, ತಾಲೂಕು ಅಧಿಕಾರಿಗಳು ತನಿಖೆ ನಡೆಸಿ ಕಾಮಗಾರಿ ಸರಿಪಡಿಸಬೇಕು. ಇಲ್ಲವಾದಲ್ಲಿ ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ರಸ್ತೆ ಕಾಮಗಾರಿ ಜತೆಗೆ ರಸ್ತೆ ಅಕ್ಕಪಕ್ಕ ಹಾಕಿದ ಮಣ್ಣು ಕೂಡ ಸರಿಯಾಗಿ ಹಾಕಿಲ್ಲ. ಮಣ್ಣು ಅಲ್ಲಲ್ಲಿ ಹೊಯ್ಯಲಾಗಿದೆ. ಇದು ಮಳೆಗಾಲದಲ್ಲಿ ಕೊಚ್ಚಿ ಹೋಗಿ ಚರಂಡಿಗೆ ಸೇರಲಿದೆ. ಇದರಿಂದ ರಸ್ತೆ ಸಂಪೂರ್ಣ ಹಾಳಾಗಲಿದೆ ಎಂದು ಊರಿನ ಗ್ರಾಮಸ್ಥರು ಆರೋಪಿಸಿದ್ದಾರೆ.