ಶಿವಮೊಗ್ಗ: ನಗರದ ಎನ್‌ಇಎಸ್ ಕಾಲೇಜು ಆವರಣದಲ್ಲಿ ಡಾ. ಶರತ್ ಮರಿಯಪ್ಪ ಫೌಂಡೇಶನ್ ವತಿಯಿಂದ ಮಲೆನಾಡು ಮೆಗಾ ಜಾಬ್‌ಥಾನ್-2026 ಬೃಹತ್ ಉದ್ಯೋಗ ಮೇಳವನ್ನು ಸೆಪ್ಟೆಂಬರ್ 19ರಂದು ಆಯೋಜಿಸಲಾಗಿದೆ.
ಬೆಳಿಗ್ಗೆ 9.30ರಿಂದ ಸಂಜೆ 5 ಗಂಟೆಯವರೆಗೆ ಉದ್ಯೋಗ ಮೇಳ ನಡೆಯಲಿದ್ದು, ನೂರಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ. ಮೇಳದಲ್ಲಿ 3000ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಲಭ್ಯವಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಳದಲ್ಲೇ ನೇಮಕಾತಿ ಪತ್ರ ನೀಡಲಾಗುವುದು ಎಂದು ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಡಾ. ಶರತ್ ಮರಿಯಪ್ಪ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಯೋಗ ಹುಡುಕುತ್ತಿರುವ ಯುವಕರಿಗೆ ಒಂದೇ ಸೂರಿನಡಿ ಹಲವು ಕಂಪನಿಗಳಲ್ಲಿ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಮೇಳವನ್ನು ಆಯೋಜಿಸಲಾಗಿದೆ ಎಂದರು.
ಅಕ್ಷರ ಫೌಂಡೇಶನ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮುಖ್ಯಸ್ಥ ಕುಮಾರ್ ಮಾತನಾಡಿ, ಮೇಳದಲ್ಲಿ ಸಾಫ್ಟ್‌ವೇರ್ ಕಂಪನಿಗಳು, ಹಣಕಾಸು ಸಂಸ್ಥೆಗಳು, ಆಸ್ಪತ್ರೆಗಳು, ನರ್ಸಿಂಗ್, ಮೆಕಾನಿಕಲ್, ಸೆಕ್ಯೂರಿಟಿ, ಹೆಚ್.ಆರ್ ವಿಭಾಗ, ಆಡಳಿತಾತ್ಮಕ ಹುದ್ದೆಗಳು, ಬಿಪಿಒ, ಫಾರ್ಮಸಿ ಸೇರಿದಂತೆ ವಿವಿಧ ಕ್ಷೇತ್ರಗಳ ಕಂಪನಿಗಳು ಭಾಗವಹಿಸಲಿವೆ ಎಂದು ತಿಳಿಸಿದರು.
8ನೇ ತರಗತಿಯಿಂದ ಸ್ನಾತಕೋತ್ತರ ಪದವಿ ಹಾಗೂ ತಾಂತ್ರಿಕ ಕೋರ್ಸ್‌ಗಳಲ್ಲಿ ಉತ್ತೀರ್ಣರಾದ ಉದ್ಯೋಗಾಕಾಂಕ್ಷಿಗಳು ಈ ಮೇಳದಲ್ಲಿ ಭಾಗವಹಿಸಬಹುದು. 18ರಿಂದ 45 ವರ್ಷದವರೆಗಿನ ಅಭ್ಯರ್ಥಿಗಳಿಗೆ ಅವಕಾಶ ಇರಲಿದೆ ಎಂದು ಮಾಹಿತಿ ನೀಡಿದರು.
ಆಯೋಜಕ ರಾಜೇಶ್ ಮಾತನಾಡಿ, ಉದ್ಯೋಗ ಸಂದರ್ಶನಕ್ಕೆ ಸಿದ್ಧರಾಗಲು ಫೌಂಡೇಶನ್ ವತಿಯಿಂದ ತರಬೇತಿ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಚೇತನ್, ವಿಶ್ವಾಸ್ ಕಾಮತ್, ವಿನಯ್, ರಂಗನಾಥ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

