ಐತಿಹಾಸಿಕ-ಧಾರ್ಮಿಕ ಮೌಲ್ಯಗಳ ಅತಿಶಯ ಇಷ್ಟಾರ್ಥ ಸಿದ್ಧಿಗಾಗಿ ಭಕ್ತರ ಶ್ರದ್ಧಾಭಕ್ತಿಗೆ ಆಶ್ರಯ ; ಶ್ರವಣಬೆಳಗೊಳ ಶ್ರೀಗಳು

Written by Mahesha Hindlemane

Published on:

ಹೊಂಬುಜ : “ಪ್ರಾಚೀನ ಜೈನ ತೀರ್ಥಕ್ಷೇತ್ರಗಳಲ್ಲಿ ಹೊಂಬುಜದ ಭಗವಾನ ಶ್ರೀ ಪಾರ್ಶ್ವನಾಥ ತೀರ್ಥಂಕರ, ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಅತಿಶಯವು ಭಕ್ತರಿಗೆ ಇಷ್ಟಾರ್ಥ ಪ್ರಾರ್ಥನೆಯನ್ನು ನೆರವೇರಿಸುವ ಪುಣ್ಯ ಧಾರ್ಮಿಕ ಸಾನಿಧ್ಯವಾಗಿದೆ” ಎಂದು ಶ್ರವಣಬೆಳಗೊಳ ಜೈನ ಮಠದ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರು ಹೊಂಬುಜ ಜಿನಮಂದಿರಗಳ ದರ್ಶನಾರ್ಥ ಆಗಮಿಸಿ, ಧರ್ಮ ಪ್ರವಚನ ನೀಡಿದರು.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಐತಿಹಾಸಿಕ ಮತ್ತು ಜೈನಧರ್ಮ ಪರಂಪರೆಯ ಔನ್ನತ್ಯವನ್ನು ಸಾದರಪಡಿಸಿದ ಅಪೂರ್ವ ಕ್ಷೇತ್ರವಾಗಿದ್ದು, ಪೂರ್ವ ಭಟ್ಟಾರಕದ ಆಶಯಗಳನ್ನು ಪ್ರಸಕ್ತ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಗಳು ಊರ-ಪರವೂರ ಭಕ್ತರ ಸಹಯೋಗದೊಂದಿಗೆ, ಪೂಜ್ಯ ಮುನಿವರ್ಯರ, ಆರ್ಯಿಕೆಯರ, ಭಟ್ಟಾರಕ ಸ್ವಾಮೀಜಿಗಳವರ ಹಾಗೂ ವಿದ್ವಾಂಸರ ಮಾರ್ಗದರ್ಶನದಲ್ಲಿ ಪುನರುಜ್ಜೀವನಗೊಳಿಸುವ ಸದ್ಧರ್ಮ ಸತ್ಕಾರ್ಯವು ಮಾದರಿಯಾಗಿದೆ ಎಂದು ಹೊಂಬುಜ ಕ್ಷೇತ್ರದ ಅಭಿವೃದ್ಧಿ ಕುರಿತು ಶ್ಲಾಘಿಸಿ, ತಮ್ಮ ಸಹಕಾರವೂ ಇದೆಯೆಂದರು.

ಜಗನ್ಮಾತೆ ಶ್ರೀ ಪದ್ಮಾವತಿ ದೇವಿ, ಶ್ರೀ ನೇಮಿನಾಥ ಸ್ವಾಮಿ, ಶ್ರೀ ಪಾರ್ಶ್ವನಾಥ ಸ್ವಾಮಿ, ಶ್ರೀ ಮಹಾವೀರ ಸ್ವಾಮಿ, ಶ್ರೀ ಆದಿನಾಥ ಸ್ವಾಮಿ, ಶ್ರೀ ಕೂಷ್ಮಾಂಡಿನಿ ದೇವಿ, ಶ್ರೀ ಸರಸ್ವತಿ ದೇವಿ, ಶ್ರೀ ಕ್ಷೇತ್ರಪಾಲ ಹಾಗೂ ನಾಗದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಸ್ವಸ್ತಿಶ್ರೀಗಳವರು ತ್ರಿಕೂಟ ಜಿನಾಲಯ ದರ್ಶನ ಮಾಡಿದರು.

ಶ್ರವಣಬೆಳಗೊಳದ ಗುರುಕುಲ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಸೇವಾ ಸಂಘದವರು ಹೊಂಬುಜ ಅತಿಶಯ ಶ್ರೀಕ್ಷೇತ್ರದ ದರ್ಶನ ಮಾಡಿ, ಹೊಂಬುಜ ಶ್ರೀಗಳವರ ಆಶೀರ್ವಾದ ಪಡೆದರು.

ಇದೇ ಸಂದರ್ಭದಲ್ಲಿ ಶ್ರವಣಬೆಳಗೊಳ ಶ್ರೀಗಳವರು ಮಾವಿನ ಹಣ್ಣು ನೀಡುವ ಸಸಿಗಳನ್ನು ಶ್ರೀಕ್ಷೇತ್ರದಲ್ಲಿ ನೆಟ್ಟು, ನೀರುಣಿಸಿ, ಸದಾ ಹಸಿರು ಪರಿಸರ ಶೋಭಾಯಮಾನವಾಗಲೆಂದು ಹರಸಿದರು.

ಹೊಂಬುಜ ಶ್ರೀಗಳವರು ಶ್ರವಣಬೆಳಗೊಳದ ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯರಿಂದ ದೀಕ್ಷಾರ್ಥಿಗಳಾಗಿರುವುದರಿಂದ ಅವರ ದಿವ್ಯ ಮಾರ್ಗದರ್ಶನ, ಅಪೇಕ್ಷೆಗಳನ್ನು ಅನುಷ್ಠಾನಗೊಳಿಸುವ ಯೋಜನೆಗಳಲ್ಲಿ ಜೈನ ಸಮಾಜ, ಸಹಕಾರ ಸಹಯೋಗ ನೀಡುತ್ತಿರಲಿ ಎಂದು ಆಶಿಸುತ್ತಾ ಶ್ರವಣಬೆಳಗೊಳ ಶ್ರೀಗಳವರನ್ನು ಗೌರವಿಸಿ ಸನ್ಮಾನಿಸಿದರು.

Leave a Comment