ಶಿವಮೊಗ್ಗ: ವರಮಹಾಲಕ್ಷ್ಮೀ ಪೂಜೆಯ ಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು, ಪೂಜಾ ಸಾಮಗ್ರಿ ಹಾಗೂ ಹಬ್ಬದ ಅಗತ್ಯ ವಸ್ತುಗಳ ಖರೀದಿ ಬಿರುಸಿನಿಂದ ನಡೆಯಿತು.
ಗಾಂಧಿ ಬಜಾರ್, ದುರ್ಗಿಗುಡಿ, ಬಿ.ಎಚ್. ರಸ್ತೆ, ಶಿವಪ್ಪ ನಾಯಕ ಮಾರುಕಟ್ಟೆ ಸೇರಿದಂತೆ ನಗರದ ಪ್ರಮುಖ ವ್ಯಾಪಾರ ಪ್ರದೇಶಗಳಲ್ಲಿ ಗುರುವಾರ ಬೆಳಗ್ಗಿನಿಂದಲೇ ಜನಸಂದಣಿ ಹೆಚ್ಚಾಗಿ ಕಂಡುಬಂತು. ಹಬ್ಬಕ್ಕೆ ಬೇಕಾದ ಹೂವು, ಹಣ್ಣು, ಬಾಳೆಕಂದು, ಮಾವಿನ ಸೊಪ್ಪು, ತೆಂಗಿನಕಾಯಿ, ಅರಿಶಿಣ-ಕುಂಕುಮ, ಬಳೆ ಹಾಗೂ ಪೂಜಾ ಸಾಮಗ್ರಿಗಳನ್ನು ಖರೀದಿಸಲು ಜನರು ಮಾರುಕಟ್ಟೆಗಳತ್ತ ಹರಿದುಬಂದರು.
ದೇವಿ ಪೂಜೆಗೆ ಬಳಸುವ ಹಸಿರು, ಕೆಂಪು ಮತ್ತು ಹಳದಿ ಬಣ್ಣದ ಸೀರೆಗಳಿಗೂ ಬೇಡಿಕೆ ಹೆಚ್ಚಾಗಿತ್ತು. ಮಹಿಳೆಯರು ಪೂಜಾ ಸಾಮಗ್ರಿಗಳ ಜೊತೆಗೆ ಸೀರೆ, ಬಳೆ, ಅಲಂಕಾರ ವಸ್ತುಗಳ ಖರೀದಿಯಲ್ಲಿ ತೊಡಗಿಸಿಕೊಂಡಿದ್ದರು.
ಹಬ್ಬದ ಹಿನ್ನೆಲೆಯಲ್ಲಿ ಹೂವಿನ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ಕನಕಾಂಬರ ಹೂವು ಕೆ.ಜಿಗೆ ₹800ರವರೆಗೆ ಮಾರಾಟವಾಗುತ್ತಿತ್ತು. ಕಾಕಡ ಹೂವು ₹500, ಚೆಂಡು ಹೂವು ₹80 ಹಾಗೂ ಸೇವಂತಿಗೆ ₹300ಕ್ಕೆ ಮಾರಾಟವಾಗುತ್ತಿತ್ತು.
ಹಣ್ಣುಗಳ ಬೆಲೆಯಲ್ಲಿಯೂ ಏರಿಕೆ ಕಂಡುಬಂದಿದ್ದು, ಸೇಬು ಕೆ.ಜಿಗೆ ₹200ರಿಂದ ₹250ರವರೆಗೆ, ದಾಳಿಂಬೆ ₹200, ಏಲಕ್ಕಿ ಬಾಳೆ ₹100 ಹಾಗೂ ದ್ರಾಕ್ಷಿ ₹150ರ ದರದಲ್ಲಿ ಮಾರಾಟವಾಗುತ್ತಿತ್ತು.
ಹಣ್ಣಿನ ಅಂಗಡಿಗಳು, ಹೂವಿನ ಮಳಿಗೆಗಳು, ತರಕಾರಿ ಮಾರುಕಟ್ಟೆ ಹಾಗೂ ಬಳೆ ಅಂಗಡಿಗಳಲ್ಲಿ ಹೆಚ್ಚಿನ ಜನಸಂದಣಿ ಕಂಡುಬಂದಿದ್ದು, ವ್ಯಾಪಾರಿಗಳು ಕೂಡ ಹಬ್ಬದ ಖರೀದಿಯಿಂದ ಸಂತಸ ವ್ಯಕ್ತಪಡಿಸಿದರು.
ವರಮಹಾಲಕ್ಷ್ಮೀ ಪೂಜೆ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಹಬ್ಬದ ಸಂಭ್ರಮ, ಮಾರುಕಟ್ಟೆಗಳಲ್ಲಿ ಖರೀದಿ ಚಟುವಟಿಕೆ ಹಾಗೂ ಜನಜಂಗುಳಿ ಕಂಡುಬಂತು.

